ಅರುಣಾಚಲ ಪ್ರದೇಶದಲ್ಲಿ ಮೇಘಸ್ಫೋಟ, ಭೀಕರ ಪ್ರವಾಹ; ಮಣ್ಣಿನ ರಾಶಿಯೊಂದಿಗೆ ಕೊಚ್ಚಿ ಹೋದ ಬೈಕ್ ಸವಾರ: ಭೀಕರ ವಿಡಿಯೊ ವೈರಲ್
ಅರುಣಾಚಲ ಪ್ರದೇಶದ ಲೋವರ್ ಸಿಯಾಂಗ್ ಜಿಲ್ಲೆಯ ಸಿಜಿ ಪ್ರದೇಶದಲ್ಲಿ ಭಾರೀ ಮಳೆಯಿಂದ ಗುಡ್ಡದ ರಸ್ತೆ ಏಕಾಏಕಿ ಕುಸಿದ ಪರಿಣಾಮ ಬೈಕ್ ಸವಾರನೊಬ್ಬ ಮಣ್ಣು, ಬಂಡೆ ಹಾಗೂ ಅವಶೇಷಗಳೊಂದಿಗೆ ಕೊಚ್ಚಿಹೋದ ಘಟನೆ ನಡೆದಿದೆ. ಅದೃಷ್ಟವಶಾತ್ ಆತ ಯಾವುದೇ ಗಂಭೀರ ಗಾಯಗಳಿಲ್ಲದೆ ಬದುಕುಳಿದಿದ್ದಾನೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭೂಕುಸಿತದಿಂದ ಸಿಜಿ ನದಿಯ ಹರಿವಿಗೂ ತಾತ್ಕಾಲಿಕ ಅಡ್ಡಿಯಾಗಿದೆ. ಇದೇ ವೇಳೆ ಜೂನ್ 24ರ ಮೋಡ ಸ್ಫೋಟದ ಬಳಿಕ ರಾಷ್ಟ್ರೀಯ ಹೆದ್ದಾರಿ-13 ಬಂದ್ ಆಗಿರುವುದರಿಂದ ರಾಜ್ಯದ ಏಳು ಜಿಲ್ಲೆಗಳ ಸಂಪರ್ಕ ಕಡಿತಗೊಂಡಿದೆ.
ಅರುಣಾಚಲ ಪ್ರದೇಶದಲ್ಲಿ ಸಂಭವಿಸಿದ ಭೀಕರ ಭೂಕುಸಿತ -
ಇಟಾನಗರ, ಜೂ. 29: ಅರುಣಾಚಲ ಪ್ರದೇಶದ ಲೋವರ್ ಸಿಯಾಂಗ್ (Lower Siang) ಜಿಲ್ಲೆಯ ಸಿಜಿ (Siji) ಪ್ರದೇಶದಲ್ಲಿ ಭಾರಿ ಮಳೆಯಿಂದ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಬೈಕ್ ಸವಾರನೊಬ್ಬ ಮಣ್ಣು, ಬಂಡೆ ಹಾಗೂ ಅವಶೇಷಗಳೊಂದಿಗೆ ಗುಡ್ಡದ ಇಳಿಜಾರಿನತ್ತ ಕೊಚ್ಚಿ ಹೋದರೂ, ಪವಾಡಸದೃಶವಾಗಿ ಯಾವುದೇ ಗಂಭೀರ ಗಾಯಗಳಿಲ್ಲದೆ ಬದುಕುಳಿದ ಘಟನೆ ನಡೆದಿದೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ. ಜೂನ್ 28ರಂದು ಈ ಘಟನೆ ನಡೆದಿದೆ.
ವಿಡಿಯೊದಲ್ಲಿ ಕಾಣುವಂತೆ, ನಿರಂತರ ಮಳೆಯಿಂದ ಕೆಸರಿನಿಂದ ಆವೃತವಾಗಿದ್ದ ಕಿರಿದಾದ ಗುಡ್ಡದ ರಸ್ತೆಯಲ್ಲಿ ಬೈಕ್ ಸವಾರ ಅತ್ಯಂತ ಎಚ್ಚರಿಕೆಯಿಂದ ಸಾಗುತ್ತಿದ್ದಾನೆ. ಇದೇ ವೇಳೆ ಏಕಾಏಕಿ ರಸ್ತೆಯ ಕೆಳಭಾಗ ಕುಸಿದು, ಮಣ್ಣು, ಬಂಡೆಗಳು ಹಾಗೂ ಅವಶೇಷಗಳು ಭಾರೀ ವೇಗದಲ್ಲಿ ಕೆಳಕ್ಕೆ ಜಾರಲಾರಂಭಿಸುತ್ತವೆ. ಕೆಲವೇ ಕ್ಷಣಗಳಲ್ಲಿ ಬೈಕ್ ಹಾಗೂ ಸವಾರ ಇಬ್ಬರೂ ಭೂಕುಸಿತದೊಂದಿಗೆ ಇಳಿಜಾರಿನತ್ತ ಕೊಚ್ಚಿಹೋಗಿದ್ದಾರೆ.
ವಿಡಿಯೊ ಇಲ್ಲಿದೆ:
Hair raising video from Arunachal Pradesh shows a biker riding a landslide (28.06.2026)
— Kyang Thang རྐྱང་ཐང་ (@Kyangs_Thang) June 28, 2026
Amidst incessant rains across NE India, a video from Siji, Lower Siang shows a landslide carrying a biker down with it & blocking the Siji River.
