ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಂತರ್ ಮಂತರ್‌ಗೆ ಅಕ್ರಮ ಪ್ರವೇಶ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಸಿಜೆಪಿ ನಾಯಕರು 5 ದಿನ ತಿಹಾರ್ ಜೈಲಿಗೆ!

ದೆಹಲಿ ಜಂತರ್ ಮಂತರ್‌ಗೆ ಅಕ್ರಮವಾಗಿ ಪ್ರವೇಶಿಸಿ, ಕರ್ತವ್ಯನಿರತ ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕಾಕ್ರೋಚ್ ಜನತಾ ಪಾರ್ಟಿಯ (CJP) ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಕ್ಟೋಬರ್ 13ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಸಿಜೆಪಿಯ 14 ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮತ್ತೊಬ್ಬ ನಾಯಕ ಅಜಿಂಕ್ಯ ಶಿಂಧೆ ಅವರಿಗೆ ವೈಯಕ್ತಿಕ ಬಾಂಡ್ ಪಡೆದು ಷರತ್ತುಬದ್ಧ ಬಿಡುಗಡೆ ನೀಡಲಾಗಿದೆ.

ಸಿಜೆಪಿ ನಾಯಕರ ವಿರುದ್ಧ ಪೊಲೀಸರ ಕ್ರಮ

ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ -

Profile
Sushmitha Jain Oct 14, 2026 7:35 PM

ನವದೆಹಲಿ: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯ ಕೆಲಸಕ್ಕೆ ಅಡ್ಡಿಪಡಿಸಿದ್ದು, ಪದೇಪದೆ ಕಾನೂನು ಉಲ್ಲಂಘನೆ ಮಾಡಿದ್ದು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರನ್ನು ಪ್ರಚೋದಿಸಲು ಯತ್ನಿಸಿದ ಆರೋಪದ ಮೇಲೆ ಕಾಕ್ರೋಚ್ ಜನತಾ ಪಾರ್ಟಿಯ (CJP) ಪ್ರಮುಖ ನಾಯಕರ ವಿರುದ್ಧ ದೆಹಲಿ ಪೊಲೀಸರು (Delhi Police) ಕಠಿಣ ಕ್ರಮ ಕೈಗೊಂಡಿದ್ದಾರೆ. ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ರದ್ದುಗೊಂಡಿದ್ದ ಜಂತರ್ ಮಂತರ್‌ (Jantar Mantar)ಗೆ ಅಕ್ರಮವಾಗಿ ನುಗ್ಗಿದ ಹಿನ್ನೆಲೆಯಲ್ಲಿ ಸಿಜೆಪಿ ನಾಯಕರಾದ ಸೌರವ್ ದಾಸ್ (Sourav Das) ಮತ್ತು ಆಶುತೋಷ್ ರಾಂಕಾ(Ashutosh Ranka) ಅವರನ್ನು 5 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತಿಹಾರ್ ಜೈಲಿ (Tihar Jail)ನ ಕ್ರಮವಾಗಿ 2 ಮತ್ತು 4 ನೇ ಸಂಖ್ಯೆಯ ಪ್ರತ್ಯೇಕ ಜೈಲುಗಳಲ್ಲಿರಿಸಲಾಗಿದೆ.

ಅಕ್ಟೋಬರ್ 13 ರಂದು ದಾಸ್, ರಾಂಕಾ ಮತ್ತು ಅಜಿಂಕ್ಯ ಶಿಂಧೆ ಸೇರಿದಂತೆ ಸಿಜೆಪಿಯ 14 ಸದಸ್ಯರು ಖಾಸಗಿ ಆಸ್ತಿಗಳ ಮೂಲಕ ನಿಷೇಧಿತ ಜಂತರ್ ಮಂತರ್ ಪ್ರವೇಶಿಸಿದ್ದರು. ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಇವರನ್ನು ತಡೆದಾಗ, ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣ ಎಲ್ಲ 14 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು.

ಸಾರ್ವಜನಿಕ ಶಾಂತಿ ಕದಡಲು ಯತ್ನಿಸಿದ್ದು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಅಕ್ರಮ ಚಟುವಟಿಕೆಗಳಿಗೆ ಇತರರನ್ನು ಪ್ರಚೋದಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಈ ಮೂವರನ್ನು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ಮುಂದೆ ಹಾಜರುಪಡಿಸಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 126 ಮತ್ತು 170 ರ ಅಡಿಯಲ್ಲಿ ಪ್ರಕ್ರಿಯೆ ನಡೆಸಿದರು. ಇವರಿಗೆ ಜಾಮೀನು ನೀಡಿದರೆ ಮತ್ತೆ ಕಾನೂನು ಉಲ್ಲಂಘಿಸುವ ಸಾಧ್ಯತೆಯಿದೆ ಎಂಬ ಪೊಲೀಸರ ವರದಿಯನ್ನು ಪರಿಗಣಿಸಿದ ಮ್ಯಾಜಿಸ್ಟ್ರೇಟ್, ದಾಸ್ ಹಾಗೂ ರಾಂಕಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದರು. ಮತ್ತೋರ್ವ ನಾಯಕ ಶಿಂಧೆ ಅವರಿಂದ 5,000 ರೂ. ವೈಯಕ್ತಿಕ ಬಾಂಡ್ ಪಡೆದು, ಆರು ತಿಂಗಳು ಶಾಂತಿ ಕಾಪಾಡುವ ಷರತ್ತಿನ ಮೇಲೆ ಬಿಡುಗಡೆ ಮಾಡಲಾಯಿತು.

ದೆಹಲಿ ಹಿಂಸಾಚಾರ: CJP ಪ್ರತಿಭಟನಾಕಾರರ ಪಾಸ್‌ಪೋರ್ಟ್ ರದ್ದು ಮಾಡಲಾಗುತ್ತಾ? ಪೊಲೀಸರು ಹೇಳಿದ್ದೇನು?

ಈ ಘಟನೆಗೆ ಸಂಬಂಧಿಸಿದಂತೆ ಕನ್ನಾಟ್ ಪ್ಲೇಸ್ ಹಾಗೂ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಈ ನಾಯಕರು ಶನಿವಾರವಷ್ಟೇ ಶಾಂತಿ ಕಾಪಾಡುವುದಾಗಿ ಬಾಂಡ್ ಬರೆದುಕೊಟ್ಟಿದ್ದರೂ, ಮತ್ತೆ ಬ್ಯಾರಿಕೇಡ್ ಮುರಿದು ಅಕ್ರಮವಾಗಿ ನುಗ್ಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 11 ರಂದು ಪೊಲೀಸ್ ಕಮಿಷನರ್ ಅನುರಾಗ್ ಕುಮಾರ್ ಆದೇಶದಂತೆ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಕೈಬಿಡಲಾಗಿದ್ದು, ರಾಮಲೀಲಾ ಮೈದಾನ ಮತ್ತು ಬುರಾರಿ ಮೈದಾನಗಳನ್ನು ನಿಗದಿಪಡಿಸಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ (SIR) ವಿರೋಧಿಸಿ ಈ ಪ್ರತಿಭಟನೆ ನಡೆದಿತ್ತು. ಇನ್ನು ನಾಯಕರ ಬಂಧನವನ್ನು ಖಂಡಿಸಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ, ಜಂತರ್ ಮಂತರ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಕ್ಕಾಗಿ ನಾಯಕರನ್ನು ಜೈಲಿಗೆ ಕಳುಹಿಸಲಾಗಿದ್ದು, ಸರ್ಕಾರವು ವಿರೋಧದ ಧ್ವನಿಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.