ಶ್ರೀನಗರ, ಜು. 1: ಜಮ್ಮು ಮತ್ತು ಕಾಶ್ಮೀರದ (Jammu-Kashmir) ದೋಡಾ ಜಿಲ್ಲೆಯ ಕೆಲವು ಭಾಗಗಳಲ್ಲಿ ಮೇಘಸ್ಫೋಟದಿಂದ (Cloudburst) ಹಠಾತ್ ಪ್ರವಾಹ ಉಂಟಾಗಿದ್ದು, ಭಲೇಸಾ ಪ್ರದೇಶವು ಹೆಚ್ಚು ಹಾನಿಗೊಳಗಾಗಿದೆ. ಮಣ್ಣು ಮತ್ತು ಅವಶೇಷಗಳನ್ನು ಹೊತ್ತೊಯ್ಯುವ ಧಾರಾಕಾರ ಪ್ರವಾಹದ ನೀರು ರಸ್ತೆಗಳ ಮೇಲೆ ಹರಿಯುತ್ತಿದ್ದು, ಹಲವು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಅಧಿಕಾರಿಗಳು ತೆರವು ಕಾರ್ಯಾಚರಣೆಗಳನ್ನು ಪ್ರಾರಂಭಿಸಲು, ಆಗಿರುವ ಹಾನಿಯ ಪ್ರಮಾನ ತಿಳಿದುಕೊಳ್ಳಲು ಮುಂದಾಗಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ಪ್ರಯಾಣ ಮಾಡದಂತೆ ಜನರಿಗೆ ಸಲಹೆ ನೀಡಿದ್ದಾರೆ.
ದಿಢೀರ್ ಪ್ರವಾಹ, ರಸ್ತೆಗಳು ಜಾರುತ್ತಿರುವುದು ಮತ್ತು ಭಾರಿ ಮಳೆಯ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ, ಕಿಸ್ತ್ವಾಡದಲ್ಲಿ ನಡೆಯುವ ಮಚೈಲ್ ಮಾತಾ ಯಾತ್ರೆ ಮತ್ತು ಮಿಂಧಾಲ್ ಮಾತಾ ಯಾತ್ರೆಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ. ಭಕ್ತರು ಈ ತೀರ್ಥಯಾತ್ರೆಯನ್ನು ಕೈಗೊಳ್ಳಬಾರದು. ಮುಂದಿನ ಮಾಹಿತಿಗಾಗಿ ಸ್ಥಳೀಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಸಲಹೆ ನೀಡಲಾಗಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕಂಡು ಬಂದ ಪ್ರವಾಹ:
ಕಳೆದ ವರ್ಷ, ಕಿಶ್ತ್ವಾರ್ ಜಿಲ್ಲೆಯ ಚೋಸಿಟಿ ಗ್ರಾಮದಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಇಬ್ಬರು ಸಿಬ್ಬಂದಿ ಸೇರಿ ಕನಿಷ್ಠ 45 ಮಂದಿ ಮೃತಪಟ್ಟು, 167 ಜನರು ಗಾಯಗೊಂಡಿದ್ದರು. ದಿಢೀರ್ ಪ್ರವಾಹ ಉಂಟಾಗಿ ವ್ಯಾಪಕ ನಷ್ಟ ಸಂಭವಿಸಿತ್ತು.
ಅರುಣಾಚಲ ಪ್ರದೇಶದಲ್ಲಿ ಮೇಘಸ್ಫೋಟ, ಭೀಕರ ಪ್ರವಾಹ; ಮಣ್ಣಿನ ರಾಶಿಯೊಂದಿಗೆ ಕೊಚ್ಚಿ ಹೋದ ಬೈಕ್ ಸವಾರ
ಸದ್ಯ ರಕ್ಷಣಾ ತಂಡಗಳು ಸಂತ್ರಸ್ತರನ್ನು ಹುಡುಕುವ ಪ್ರಯತ್ನಗಳನ್ನು ಮುಂದುವರಿಸಿದ್ದು, 220ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಹಿಮಾಲಯದ ಮಾತಾ ಚಂಡಿ ದೇವಾಲಯಕ್ಕೆ ಮಚೈಲ್ ಮಾತಾ ಯಾತ್ರೆ ಸಾಗುವ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ತೀರ್ಥಯಾತ್ರೆ ಮಾರ್ಗವನ್ನು ಅಸ್ತವ್ಯಸ್ತಗೊಳಿಸಿದೆ.
ಜುಲೈ 25ರಂದು ಗುಲಾಬ್‌ಗಢ ಪಟ್ಟಣದಿಂದ ಪ್ರಾರಂಭವಾದ ಯಾತ್ರೆಯಲ್ಲಿ ಸುಮಾರು 17 ಕಿ.ಮೀ. ದೂರ ಕ್ರಮಿಸಿದ್ದ ಯಾತ್ರಿಕರು ಪ್ರವಾಹದಿಂದ ತೊಂದರೆಗೀಡಾದರು. ದೇವಾಲಯದಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಚಶೋತಿ ಗ್ರಾಮದಲ್ಲಿನ ಮನೆಗಳು ಮತ್ತು ಯಾತ್ರಿಕರು ಬಳಸುತ್ತಿದ್ದ ತಾತ್ಕಾಲಿಕ ಶಿಬಿರಗಳಿಗೆ ಮಣ್ಣು ಮಿಶ್ರಿತ ಪ್ರವಾಹದ ನೀರು ನುಗ್ಗಿತು. ಹಠಾತ್ ಪ್ರವಾಹದಿಂದ ಹಲವು ಪ್ರದೇಶಗಳು ಹಾನಿಗೊಳಗಾದವು.
ಇನ್ನು ಈ ಘಟನೆಯಲ್ಲಿ ಮೃತಪಟ್ಟವರಲ್ಲಿ ಇಬ್ಬರು ಸಿಐಎಸ್‌ಎಫ್ ಯೋಧರು ಸೇರಿದ್ದಾರೆ. ಮೇಘಸ್ಫೋಟದ ನಂತರ 220ಕ್ಕೂ ಹೆಚ್ಚು ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹದಲ್ಲಿ ಸಿಲುಕಿರುವ ಅಥವಾ ಕೊಚ್ಚಿಹೋದವರನ್ನು ಹುಡುಕಲು ರಕ್ಷಣಾ ತಂಡಗಳು ಧಾವಿಸಿವೆ.
ದೇಶದ ಪರ್ವತ ಪ್ರದೇಶಗಳಲ್ಲಿ ಮೇಘಸ್ಫೋಟಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ತೇವಾಂಶ ಭರಿತ ಗಾಳಿಯು ಮೇಲಕ್ಕೆದ್ದು, ಪರ್ವತದ ಶಿಖರಗಳ ಕಾರಣದಿಂದಾಗಿ ಮತ್ತಷ್ಟು ಎತ್ತರಕ್ಕೆ ತಳ್ಳಲ್ಪಟ್ಟಾಗ ಈ ಪ್ರಕ್ರಿಯೆ ಸಂಭವಿಸುತ್ತದೆ. ಅಲ್ಲಿ ತಾಪಮಾನವು ಇದ್ದಕ್ಕಿದ್ದಂತೆ ಕುಸಿತಗೊಂಡು ತೇವಾಂಶವು ಘನೀಕರಣಗೊಂಡು ಭಾರಿ ಮಳೆಯಾಗಿ ಸುರಿಯುತ್ತದೆ.