ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಪ್ರತಿಭಟನಾಕಾರರ ವಿರುದ್ಧದ ಪ್ರಕರಣ ಕೈಬಿಡದಿದ್ದರೆ ನಾಳೆಯಿಂದ ಮತ್ತೆ ಪ್ರತಿಭಟನೆʼʼ: ಕೇಂದ್ರಕ್ಕೆ ಮತ್ತೆ ಎಚ್ಚರಿಕೆ ನೀಡಿದ ಸಿಜೆಪಿ

CJP's Warning To Centre: ಒಪ್ಪಂದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಕಾಕ್ರೋಚ್ ಜನತಾ ಪಾರ್ಟಿ, ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಹಿಂಪಡೆಯದಿದ್ದರೆ ಹಾಗೂ ಬಂಧಿತ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡದಿದ್ದರೆ ಮತ್ತೆ ಪ್ರತಿಭಟನೆ ಆರಂಭಿಸುವುದಾಗಿ ಎಚ್ಚರಿಕೆ ನೀಡಿದೆ. ಇದೇ ವೇಳೆ, ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕು ಸಂವಿಧಾನಾತ್ಮಕವಾಗಿದೆ ಎಂದು ಸುಪ್ರೀಂ ಕೋರ್ಟ್ ಕೂಡ ಅಭಿಪ್ರಾಯ ವ್ಯಕ್ತಪಡಿಸಿದೆ.

ಸರ್ಕಾರದ ವಿರುದ್ಧ ಮತ್ತೆ ಹೋರಾಟಕ್ಕೆ ಸಿಜೆಪಿ ಸಜ್ಜು

ಅಭಿಜಿತ್‌ ದೀಪ್ಕೆ -

Profile
Sushmitha Jain Jul 27, 2026 10:43 PM

ನವದೆಹಲಿ, ಜು. 27: ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೊಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸರ್ಕಾರ ಉಲ್ಲಂಘಿಸಿದೆ ಎಂದು ಆರೋಪಿಸಿರುವ ಕಾಕ್ರೋಚ್ ಜನತಾ ಪಾರ್ಟಿ (CJP), ಬೇಡಿಕೆಗಳು ಈಡೇರದಿದ್ದರೆ ಮಂಗಳವಾರದಿಂದ (ಜುಲೈ 27) ಮತ್ತೆ ಪ್ರತಿಭಟನೆ ಆರಂಭಿಸುವುದಾಗಿ ಎಚ್ಚರಿಕೆ ನೀಡಿದೆ. ದೆಹಲಿ ಜಂತರ್ ಮಂತರ್‌ನಲ್ಲಿ 37 ದಿನಗಳ ಕಾಲ ನಡೆದ ಪ್ರತಿಭಟನೆಯನ್ನು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬಳಿಕ ಸದ್ಭಾವನೆಯ ಸಂಕೇತವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧ ಇನ್ನೂ ಬಂಧನಗಳು ಮತ್ತು ಎಫ್‌ಐಆರ್‌ಗಳು ಮುಂದುವರಿದಿವೆ ಎಂದು ಸಿಜೆಪಿ ಆರೋಪಿಸಿದೆ.

ಸಿಜೆಪಿ ವಕ್ತಾರ ಆಶುತೋಷ್ ರಾಂಕಾ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ, "ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ನೂರಾರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ದೆಹಲಿ ಸೇರಿ ಹಲವು ರಾಜ್ಯಗಳಲ್ಲಿ ಪ್ರತಿಭಟನಾಕಾರರನ್ನು ಕಣ್ಗಾವಲು ಹಾಗೂ ಕಿರುಕುಳಕ್ಕೆ ಒಳಪಡಿಸಲಾಗುತ್ತಿದೆ. ಪ್ರತಿಭಟನಾಕಾರರಿಗೆ ನೆರವಾಗುತ್ತಿದ್ದ ಸ್ವಯಂಸೇವಕರನ್ನೂ ವಶಕ್ಕೆ ಪಡೆಯಲಾಗುತ್ತಿದೆ" ಎಂದು ಆರೋಪಿಸಿದರು.

