ನವದೆಹಲಿ, ಜು. 28: ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕಾಕ್ರೋಚ್ ಜನತಾ ಪಾರ್ಟಿ (Cockroach Janata Party) ಕಾರ್ಯಕರ್ತರು ಪಾರ್ಟಿ ಮಾಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಜಯವು ಯಾವಾಗಲೂ ವಿನಯದಿಂದ ಕೂಡಿರಬೇಕು. ಘನತೆ, ಸಂಯಮ ಮತ್ತು ಜವಾಬ್ದಾರಿಯಿಂದ ವಿಜಯೋತ್ಸವ ಆಚರಿಸುವಂತೆ ಅವರು ಬೆಂಬಲಿಗರಿಗೆ ಕರೆ ನೀಡಿದರು.
ಗೌರವ ಮತ್ತು ವಿನಯತೆಯನ್ನು ಕಾಪಾಡಿಕೊಳ್ಳುವುದು ಯಶಸ್ಸನ್ನು ಸಾಧಿಸುವಷ್ಟೇ ಮುಖ್ಯ ಎಂದು ಸೋನಮ್ ವಾಂಗ್ಚುಕ್ ಹೇಳಿದರು. ಒಂದು ತಿಂಗಳಿನಿಂದ ನಡೆದ ಪ್ರತಿಭಟನೆಯನ್ನು ಹಿಂತೆಗೆದುಕೊಂಡ ಕೆಲವೇ ಗಂಟೆಗಳಲ್ಲಿ ಸಿಜೆಪಿಯ ಪ್ರಮುಖ ಸದಸ್ಯರು ಪ್ರಧಾನ್ ಅವರ ರಾಜೀನಾಮೆಯನ್ನು ನೃತ್ಯ ಮಾಡಿ ಆಚರಿಸುತ್ತಿರುವ ದೃಶ್ಯಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿರುವ ನಡುವೆ ಸೋನಮ್ ಅವರು ಈ ಹೇಳಿಕೆ ನೀಡಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ನೇತೃತ್ವದ ವಿದ್ಯಾರ್ಥಿಗಳ ಪ್ರತಿಭಟನೆಯ ಪ್ರಮುಖ ನಾಯಕ ಎಂದೇ ವಾಂಗ್‌ಚುಕ್ ಗುರುತಿಸಿಕೊಂಡರು. ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಿದ ನಂತರ, ಪೊಲೀಸರು ಬಲವಂತವಾಗಿ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸುವವರೆಗೂ ಅವರು ಸಿಜೆಪಿ ಪ್ರತಿಭಟನಾಕಾರರ ಜೊತೆಯೇ ಇದ್ದರು.
ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲಾಗುವುದಿಲ್ಲ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯ ನಂತರ ಆತ್ಮಹತ್ಯೆ ಮಾಡಿಕೊಂಡ ನೀಟ್ ಆಕಾಂಕ್ಷಿಗಳ ಕುಟುಂಬಗಳಿಗೆ ಸಾಕಷ್ಟು ಪರಿಹಾರ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದ ನಂತರ ಅವರು ಜುಲೈ 23 ರಂದು ತಮ್ಮ 26 ದಿನಗಳ ಉಪವಾಸವನ್ನು ಅಂತ್ಯಗೊಳಿಸಿದರು.
ಎರಡು ತಿಂಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಆಂದೋಲನವಾಗಿ ಪ್ರಾರಂಭಗೊಂಡ ಸಿಜೆಪಿಯು ದೆಹಲಿಯಲ್ಲಿ ತೀವ್ರ ಪ್ರತಿಭಟನೆ ನಡೆಸಿತ್ತು. ಪ್ರಧಾನ್ ರಾಜೀನಾಮೆ ಬಳಿಕ ಸಿಜೆಪಿಯ ಸಂಭ್ರಮಾಚರಣೆಯ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆಗೆ ಕಾರಣವಾಯಿತು. ಚಳವಳಿಯ ಬೆಂಬಲಿಗರು ಮತ್ತು ರಾಜಕೀಯ ವಿರೋಧಿಗಳು ಎಲ್ಲರೂ ಈ ಬಗ್ಗೆ ಪ್ರಶ್ನಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯ ನಂತರ ವಿದ್ಯಾರ್ಥಿಗಳ ಆತ್ಮಹತ್ಯೆಗಳೇ ಈ ಆಂದೋಲನಕ್ಕೆ ಕಾರಣ ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ವಾದಿಸಿದ್ದಾರೆ. ಇನ್ನು ಕೆಲವರು ಸಿಜೆಪಿ ನಾಯಕತ್ವವು ಸಂಭ್ರಮಾಚರಣೆ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ಹಲವಾರು ರಾಜ್ಯಗಳಲ್ಲಿ ಅನೇಕ ಪ್ರತಿಭಟನಾಕಾರರು ಬಂಧನವನ್ನು ಎದುರಿಸುತ್ತಿದ್ದಾರೆ.
ಈ ವಿಡಿಯೋಗಳು ಯುವ ಪೀಳಿಗೆಯ ಚೈತನ್ಯವನ್ನು ಪ್ರತಿಬಿಂಬಿಸುತ್ತವೆ ಎಂದು ಸಿಜೆಪಿ ವಕ್ತಾರ ಸೌರ್ವ ದಾಸ್ ಹೇಳಿದರು. ನಾವು ಎಷ್ಟು ಹೊತ್ತು ಬೇಕಾದರೂ ರಸ್ತೆಯಲ್ಲಿ ಕುಳಿತುಕೊಳ್ಳಬಹುದು. ನೃತ್ಯ ಮಾಡುತ್ತಾ ಪ್ರತಿಭಟಿಸಬಹುದು. ಕಾಫಿ ಹೀರುತ್ತಾ ನಾವು ಸಂಘಟಿಸಬಹುದು. ಈ ಪೀಳಿಗೆಯೇ ಹಾಗೆ ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ. ಜನರಲ್ ಝೆಡ್ ಮತ್ತು ಯುವ ಪೀಳಿಗೆಯ ಭಾಷೆಯನ್ನು ಕೆಲವರು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.