ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿಯಲ್ಲಿ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅರೆಸ್ಟ್‌; ಮಹಾರಾಷ್ಟ್ರದಲ್ಲಿ ಅಜ್ಜಿ ನಿಧನ

Abhijeet Dipke: ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಅಜ್ಜಿ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸಂತುಕ್ ಪಿಂಪ್ರಿ ಗ್ರಾಮದಲ್ಲಿ ನಿಧನರಾಗಿದ್ದಾರೆ. ಅಭಿಜಿತ್‌ ದೀಪ್ಕೆ ಅವರ ತಂದೆ ಭಗವಾನ್ ದಿಪ್ಕೆ ಅವರ ತಾಯಿಯಾಗಿದ್ದರು. ಅಜ್ಜಿ ಮೃತಪಟ್ಟ ಸಮಯದಲ್ಲಿ ಅಭಿಜೀತ್ ದಿಪ್ಕೆ ದೆಹಲಿಯಲ್ಲಿದ್ದರು.

ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅಜ್ಜಿ ನಿಧನ

ಅಜ್ಜಿಯೊಂದಿಗೆ ಅಭಿಜಿತ್ ದೀಪ್ಕೆ (ಸಂಗ್ರಹ ಚಿತ್ರ) -

Priyanka P
Priyanka P Oct 10, 2026 5:10 PM

ಮುಂಬೈ, ಅ. 10: ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ (Abhijeet Dipke) ಅವರ ಅಜ್ಜಿ ಸಾವಿತ್ರಿಬಾಯಿ ಶಂಕರ್‌ರಾವ್‌ ದೀಪ್ಕೆ (Savitribai Shankarrao Dipke) ಮಹಾರಾಷ್ಟ್ರದ (Maharashtra) ಹಿಂಗೋಲಿ ಜಿಲ್ಲೆಯ ಸಂತುಕ್ ಪಿಂಪ್ರಿ ಗ್ರಾಮದಲ್ಲಿ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯ ಮತ್ತು ವಯೋಸಹಜ ಕಾಯಿಲೆಗಳಿಂದಾಗಿ ಅವರು ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು. ಅಭಿಜಿತ್‌ ದೀಪ್ಕೆ ಅವರ ತಂದೆ ಭಗವಾನ್ ದೀಪ್ಕೆ ಅವರ ತಾಯಿ ಸಾವಿತ್ರಿಬಾಯಿ. ಅಜ್ಜಿ ಮೃತಪಟ್ಟ ಸಮಯದಲ್ಲಿ ಅಭಿಜಿತ್ ದೀಪ್ಕೆ ದೆಹಲಿಯಲ್ಲಿದ್ದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ದೀಪ್ಕೆ ಶನಿವಾರ (ಅಕ್ಟೋಬರ್‌ 10) ಬೆಳಗ್ಗೆ ಮುಂಬೈಯಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ದೆಹಲಿ ವಿಮಾನ ನಿಲ್ದಾಣದಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಅಭಿಜಿತ್‌ ಅವರ ಪೋಷಕರಾದ ಅನಿತಾ ಮತ್ತು ಭಗವಾನ್ ದೀಪ್ಕೆ ಪ್ರಸ್ತುತ ಛತ್ರಪತಿ ಸಂಭಾಜಿನಗರದಲ್ಲಿದ್ದು, ಅವರ ಮನೆಯ ಹೊರಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಜ್ಜಿಯ ಸಾವಿನ ಸುದ್ದಿ ತಿಳಿದ ನಂತರ, ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತಕ್ಷಣ ಹಿಂಗೋಲಿಗೆ ತೆರಳುವ ನಿರೀಕ್ಷೆಯಿದೆ.

ಅಜ್ಜಿ ನಿಧನರಾದ ವಿಷಯ ತಿಳಿದ ಬಳಿಕ ಛತ್ರಪತಿ ಸಂಭಾಜಿನಗರ ಅಥವಾ ಹಿಂಗೋಲಿಗೆ ತೆರಳಲು ದೆಹಲಿ ಪೊಲೀಸರು ಅಭಿಜಿತ್‌ ಅವರಿಗೆ ಅನುಮತಿ ನೀಡುತ್ತಾರೆಯೇ ಎಂಬ ಬಗ್ಗೆ ಪ್ರಶ್ನೆ ಮೂಡಿದೆ. ಅಭಿಜಿತ್‌ ಅವರ ಬಿಡುಗಡೆ ಅಥವಾ ಪ್ರಯಾಣದ ವ್ಯವಸ್ಥೆಗಳ ಕುರಿತು ಹೆಚ್ಚಿನ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ.

ಅಭಿಜಿತ್ ದೀಪ್ಕೆ ಬಂಧನದ ಬೆನ್ನಲ್ಲೇ ಜಂತರ್ ಮಂತರ್ ಪ್ರತಿಭಟನೆಯ ನೇತೃತ್ವ ವಹಿಸಿರುವ ಅಜಿಂಕ್ಯ ಶಿಂಧೆ ಯಾರು?

ಶನಿವಾರ ಬೆಳಗ್ಗೆ ಅಭಿಜಿತ್ ದೀಪ್ಕೆ ಮತ್ತು ಇತರ ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆದ ಬಳಿಕ, ದೆಹಲಿ ಪೊಲೀಸ್ ಸಿಬ್ಬಂದಿ ಒಳಗೆ ಪ್ರವೇಶಿಸಿ ವಶಕ್ಕೆ ಪಡೆದರು.

ವಿಮಾನದಲ್ಲೇ ತಮ್ಮನ್ನು ಹಾಗೂ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದ ಸಂದರ್ಭದಲ್ಲಿ ದೆಹಲಿ ಪೊಲೀಸ್ ತಂಡ ವಿಮಾನದೊಳಗೆ ಪ್ರವೇಶಿಸುತ್ತಿರುವ ದೃಶ್ಯವನ್ನು ಅಭಿಜಿತ್‌ ದೀಪ್ಕೆ ವಿಡಿಯೊ ಚಿತ್ರೀಕರಿಸಿ ಪೋಸ್ಟ್ ಮಾಡಿದ್ದರು.

ಸಿಜೆಪಿ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅಭಿಜಿತ್ ದೀಪ್ಕೆ, ಸೌರವ್ ದಾಸ್, ಅಶುತೋಷ್ ರಂಕಾ ಬಂಧಿಸಲಾಗಿದೆ ಎಂದು ಪೋಸ್ಟ್ ಮಾಡಿದೆ. ದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಮೇಲೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಜಂತರ್ ಮಂತರ್‌ನಲ್ಲಿ ಸಿಜೆಪಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಮುಂಚಿತವಾಗಿ ಅವರನ್ನು ಬಂಧಿಸಲಾಯಿತು.