ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಘೋರ ದುರಂತ; ಶಾಲಾ ಬಸ್ಸಿನ ತೂತಾದ ತಳಭಾಗದಿಂದ ಬಿದ್ದು 1ನೇ ತರಗತಿ ವಿದ್ಯಾರ್ಥಿನಿ ಸಾವು

ಉತ್ತರ ಪ್ರದೇಶದ ಆಗ್ರಾದಲ್ಲಿ ಶಾಲಾ ಬಸ್ಸಿನ ತಳಭಾಗದಲ್ಲಿ ಉಂಟಾಗಿದ್ದ ರಂಧ್ರದಿಂದ ಕೆಳಕ್ಕೆ ಬಿದ್ದ ಒಂದನೇ ತರಗತಿಯ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಆಘಾತಕಾರಿ ಘಟನೆ ನಡೆದಿದೆ. ಬಸ್ ಮಕ್ಕಳನ್ನು ಮನೆಗೆ ಬಿಡಲು ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಘಟನೆಯ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಬಸ್ಸನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. 15 ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ಇದೇ ರೀತಿಯ ಎರಡನೇ ಘಟನೆ ಆಗಿರುವುದು ಆತಂಕ ಹುಟ್ಟಿಸಿದೆ.

ಸಾಂದರ್ಭಿಕ ಚಿತ್ರ

ಲಖನೌ, ಮಾ. 13: ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿ (Agra) ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ಪುಟ್ಟ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ. ಚಲಿಸುತ್ತಿದ್ದ ಶಾಲಾ ಬಸ್ಸಿನ ತೂತಾದ ತಳಭಾಗದಿಂದ (Floorboard) ಆಕಸ್ಮಿಕವಾಗಿ ಬಿದ್ದ ಒಂದನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಅದೇ ಬಸ್ಸಿನ ಹಿಂದಿನ ಚಕ್ರಗಳು ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.ಎತ್ಮಾದ್‌ಪುರ (Etmadpur) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಗುರುವಾರ ಮಾಹಿತಿ ನೀಡಿದ್ದಾರೆ.

ಘಟನೆಯ ವಿವರ

ಬುಧವಾರ (ಮಾರ್ಚ್‌ 11) ಅಪರಾಹ್ನ ಸುಮಾರು 3 ಗಂಟೆಗೆ 'ಆರ್‌ಬಿಎಸ್ʼ ಶಾಲೆಯ ಬಸ್ ಮಕ್ಕಳನ್ನು ಮನೆಗೆ ಬಿಡಲು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಪಶ್ಚಿಮ ಆಗ್ರಾದ ಉಪ ಪೊಲೀಸ್ ಕಮಿಷನರ್ ಆದಿತ್ಯ ತಿಳಿಸಿದ್ದಾರೆ. ಬಸ್ಸಿನ ತಳಭಾಗದ ಕಬ್ಬಿಣದ ಹಾಳೆ ತುಕ್ಕು ಹಿಡಿದು ಕಿತ್ತು ಹೋಗಿ ರಂಧ್ರವಾಗಿತ್ತು. ಬಸ್ಸಿನಲ್ಲಿದ್ದ ನೈನಾ ಎಂಬ ಬಾಲಕಿ ಆ ತೂತಿನ ಮೇಲೆ ಕಾಲಿಟ್ಟಾಗ ದಿಢೀರನೆ ಕುಸಿದು ರಸ್ತೆಗೆ ಬಿದ್ದಿದ್ದಾಳೆ. ಆಕೆ ಕೆಳಕ್ಕೆ ಬೀಳುತ್ತಿದ್ದಂತೆಯೇ ಬಸ್ಸಿನ ಹಿಂದಿನ ಚಕ್ರ ಆಕೆಯ ಮೇಲೆ ಹರಿದಿದೆ. ಇತರ ಮಕ್ಕಳು ಜೋರಾಗಿ ಕಿರುಚಿದಾಗ ಚಾಲಕ ಬಸ್ಸನ್ನು ನಿಲ್ಲಿಸಿದನಾದರೂ, ನಂತರ ಭಯಗೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಈಗ ಬಸ್ಸನ್ನು ವಶಕ್ಕೆ ಪಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಎಲ್‌ಪಿಜಿ ಕೊರತೆ ಬಗ್ಗೆ 5 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಜ್ಯೋತಿಷಿ

ಮರುಕಳಿಸಿದ ದುರಂತ

ಆಘಾತಕಾರಿ ವಿಷಯವೆಂದರೆ, ಉತ್ತರ ಪ್ರದೇಶದಲ್ಲಿ 15 ದಿನಗಳಲ್ಲಿ ನಡೆದ ಈ ರೀತಿಯ ಎರಡನೇ ಘಟನೆ ಇದಾಗಿದೆ. ಫೆಬ್ರವರಿ 28ರಂದು ಅಲಿಗಢದಲ್ಲಿಯೂ ಸಹ ಏಳು ವರ್ಷದ ಬಾಲಕಿಯೊಬ್ಬಳು ಶಾಲಾ ಬಸ್ಸಿನ ತಳಭಾಗದ ಇದೇ ರೀತಿಯ ರಂಧ್ರದಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಳು. ಆ ಘಟನೆಯಲ್ಲಿ ಶಾಲೆಯ ಮ್ಯಾನೇಜರ್ ಅರವಿಂದ್ ಯಾದವ್ ಮತ್ತು ಚಾಲಕನ ನಿರ್ಲಕ್ಷ್ಯದ ವಿರುದ್ಧ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಿದ್ದರು. ಶಾಲಾ ವಾಹನಗಳ ಸುಸ್ಥಿತಿಯ ಬಗ್ಗೆ ಆಡಳಿತ ಮಂಡಳಿಗಳು ತೋರುತ್ತಿರುವ ಭೀಕರ ನಿರ್ಲಕ್ಷ್ಯ ಮತ್ತು ನಿಯಮಿತ ತಪಾಸಣೆಯ ಕೊರತೆಯು ಪೋಷಕರಲ್ಲಿ ಭೀತಿ ಹುಟ್ಟಿಸಿದೆ.