ವಡೋದರಾ: ಸಾಮಾಜಿಕ ಜಾಲತಾಣದಲ್ಲಿ (Social Media) ಮಾಡಿದ ಪೋಸ್ಟ್ (Viral Post) ನಿಂದಾಗಿ ಘರ್ಷಣೆ (communal clash) ಉಂಟಾಗಿ 50 ಜನರನ್ನು ಬಂಧಿಸಿರುವ ಘಟನೆ ಗುಜರಾತ್‌ನ ವಡೋದರಾದಲ್ಲಿ (Vadodara) ನಡೆದಿದೆ. ಮುಸ್ಲಿಂ ಪ್ರಾರ್ಥನಾ ಸ್ಥಳಕ್ಕೆ ಸಂಬಂಧಿಸಿ ಎಐನಲ್ಲಿ ರಚಿಸಿದ ಪೋಸ್ಟ್ (AI-generated post) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದರಿಂದ ವಡೋದರಾದ ಜುನಿಗರ್ಹಿ ಪ್ರದೇಶದಲ್ಲಿ ಕೋಮು ಘರ್ಷಣೆ ಉಂಟಾಗಿದ್ದು, ಈ ವೇಳೆ ಹಲವಾರು ವಾಹನಗಳು ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಲಾಗಿದೆ. ಹಿಂದೂ ಯುವಕನೊಬ್ಬ ಈ ಪೋಸ್ಟ್ ಹಂಚಿಕೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ.
ವಡೋದರಾದ ಜುನಿಗರ್ಹಿ ಪ್ರದೇಶದಲ್ಲಿ ಕೋಮು ಘರ್ಷಣೆ ಉಂಟಾಗುವ ಮೊದಲು ಅಲ್ಪಸಂಖ್ಯಾತ ಸಮುದಾಯದ ದೊಡ್ಡ ಜನಸಮೂಹವು ನಗರ ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿ ರಸ್ತೆಯನ್ನು ತಡೆದು ಪೋಸ್ಟ್‌ಗೆ ಕಾರಣರಾದ ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು. ತಕ್ಷಣ ಪೊಲೀಸರು ಕ್ರಮ ಕೈಗೊಂಡು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಈ ಘಟನೆಯ ಬಗ್ಗೆ ಮಾತನಾಡಿದ ಡಿಸಿಪಿ ಆಂಡ್ರ್ಯೂ ಮ್ಯಾಕ್ವಾನ್, ಪರಿಸ್ಥಿತಿ ಶಾಂತಿಯುತವಾಗಿದೆ ಮತ್ತು ನಿಯಂತ್ರಣದಲ್ಲಿದೆ. ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್ ಕಾಣಿಸಿಕೊಂಡಿದ್ದರಿಂದ ಪ್ರತಿಭಟನೆಗಳು ಉಂಟಾಯಿತು. ಜನರು ನಗರ ಪೊಲೀಸ್ ಠಾಣೆ ಬಳಿ ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ, ಜುನಿಗರ್ಹಿ ಪ್ರದೇಶದಲ್ಲಿ ಕಲ್ಲು ತೂರಾಟವು ನಡೆದಿದೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ 50ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಎಫ್‌ಐಆರ್ ದಾಖಲಿಸಲಾಗಿದೆ. ಯಾವುದೇ ವದಂತಿಗಳಿಗೆ ಗಮನ ಕೊಡಬೇಡಿ. ಕಠಿಣ ಕ್ರಮ ಕೈಗೊಳ್ಳುವುದಾಗಿ ಆಂಡ್ರ್ಯೂ ಮ್ಯಾಕ್ವಾನ್ ಹೇಳಿದ್ದಾರೆ.
ಇದನ್ನೂ ಓದಿ: Viral Video: ನಾನು ಮುಸ್ಲಿಂ, ಕೇಸರಿ ಬಣ್ಣ ತುಂಬಾ ಇಷ್ಟ ಎಂದ ಮುಸ್ಲಿಂ ಯುವಕ! ಏನಿದು ವೈರಲ್ ವಿಡಿಯೊ?
ಮುಂಬರುವ ಹಬ್ಬಗಳನ್ನು ಎಲ್ಲರೂ ಶಾಂತಿಯುತವಾಗಿ ಆಚರಿಸಲು ವಡೋದರಾ ನಗರದಲ್ಲಿ ಪೊಲೀಸ್ ಗಸ್ತು ನಡೆಯಲಿದೆ. ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ನಾಗರಿಕರು ಮತ್ತು ಪೊಲೀಸರು ಸೇರಿದ್ದಾರೆ. ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.