ನವದೆಹಲಿ, ಆ. 24: ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರ ನಗರಿಯಲ್ಲಿ (Ayodhya Ram Temple) ಕಾಂಗ್ರೆಸ್ ರಾಜ್ಯ ಮುಖ್ಯಸ್ಥ ಅಜಯ್ ರಾಯ್ ಅವರನ್ನು ಸ್ವಾಗತಿಸಲು ಆಯೋಜಿಸಿದ್ದ ಔತಣಕೂಟದಲ್ಲಿ ಮೀನು ಖಾದ್ಯ ಬಳಸಲಾಗಿದೆ ಎಂದು ಬಿಜೆಪಿ ಆರೋಪಿಸಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ವಾಗ್ದಾಳಿ ಆರಂಭವಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (UP CM Yogi Adityanath) ಸೇರಿ ಬಿಜೆಪಿ ನಾಯಕರು, ರಾಮನ ವಾಸಸ್ಥಾನ ಮತ್ತು ರಾಮ ಮಂದಿರದಲ್ಲಿ ಮೀನಿನ ಖಾದ್ಯ ಬಡಿಸಿದ ಕಾಂಗ್ರೆಸ್ ನಡೆಯನ್ನು ಪ್ರಶ್ನಿಸಿದ್ದಾರೆ. ಪವಿತ್ರ ಶ್ರಾವಣ ಮಾಸ ಇನ್ನೂ ಮುಗಿದಿಲ್ಲ. ಈ ಸಮಯದಲ್ಲಿ ಮೀನು ತಿನ್ನುವುದು ಭಕ್ತರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಅಜಯ್ ರಾಯ್ ಸಸ್ಯಾಹಾರಿ ಎಂದು ಸ್ಪಷ್ಟಪಡಿಸಿರುವ ಕಾಂಗ್ರೆಸ್ ಸಂಸದ ಪವನ್ ಖೇರಾ, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ರಾಮಮಂದಿರ ದೇಣಿಗೆ ಕಳವಿನಂತಹ ಗಂಭೀರ ವಿಷಯಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಈ ರೀತಿಯ ಆರೋಪಗಳನ್ನು ಮಾಡುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ಅಯೋಧ್ಯೆಯಲ್ಲಿ ಮೀನಿನ ಖಾದ್ಯ ತಯಾರಿಸಿದ ಕಾಂಗ್ರೆಸ್:
“ನಾನು ಮೀನು ತಿನ್ನುತ್ತಿರುವ ಒಂದೇ ಒಂದು ಫೋಟೊವನ್ನು ತೋರಿಸುವಂತೆ ಬಿಜೆಪಿ ನಾಯಕರಿಗೆ ಸವಾಲು ಹಾಕುತ್ತೇನೆ. ಹಾಗೆ ತೋರಿಸಿದರೆ ನಾನು ಸಂತೋಷದಿಂದ ರಾಜೀನಾಮೆ ನೀಡುತ್ತೇನೆ. ಒಂದು ವೇಳೆ ಅವರ ಬಳಿ ಆ ಫೋಟೊ ಇಲ್ಲದಿದ್ದರೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಅವರು ಕೇಸರಿ ಬಟ್ಟೆ ಧರಿಸಿ ಪ್ರತಿದಿನ ಸುಳ್ಳು ಹೇಳುತ್ತಾರೆ” ಎಂದು ಅಜಯ್ ರಾಯ್ ತಿಳಿಸಿದ್ದಾರೆ. ಆ ಮೂಲಕ ತಮ್ಮ ಮೇಲೆ ವಾಗ್ದಾಳಿ ನಡೆಸಿದ ಯೋಗಿ ಆದಿತ್ಯನಾಥ್ ಅವರಿಗೆ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ
ಅಯೋಧ್ಯೆ ರಾಮ ಮಂದಿರದ ಹೆಸರಿನಲ್ಲಿ ನಕಲಿ ಪ್ರಸಾದ ಮಾರಾಟ: ಅಮೆಜಾನ್‌ಗೆ ಭಾರಿ ದಂಡ
ಬಿಜೆಪಿ ವಾದವೇನು?
ಕಾಂಗ್ರೆಸ್ ಕಾರ್ಯಕ್ರಮದ ಸ್ಥಳದಲ್ಲಿ ತಡೆಗೋಡೆಯ ಹಿಂದೆ ಮೀನು ಮತ್ತು ತರಕಾರಿಗಳನ್ನು ಕತ್ತರಿಸಿ ಅಡುಗೆ ಮಾಡುತ್ತಿದ್ದ ದೃಶ್ಯ ಕಂಡುಬಂದಿದೆ. ಕಾಂಗ್ರೆಸ್ ಕಾರ್ಯಕ್ರಮ ಆಯೋಜಿಸಿದ್ದ ಸ್ಥಳದಲ್ಲಿ ತಾತ್ಕಾಲಿಕ ಅಡುಗೆಕೋಣೆ ನಿರ್ಮಿಸಿತ್ತು. ಕಾರ್ಯಕ್ರಮದಲ್ಲಿ ಬಡಿಸಿದ ಖಾದ್ಯದ ಬಗ್ಗೆ ತಿಳಿದ ಕೆಲವು ಸ್ಥಳೀಯರು ಪ್ರತಿಭಟನೆ ನಡೆಸಿದರು. ಅದಾದ ಬಳಿಕ ಬಿಜೆಪಿಯು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಆರಂಭಿಸಿತು.
ಅಜಯ್ ರಾಯ್ ಅವರನ್ನು ಸ್ವಾಗತಿಸಲು ಮತ್ತು ಇತ್ತೀಚೆಗೆ ತಮ್ಮ ಸಂಘಟನೆಗೆ ಸೇರಿದ ಹೊಸ ಸದಸ್ಯರನ್ನು ಗೌರವಿಸಲು ಕಾಂಗ್ರೆಸ್ ನಾಯಕ ರಾಮ್ ನಿಹಾಲ್ ನಿಶಾದ್ ಈ ಔತಣಕೂಟವನ್ನು ಆಯೋಜಿಸಿದ್ದರು. ಅತಿಥಿಗಳಿಗೆ ಮೀನು ಖಾದ್ಯ ಬಡಿಸಿದ ನಿರ್ಧಾರವನ್ನು ಸಮರ್ಥಿಸಿಕೊಂಡ ಅವರು, ʼʼಇದರಲ್ಲಿ ಯಾವ ನಿಯಮದ ಉಲ್ಲಂಘನೆಯಾಗಿದೆ? ಯಾವ ಕಾನೂನಿನ ಅಡಿಯಲ್ಲಿ ಇಂತಹ ಕೃತ್ಯವನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುತ್ತದೆ?ʼʼ ಎಂದು ಪ್ರಶ್ನಿಸಿದ್ದಾರೆ.
ʼʼಮಾಂಸಾಹಾರ ಸೇವಿಸುವುದರಲ್ಲಿ ತಪ್ಪೇನಿದೆ? ನಾವು ಮೀನು ತಿನ್ನಬಾರದೇಕೆ? ಸಂವಿಧಾನ ಜಾರಿಗೆ ಬಂದ ನಂತರ, ಯಾರು ಏನು ಬೇಕಾದರೂ ತಿನ್ನಬಹುದು. ಮೀನುಗಾರಿಕೆ ಮತ್ತು ಮೀನು ತಿನ್ನುವುದು ನಿಶಾದ್ ಸಮುದಾಯದ ಸಂಪ್ರದಾಯದ ಭಾಗʼʼ ಎಂದು ಅವರು ಹೇಳಿದ್ದಾರೆ.