ಆಶುತೋಷ್ ರಾಂಕಾ ಎಕ್ಸ್‌ ಪೋಸ್ಟ್‌:



ಎಲ್ಲ ಎಫ್‌ಐಆರ್‌ಗಳನ್ನು ತಕ್ಷಣ ಹಿಂಪಡೆಯಬೇಕು, ಬಂಧಿತ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಬೇಕು ಹಾಗೂ ಮುಂದಿನ ದಿನಗಳಲ್ಲಿ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸಬಾರದು. ಈ ಬಗ್ಗೆ ನಡೆದ ಮಾತುಕತೆಯಲ್ಲಿ ಒಪ್ಪಿಕೊಂಡಂತೆ ಲಿಖಿತ ಒಪ್ಪಂದದ ಪ್ರತಿಯನ್ನು ಮಂಗಳವಾರದೊಳಗೆ ನೀಡಬೇಕು ಎಂದು ಸಿಜೆಪಿ ಸರ್ಕಾರವನ್ನು ಆಗ್ರಹಿಸಿದೆ.

ಇಲ್ಲವಾದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಜುಲೈ 25ರಂದು ನಡೆದ ಮೂರನೇ ಸುತ್ತಿನ ಮಾತುಕತೆಯಲ್ಲಿ ನೀಟ್ (NEET) ಪರೀಕ್ಷೆಗೆ ಸಂಬಂಧಿಸಿದ ಘಟನೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವುದು ಹಾಗೂ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಹಿಂಪಡೆಯುವ ಭರವಸೆ ಸರ್ಕಾರ ನೀಡಿದೆ ಎಂದು ಸಿಜೆಪಿ ಹೇಳಿದೆ.

ಪಕ್ಷವು ಸರ್ಕಾರದ ಮುಂದೆ ಐದು ಅಂಶಗಳ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದ್ದು, ನಾಲ್ಕು ವಾರಗಳ ಬಳಿಕ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ತಿಳಿಸಿದೆ.
ಜುಲೈ 20ರಂದು ನಡೆದ 'ಚಲೋ ಸಂಸತ್' ಪ್ರತಿಭಟನೆಯ ವೇಳೆ ಜಂತರ್ ಮಂತರ್‌ನಿಂದ ಸಂಸತ್‌ ಭವನದತ್ತ ಮೆರವಣಿಗೆ ನಡೆಸಲು ಯತ್ನಿಸಿದಾಗ ಪ್ರತಿಭಟನೆ ಹಿಂಸಾತ್ಮಕವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿದ್ದರು.

ಕಾಕ್ರೋಚ್‌ ಜನತಾ ಪಾರ್ಟಿ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಮತ್ತೊಂದು ಸಂಚಲನ: ರಿಸರ್ವೇಶನ್ ಹಟಾವೋ ಆಂದೋಲನ ಆರಂಭ

ಇದರ ಬೆನ್ನಲ್ಲೇ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನಾಕಾರರ ವಿರುದ್ಧ ಹಲವು ಎಫ್‌ಐಆರ್‌ಗಳು ದಾಖಲಾಗಿದ್ದವು. ಇದೇ ವೇಳೆ, ಶಾಂತಿಯುತ ಪ್ರತಿಭಟನೆ ನಡೆಸುವ ಹಕ್ಕು ಸಂವಿಧಾನಾತ್ಮಕವಾಗಿ ಖಚಿತವಾಗಿದ್ದು, ಪ್ರತಿಭಟನೆ ನಡೆಯುತ್ತಿದೆ ಎಂಬ ಕಾರಣಕ್ಕೆ ಪೊಲೀಸ್ ಅತಿರೇಕ ಅಥವಾ ಲಾಠಿ ಚಾರ್ಜ್ ಅನ್ನು ಸಮರ್ಥಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.