ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಧಾನಿ ನರೇಂದ್ರ ಮೋದಿ ತಂದೆಯ ಹೆಸರು ಪ್ರಸ್ತಾವಿಸಿ ಸಾರ್ವಜನಿಕ ವೇದಿಕೆಯಲ್ಲೇ ಅವಮಾನಿಸಿದ ಮಲ್ಲಿಕಾರ್ಜುನ ಖರ್ಗೆ; ವಿಡಿಯೊ ನೋಡಿ

Mallikarjun Kharge: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆಣಕಲು ಹೋಗಿ ಕಾಂಗ್ರೆಸ್‌ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಮೋದಿ ಅವರ ತಂದೆಯ ಹೆಸರು ಪ್ರಸ್ತಾವಿಸಿದ್ದಾರೆ. ವಿಡಿಯೊ ವೈರಲ್‌ ಆಗಿದೆ.

ಸಾರ್ವಜನಿಕ ವೇದಿಕೆಯಲ್ಲೇ ಮೋದಿ ತಂದೆಯ ಹೆಸರು ಪ್ರಸ್ತಾವಿಸಿದ ಖರ್ಗೆ

ನರೇಂದ್ರ ಮೋದಿ ಮತ್ತು ಮಲ್ಲಿಕಾರ್ಜುನ ಖರ್ಗೆ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Oct 25, 2026 7:18 PM

ಪಾಟ್ನಾ, ಅ. 25: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ತಂದೆಯನ್ನು ಹೆಸರನ್ನು ಸಾರ್ವಜನಿಕವಾಗಿ ಪ್ರಸ್ತಾವಿಸುವ ಮೂಲಕ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಬಿಹಾರದ ಪಾಟ್ನಾದಲ್ಲಿ ಆಯೋಜಿಸಿದ್ದ ಬಿಹಾರದ ಮೊದಲ ಸಿಎಂ ದಿವಂಗತ ಶ್ರೀ ಕೃಷ್ಣ ಸಿಂಗ್‌ ಅವರ 139ನೇ ಹುಟ್ಟುಹಬ್ಬ ಆಚರಣೆಯ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಮೋದಿ ಅವರ ತಂದೆಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಬಿಜೆಪಿ ತೀವ್ರವಾಗಿ ಖಂಡಿಸಿದೆ. ಖರ್ಗೆ ಮೋದಿ ಅವರ ತಂದೆ ಮಾತ್ರವಲ್ಲ ಇಡೀ ದೇಶವನ್ನೇ ಅವಮಾನಿಸಿದ್ದಾರೆ ಎಂದು ಕಿಡಿಕಾರಿದೆ. ಸಭೆಯಲ್ಲಿದ್ದ ವ್ಯಕ್ತಿಯೊಬ್ಬ ಮೋದಿ ಪರ ಘೋಷಣೆ ಕೂಗಿದ್ದಾರೆಂದು ತಾಳ್ಮೆ ಕಳೆದುಕೊಂಡ ಖರ್ಗೆ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮೋದಿ ಅಧಿಕಾರದಿಂದ ಕೆಳಗೆ ಇಳಿಯಲ್ಲ ಎಂದು ಸಭೆಯಲ್ಲಿದ್ದ ವ್ಯಕ್ತಿಯೊಬ್ಬರು ಕೂಗಿಕೊಂಡಾಗ ವೇದಿಕೆಯಿಂದಲೇ ಪ್ರತಿಕ್ರಿಯಿಸಿದ ಖರ್ಗೆ, ʼʼಮೋದಿ ಅವರ ತಂದೆಯೂ ಜೈಲಿಗೆ ಹೋಗುತ್ತಾರೆʼʼ ಎಂದು ನಾಲಗೆ ಹರಿಯಬಿಟ್ಟಿದ್ದಾರೆ. ಈ ವಾಕ್ಯವನ್ನು ಅವರು ಸಿಟ್ಟಿನಿಂದ 2 ಬಾರಿ ಪುನರಾವರ್ತಿಸಿದ್ದಾರೆ. ಬಳಿಕ ಕಾಂಗ್ರೆಸ್‌ ಕಾರ್ಯಕರ್ತರು ಮೋದಿ ಪರ ಘೋಷಣೆ ಕೂಗಿದ್ದಾರೆ ಎನ್ನಲಾದ ಸಂತೋಷ್ ಕುಮಾರ್ ಎಂಬಾತನನ್ನು ಥಳಿಸಿ ಹಾಲ್‌ನಿಂದ ಹೊರ ಹಾಕಿದರು.

ಮಲ್ಲಿಕಾರ್ಜುನ ಖರ್ಗೆ ಅವರ ವಿವಾದಾತ್ಮಕ ಹೇಳಿಕೆ:



ಬಳಿಕ ಮಾತನಾಡಿದ ಸಂತೋಷ್ ಕುಮಾರ್ ತಾನು ಗದ್ದಲ ಎಬ್ಬಿಸಲು ಅಲ್ಲಿಗೆ ಬಂದಿರಲಿಲ್ಲ. ವಾಸ್ತವವಾಗಿ ತಾನು ಮೋದಿ ಅದಿಕಾರದಿಂದ ಇಳಿಯಬೇಕೆಂದು ಹೇಳಿದ್ದಾಗಿ ತಿಳಿಸಿದ್ದಾರೆ. ತಪ್ಪಾಗಿ ಅರ್ಥೈಸಿ ಕಾಂಗ್ರೆಸ್‌ ಕಾರ್ಯಕರ್ತರು ಥಳಿಸಿದ್ದಾಗಿ ಅರೋಪಿಸಿದ್ದಾರೆ.

500ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಕ್ರಮ ಖಂಡಿಸಿದ ಮಲ್ಲಿಕಾರ್ಜುನ ಖರ್ಗೆ

ಬಿಜೆಪಿ ವಾಗ್ದಾಳಿ

ಈ ಹೇಳಿಕೆ ವೈರಲ್ ಆಗುತ್ತಿದ್ದಂತೆಯೇ ಬಿಜೆಪಿ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿತು. ಬಿಜೆಪಿ ವಕ್ತಾರ ತುಹಿನ್ ಎ. ಸಿನ್ಹಾ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡು, "ಖರ್ಗೆ ಅವರ ಇಂತಹ ಅಸಭ್ಯ ನಡವಳಿಕೆಯು ಕಾಂಗ್ರೆಸ್ ಪಾಳಯದಲ್ಲಿ ಹೆಚ್ಚುತ್ತಿರುವ ಹತಾಶೆಯನ್ನು ಪ್ರತಿಬಿಂಬಿಸಿದೆ. ಪ್ರತಿಭಟನೆಗಳ ಹೆಸರಿನಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಕಾಂಗ್ರೆಸ್‌ ನಾಯಕರು ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾಗಿವೆ" ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಗಿರಿರಾಜ್ ಸಿಂಗ್, "ರಾಹುಲ್ ಗಾಂಧಿ ಮಾತ್ರ ಮೂರ್ಖ ಎಂದು ನಾನು ಭಾವಿಸಿದ್ದೆ. ಆದರೆ ಈಗ ನೋಡಿದರೆ, ಕಾಂಗ್ರೆಸ್‌ನಲ್ಲಿ ಇಡೀ ಗುಂಪೇ ಹಾಗೆಯೇ ಇರುವಂತಿದೆ" ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಮೋದಿ ಆಡಳಿತವನ್ನು ಕೊಂಡಾಡಿದ ಅವರು, ʼʼಮೋದಿ ಮುಂದಿನ 30 ವರ್ಷಗಳ ಕಾಲ ಆಡಳಿತ ನಡೆಸಲಿದ್ದಾರೆʼʼ ಎಂದಿದ್ದಾರೆ. "ನರೇಂದ್ರ ಮೋದಿ ಅವರ ತಂದೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕಾಗಿ ಭಾರತೀಯರು ಕಾಂಗ್ರೆಸ್‌ ಹಾಗೂ ನೆಹರೂ-ಗಾಂಧಿ ಕುಟುಂಬಕ್ಕೆ ತಕ್ಕ ಉತ್ತರ ನೀಡಲಿದ್ದಾರೆ" ಎಂದು ಅವರು ಹೇಳಿದ್ದಾರೆ.

ಅಮಿತ್‌ ಶಾ ಎಕ್ಸ್‌ ಪೋಸ್ಟ್‌:



ಅಮಿತ್‌ ಶಾ ಕಿಡಿ

ಗೃಹ ಸಚಿವ ಅಮಿತ್‌ ಶಾ ಕೂಡ ಖರ್ಗೆ ಅವರ ಈ ಹೇಳಿಕೆಯನ್ನು ಖಂಡಿಸಿದ್ದಾರೆ. ''ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಪಾಟ್ನಾದಲ್ಲಿ ಮೋದಿ ಅವರ ತಂದೆಯ ಬಗ್ಗೆ ಅತ್ಯಂತ ಅಸಭ್ಯ ಹೇಳಿಕೆ ನೀಡುವ ಮೂಲಕ ಮರ್ಯಾದೆಯ ಎಲ್ಲ ಮಿತಿಗಳನ್ನು ಉಲ್ಲಂಘಿಸಿದ್ದಾರೆ'' ಎಂದು ಎಕ್ಸ್‌ನಲ್ಲಿ ಕಿಡಿಕಾರಿದ್ದಾರೆ.

ಮೋದಿ-ಮೆಲೋನಿ ಭೇಟಿ ನಂತರ ಬ್ಲಿಂಕ್‌ಇಟ್‌, ಝೆಪ್ಟೊಗಳಲ್ಲಿ ಪಾರ್ಲೆ ಮೆಲೋಡಿ ಚಾಕೊಲೇಟ್‌ ಭರ್ಜರಿ ಮಾರಾಟ

ʼʼಕಾಂಗ್ರೆಸ್ ಮೋದಿ ಅಥವಾ ಅವರ ಕುಟುಂಬದ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಬಳಸುತ್ತಿರುವುದು ಇದೇ ಮೊದಲೇನಲ್ಲ. ಹಿಂದೆ ಮೋದಿ ಅವರ ತಾಯಿಯನ್ನು ನಿಂದಿಸಿದೆ. ಇನ್ನು ಕೆಲವೊಮ್ಮೆ ಅವರನ್ನು 'ಮರಣದ ವ್ಯಾಪಾರಿ' ಎಂದು ಕರೆದಿದೆ. ಅವರನ್ನು 'ಚಾಯ್‌ ವಾಲಾ' (ಚಹಾ ಮಾರುವವ) ಎಂದು ಕರೆಯುವ ಮೂಲಕ ಅವರ ಬಡತನವನ್ನು ಅಪಹಾಸ್ಯ ಮಾಡಿದೆ. ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ, ಕಾಂಗ್ರೆಸ್ ಪ್ರತಿದಿನವೂ ಅಸಭ್ಯತೆಯ ಎಲ್ಲ ಮಿತಿಗಳನ್ನು ಮೀರುತ್ತಲೇ ಸಾಗಿದೆʼʼ ಎಂದು ಬರೆದುಕೊಂಡಿದ್ದಾರೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.