Luckily, the biker escaped unharmed. He… pic.twitter.com/ypRiZRQjQJ
ಅದೃಷ್ಟವಶಾತ್, ಭೀಕರ ಅಪಘಾತದ ನಡುವೆಯೂ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದೃಶ್ಯವನ್ನು ಕಂಡ ಸಾಮಾಜಿಕ ಜಾಲತಾಣ ಬಳಕೆದಾರರು "ಇದು ಎರಡನೇ ಜನ್ಮ", "ಇಂತಹ ಅದೃಷ್ಟ ಯಾರಿಗೂ ಸಿಗುವುದಿಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ.
ಸಿಜಿ ನದಿಯ ಹರಿವಿಗೂ ಅಡ್ಡಿಯಾದ ಭೂಕುಸಿತ
ಭೂಕುಸಿತದಿಂದ ಅಪಾರ ಪ್ರಮಾಣದ ಮಣ್ಣು ಮತ್ತು ಬಂಡೆಗಳು ಸಿಜಿ ನದಿಯ ಹರಿವನ್ನು ತಾತ್ಕಾಲಿಕವಾಗಿ ತಡೆದಿವೆ. ಇದರಿಂದ ಪ್ರವಾಹದ ಅಪಾಯ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಮತ್ತಷ್ಟು ಭೂಕುಸಿತ ಸಂಭವಿಸುವ ಸಾಧ್ಯತೆಯೂ ಇರುವುದರಿಂದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
3 ತಿಂಗಳ ಹಿಂದೆಯೇ ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳವು ಪತ್ತೆ ಹಚ್ಚಿದ್ದ ಎಸ್‌ಬಿಐ
ಸ್ಫೋಟದ ಬಳಿಕ ರಾಜ್ಯದಲ್ಲಿ ಪರಿಸ್ಥಿತಿ ಗಂಭೀರ
ಜೂನ್ 24ರಂದು ಅರುಣಾಚಲ ಪ್ರದೇಶದ ಕೇಯಿ ಪನ್ಯೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಮೋಘಸ್ಫೋಟ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಹಾನಿ ಉಂಟುಮಾಡಿತ್ತು. ಭೂಕುಸಿತ, ಹಠಾತ್ ಪ್ರವಾಹ ಮತ್ತು ರಸ್ತೆ ಕೊಚ್ಚಿಹೋಗುವ ಘಟನೆಗಳಲ್ಲಿ 3 ಮಂದಿ ಮೃತಪಟ್ಟಿದ್ದು, ಇಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ. ಅಲ್ಲದೆ NEEPCO ಕಾಲೋನಿಯ 18 ವಸತಿ ಕಟ್ಟಡಗಳು ಸಂಪೂರ್ಣವಾಗಿ ನಾಶವಾಗಿವೆ.
ಏಳು ಜಿಲ್ಲೆಗಳ ಸಂಪರ್ಕ ಕಡಿತ
ಭೂಕುಸಿತದಿಂದ ರಾಜ್ಯದ ಪ್ರಮುಖ ಸಂಪರ್ಕ ಮಾರ್ಗವಾದ ರಾಷ್ಟ್ರೀಯ ಹೆದ್ದಾರಿ-13 (NH-13)ರ ಹೋಜ್–ಪೋಟಿನ್ (Hoj–Potin) ರಸ್ತೆ ಸಂಪೂರ್ಣ ಬಂದ್ ಆಗಿದೆ. ಇದರ ಪರಿಣಾಮ ಕೇಯಿ ಪನ್ಯೋರ್, ಲೋವರ್ ಸುಬನ್ಸಿರಿ, ಕುರುಂಗ್ ಕುಮೇ, ಕ್ರಾ ದಾದಿ, ಕಾಮ್ಲೆ, ಅಪ್ಪರ್ ಸುಬನ್ಸಿರಿ ಸೇರಿದಂತೆ ಏಳು ಜಿಲ್ಲೆಗಳ ಸಂಪರ್ಕ ಕಡಿತಗೊಂಡಿದ್ದು, ಅಗತ್ಯ ವಸ್ತುಗಳ ಸಾಗಣೆಯ ಮೇಲೂ ಪರಿಣಾಮ ಬೀರಿದೆ.
ಪುನಃಸ್ಥಾಪನೆಗೆ ಇನ್ನೂ ಸಮಯ ಬೇಕು
ಸಾರ್ವಜನಿಕ ಕಾಮಗಾರಿ ಇಲಾಖೆ (PWD) ಜೆಸಿಬಿ ಹಾಗೂ ಭಾರಿ ಯಂತ್ರೋಪಕರಣಗಳ ಮೂಲಕ ರಸ್ತೆ ತೆರವು ಕಾರ್ಯ ನಡೆಸುತ್ತಿದೆ. ಆದರೆ ನಿರಂತರ ಮಳೆಯಿಂದ ಹೊಸ ಹೊಸ ಭೂಕುಸಿತಗಳು ಸಂಭವಿಸುತ್ತಿರುವುದರಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಕೆಲವೆಡೆ 40–50 ಮೀಟರ್ ಆಳದ ಕಂದಕಗಳು ನಿರ್ಮಾಣವಾಗಿರುವುದರಿಂದ ಸಂಪೂರ್ಣ ರಸ್ತೆ ಪುನರ್‌ನಿರ್ಮಾಣಕ್ಕೆ ಕನಿಷ್ಠ ಒಂದು ತಿಂಗಳು ಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳು ಜನರು ಹಾಗೂ ಪ್ರವಾಸಿಗರು ಗುಡ್ಡ ಪ್ರದೇಶಗಳಲ್ಲಿನ ಅನಗತ್ಯ ಪ್ರಯಾಣವನ್ನು ತಪ್ಪಿಸಿ, ಭೂಕುಸಿತ ಸಂಭವಿಸಬಹುದಾದ ಪ್ರದೇಶಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ಸಂಚರಿಸುವಂತೆ ಮನವಿ ಮಾಡಿದ್ದಾರೆ.