ನವದೆಹಲಿ, ಅ. 10: ಉತ್ತರ ಪ್ರದೇಶದ ಬಿಜೆಪಿ ಮಾಜಿ ಶಾಸಕ ವಿಕ್ರಮ್ ಸಿಂಗ್ ಅವರ ಪುತ್ರಿ ಯಶಸ್ವಿನಿ ರಾಜೇ ಸಿಂಗ್ ಅವರನ್ನು ಬಂಧಿಸಲಾಗಿದೆ. ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (Gyanesh Kumar) ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಭಿಜಿತ್ ದೀಪ್ಕೆ (Abhijeet Dipke) ನೇತೃತ್ವದಲ್ಲಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಯ (CJP Protest) ಹಿನ್ನೆಲೆಯಲ್ಲಿ ದೆಹಲಿಯನ್ನು ಕೋಟೆಯಂತೆ ಬಿಗಿ ಭದ್ರತೆಯಿಂದ ಸಜ್ಜುಗೊಳಿಸಲಾಗಿದೆ. 40,000ಕ್ಕೂ ಹೆಚ್ಚು ದೆಹಲಿ ಪೊಲೀಸ್ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಬ್ಯಾರಿಕೇಡ್‌ಗಳು ಮತ್ತು ವಾಹನಗಳ ಸಂಚಾರ ತಡೆಯುವ ಸ್ಪೈಕ್ ಸ್ಟ್ರಿಪ್‌ಗಳನ್ನು ಅಳವಡಿಸಲಾಗಿದೆ.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ. ಬಾಂಗ್ಲಾ ಸಾಹಿಬ್ ಬಳಿಯ ಉದ್ಯಾನವನದಲ್ಲಿ ಕುಳಿತಿದ್ದಕ್ಕಾಗಿ ಯಶಸ್ವಿನಿ ರಾಜೇ ಸಿಂಗ್ ಅವರನ್ನು ಬಂಧಿಸಲಾಗಿದೆ. ಪ್ರಸ್ತುತ ಕೇಶವ್ ಪುರಂ ಪೊಲೀಸ್ ಠಾಣೆಯಲ್ಲಿ ಯಶಸ್ವಿನಿ ಸಿಂಗ್ ಇದ್ದಾರೆ ಎಂದು ಮೂಲಗಳು ತಿಳಿಸಿವೆ.
ಯಶಸ್ವಿನಿ ಸಿಂಗ್ ಉತ್ತರ ಪ್ರದೇಶದ ಫತೇಪುರ್ ಸದರ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಿಜೆಪಿಯ ಪ್ರಮುಖ ನಾಯಕ ಹಾಗೂ ಮಾಜಿ ಶಾಸಕ ವಿಕ್ರಮ್ ಸಿಂಗ್ ಅವರ ಪುತ್ರಿ.
ಪೋಸ್ಟ್ ಇಲ್ಲಿದೆ:
ಇನ್ನು, ಶನಿವಾರ (ಅ. 10) ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಸಿಜೆಪಿಯ ಪ್ರಮುಖ ನಾಯಕರಾದ ಅಭಿಜಿತ್ ದೀಪ್ಕೆ ಹಾಗೂ ಸಹ-ಸಂಚಾಲಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ವಿಮಾನದೊಳಗೆ ಬಂಧಿಸಲಾಯಿತು.
ಮಹಾತ್ಮ ಗಾಂಧಿ ಮರಿಮೊಮ್ಮಗ ತುಷಾರ್ ಗಾಂಧಿ ಮುಂಬೈಯಲ್ಲಿ ಪೊಲೀಸ್ ವಶಕ್ಕೆ
ಈ ಮಧ್ಯೆ ಎಡರಂಗದ ನಾಯಕರಾದ ಎಂಎ ಬೇಬಿ, ಪಿಣರಾಯಿ ವಿಜಯನ್, ಎಂ.ವಿ. ಗೋವಿಂದನ್ ಮಾಸ್ಟರ್, ಎ. ವಿಜಯ ರಾಘವನ್, ಕೆ.ಕೆ. ಶೈಲಜಾ, ಜಾನ್ ಬ್ರಿಟಾಸ್ ಎಂ.ಪಿ., ಕೆ.ಎನ್. ಬಾಲಗೋಪಾಲ್, ಬೃಂದಾ ಕಾರಟ್ ಮತ್ತು ಪಿ.ಕೆ. ಶ್ರೀಮತಿ ಸೇರಿ ಪಕ್ಷದ ನಾಯಕರನ್ನು ಜಂತರ್ ಮಂತರ್‌ಗೆ ಆಗಮಿಸಿದ ನಂತರ ಬಂಧಿಸಲಾಯಿತು ಎಂದು ಸಿಪಿಐ(ಎಂ) ಕೇರಳಂ ಎಕ್ಸ್‌ನಲ್ಲಿ ಹೇಳಿದೆ.
ದೆಹಲಿಯಲ್ಲಿ 40,000 ಪೊಲೀಸರ ನಿಯೋಜನೆ
ಪ್ರತಿಭಟನೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯನ್ನು ಕೋಟೆಯಾಗಿ ಪರಿವರ್ತಿಸಲಾಗಿದ್ದು, ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರನ್ನು ತಡೆಯಲು 40,000ಕ್ಕೂ ಹೆಚ್ಚು ಪೊಲೀಸರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.