ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರಧಾನಿ ನರೇಂದ್ರ ಮೋದಿ ತಂದೆಯ ಬಗ್ಗೆ ಅವಹೇಳನಕಾರಿ ಹೇಳಿಕೆ: ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ದೂರು

Complaint Filed Against Kharge: ಪ್ರಧಾನಿ ನರೇಂದ್ರ ಮೋದಿ ಅವರ ದಿವಂಗತ ತಂದೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಹಾರದ ಪಟನಾದ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶ್ರೀ ಕೃಷ್ಣ ಸಿನ್ಹಾ ಅವರ 139ನೇ ಜನ್ಮ ದಿನಾಚರಣೆಯಂದು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖರ್ಗೆ ಈ ಹೇಳಿಕೆ ನೀಡಿದ್ದರು.

ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ

ಪಟನಾ, ಅ. 26: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ದಿವಂಗತ ತಂದೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ವಿರುದ್ಧ ಬಿಹಾರದ ಪಟನಾದ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಕೃಷ್ಣ ಸಿಂಗ್ ಕಲ್ಲು ಪಟನಾದ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಖರ್ಗೆ ವಿರುದ್ಧ ಲಿಖಿತ ದೂರು ದಾಖಲಿಸಿದ್ದಾರೆ. ಪಟನಾದಲ್ಲಿ ಶ್ರೀ ಕೃಷ್ಣ ಸಿನ್ಹಾ ಅವರ 139ನೇ ಜನ್ಮ ದಿನಾಚರಣೆಯಂದು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖರ್ಗೆ, ಮೋದಿ ಅವರ ತಂದೆಯೂ ಜೈಲಿಗೆ ಹೋಗುತ್ತಾರೆ ಎಂದು ಹೇಳಿದರು. ಈ ಮಾತಿನ ಚಕಮಕಿಯ ವಿಡಿಯೊವೊಂದು ಹೊರ ಬಿದ್ದಿದೆ.

ಮೋದಿ ಅಧಿಕಾರದಿಂದ ಕೆಳಗೆ ಇಳಿಯಲ್ಲ ಎಂದು ಸಭೆಯಲ್ಲಿದ್ದ ವ್ಯಕ್ತಿಯೊಬ್ಬರು ಕೂಗಿಕೊಂಡಾಗ ವೇದಿಕೆಯಿಂದಲೇ ಪ್ರತಿಕ್ರಿಯಿಸಿದ ಖರ್ಗೆ, ಮೋದಿ ಅವರ ತಂದೆಯೂ ಜೈಲಿಗೆ ಹೋಗುತ್ತಾರೆ ಎಂದು ನಾಲಗೆ ಹರಿಯಬಿಟ್ಟಿದ್ದರು. ಈ ವಾಕ್ಯವನ್ನು ಅವರು ಸಿಟ್ಟಿನಿಂದ 2 ಬಾರಿ ಪುನರಾವರ್ತಿಸಿದ್ದರು. ಬಳಿಕ ಕಾಂಗ್ರೆಸ್‌ ಕಾರ್ಯಕರ್ತರು ಮೋದಿ ಪರ ಘೋಷಣೆ ಕೂಗಿದ್ದಾರೆ ಎನ್ನಲಾದ ಸಂತೋಷ್ ಕುಮಾರ್ ಎಂಬಾತನನ್ನು ಥಳಿಸಿ ಹಾಲ್‌ನಿಂದ ಹೊರ ಹಾಕಿದ್ದರು.

ಇದೇ ವೇಳೆ, ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ಮುಂಬರುವ ಎಲ್ಲ ಚುನಾವಣೆಗಳಲ್ಲಿ ಮತ್ತೆ ಮತಪತ್ರಗಳ ಬಳಕೆಯನ್ನು ಜಾರಿಗೆ ತರಬೇಕು ಹಾಗೂ ಕಳೆದ ಎರಡು ವರ್ಷಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳನ್ನು ರದ್ದುಗೊಳಿಸಬೇಕು ಎಂದು ಖರ್ಗೆ ಆಗ್ರಹಿಸಿದ್ದರು.

ಹಿರಿತನವಿದ್ದರೂ ಮಾತಿನಲ್ಲಿ ಸಣ್ಣತನ ತೋರಿದ ಮಲ್ಲಿಕಾರ್ಜುನ ಖರ್ಗೆ: ಎಚ್.ಡಿ.ಕುಮಾರಸ್ವಾಮಿ

ಎಸ್ಐಆರ್ ಪ್ರಕ್ರಿಯೆಯ ವಿರುದ್ಧದ ಹೋರಾಟವನ್ನು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದು ಬಣ್ಣಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಹಾರದ ಮೊದಲ ಮುಖ್ಯಮಂತ್ರಿಯಾಗಿದ್ದ, ಶ್ರೀ ಬಾಬು ಎಂದೇ ಜನಪ್ರಿಯರಾಗಿದ್ದ ಕೃಷ್ಣ ಸಿಂಗ್ ಅವರ 139ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಪಟನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದ್ದಾರೆ.

ದೇಶದಲ್ಲಿ ವಿಭಜನೆಯನ್ನು ಹೆಚ್ಚಿಸುವ ಸಿದ್ಧಾಂತವನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ ಅನುಸರಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ. ಆರ್‌ಎಸ್‌ಎಸ್‌ನ ಸಿದ್ಧಾಂತವನ್ನು ನಿರ್ಮೂಲನೆ ಮಾಡುವವರೆಗೆ ದೇಶದಲ್ಲಿ ಶಾಂತಿ ನೆಲೆಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮತದಾರರ ಪಟ್ಟಿಗಳಲ್ಲಿ ತಿರುಚುವಿಕೆ ನಡೆಸಲಾಗುತ್ತಿದೆ ಮತ್ತು ವಿರೋಧ ಪಕ್ಷಗಳ ಬೆಂಬಲಿಗರ ಹೆಸರು ಅಳಿಸಲಾಗುತ್ತಿದೆ ಎಂದು ಆರೋಪಿಸಿದ ಖರ್ಗೆ, ಚುನಾವಣಾ ಪ್ರಕ್ರಿಯೆ ಹಾಗೂ ಚುನಾವಣಾ ಆಯೋಗದ ಪ್ರಾಮಾಣಿಕತೆಯನ್ನು ಪ್ರಶ್ನಿಸಿದ್ದಾರೆ.

ಪಶ್ಚಿಮ ಬಂಗಾಳ, ಹರಿಯಾಣ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಮತ ಕಳವು ಮೂಲಕ ಕಸಿದುಕೊಂಡಿರುವ ಸರ್ಕಾರಗಳನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಅವರು ಹೇಳಿದ್ದಾರೆ. ಜನರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಡಬೇಕು ಮತ್ತು ಸಂವಿಧಾನವನ್ನು ರಕ್ಷಿಸಬೇಕು ಎಂದು ಅವರು ಕರೆ ನೀಡಿದ್ದಾರೆ.