ನವದೆಹಲಿ: ನ್ಯಾಯಾಲಯವನ್ನು ಕೆಣಕಲು ಯಾರಿಗೂ ಅವಕಾಶ ನೀಡುವುದಿಲ್ಲ. ಈ ಕುರಿತು ಸ್ವಯಂ ಪ್ರೇರಿತ ಕ್ರಮಕೈಗೊಳ್ಳಬಹುದು ಎಂದು ಹೇಳಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ (Chief Justice SuryaKant), ವಿವಾದಾತ್ಮಕ 8ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕಕ್ಕೆ ನಿಷೇಧ ಹೇರಿದ್ದಾರೆ. ಎನ್‌ಸಿಇಆರ್‌ಟಿ ಪಠ್ಯಪುಸ್ತಕದಲ್ಲಿ (NCERT Book) "ನ್ಯಾಯಾಂಗ ಭ್ರಷ್ಟಾಚಾರ"ದ (Corruption In Judiciary) ಉಲ್ಲೇಖಕ್ಕೆ ಸಂಬಂಧಿಸಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯನ್ನು ಹೊಣೆಗಾರಿಕೆ ಮಾಡಲಾಗಿದ್ದು, ಈ ಕುರಿತು ಸಂಪೂರ್ಣ ತನಿಖೆಗೆ ಗುರುವಾರ ಆದೇಶಿಸಿದ್ದಾರೆ.
8ನೇ ತರಗತಿಯ ಹೊಸ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ 'ನ್ಯಾಯಾಂಗದಲ್ಲಿನ ಭ್ರಷ್ಟಾಚಾರ' ಎಂಬ ವಿಭಾಗದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಇದಕ್ಕಾಗಿ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯನ್ನು ಹೊಣೆಗಾರರನ್ನಾಗಿ ಮಾಡಿದೆ.
ಶಾಲಾ ಪಠ್ಯದಲ್ಲಿ ನ್ಯಾಯಾಂಗ ಭ್ರಷ್ಟಾಚಾರ ಸೇರ್ಪಡೆಗೆ ಸಿಜೆಐ ಆಕ್ರೋಶ
ಈ ಕುರಿತು ಆಳವಾದ ತನಿಖೆ ನಡೆಸಲು ನಾವು ಬಯಸುತ್ತೇವೆ. ಯಾರು ಜವಾಬ್ದಾರರು ಎಂಬುದನ್ನು ಕಂಡುಹಿಡಿಯಬೇಕು. ಈ ಪ್ರಕರಣವನ್ನು ಮುಚ್ಚುವುದಿಲ್ಲ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಪರವಾಗಿ ವಾದಿಸುತ್ತಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ವಿಚಾರಣೆಗೆ ಒಳಪಡಿಸುವಂತೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ತಿಳಿಸಿದ್ದಾರೆ.
ಈ ಕುರಿತು ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಭಾರತ ಮತ್ತು ವಿದೇಶಗಳಲ್ಲಿ ಈ ಪುಸ್ತಕವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು, ಎಲ್ಲಾ ಪುಸ್ತಕ ಪ್ರತಿಗಳನ್ನು ವಶಕ್ಕೆ ಪಡೆಯಲು ನಿರ್ದೇಶಿಸಿದೆ. ಪುಸ್ತಕವನ್ನು ಆನ್‌ಲೈನ್‌ನಲ್ಲಿ ಸಂಪೂರ್ಣವಾಗಿ ಅಥವಾ ಭಾಗಶಃ ಹಂಚಿಕೊಳ್ಳುವುದನ್ನು ಕೂಡ ನಿಷೇಧಿಸಲಾಗಿದೆ. ಇದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಅಧ್ಯಕ್ಷ ಪ್ರೊಫೆಸರ್ ದಿನೇಶ್ ಪ್ರಸಾದ್ ಸಕ್ಲಾನಿಗೆ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಅನುಚಿತ ಪಠ್ಯ ವಿಷಯವು ಅಧ್ಯಾಯದಲ್ಲಿ ಅಜಾಗರೂಕತೆಯಿಂದ ಸೇರಿಕೊಂಡಿದೆ ಎಂದು ಹೇಳಿರುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ ಪತ್ರಿಕಾ ಪ್ರಕಟಣೆಯ ಬಗ್ಗೆಯೂ ಮುಖ್ಯ ನ್ಯಾಯಾಧೀಶರು, ತುಷಾರ್ ಮೆಹ್ತಾ ಅವರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಅವರು ಎನ್‌ಸಿಇಆರ್‌ಟಿ ಪರವಾಗಿ ಕ್ಷಮೆಯಾಚಿಸಿದರೂ ನ್ಯಾಯಾಲಯ ಅದನ್ನು ಒಪ್ಪಲಿಲ್ಲ. ಇದು ಕ್ಷಮೆಯಾಚನೆಗೆ ಯೋಗ್ಯವಲ್ಲ ಎಂದು ಹೇಳಿದೆ.
ಪುಸ್ತಕವು ಇನ್ನೂ ಮಾರಾಟದಲ್ಲಿದೆ ಎಂದು ನ್ಯಾಯಾಲಯ ಹೇಳಿದ್ದಕ್ಕೆ ಪ್ರತಿಯಾಗಿ ಮೆಹ್ತಾ ಅವರು, 32 ಪುಸ್ತಕಗಳು ಮಾರುಕಟ್ಟೆಗೆ ಬಂದಿವೆ. ಈಗ ಅವುಗಳನ್ನು ಹಿಂಪಡೆಯಲಾಗಿದೆ. ಸಂಪೂರ್ಣ ಅಧ್ಯಾಯವನ್ನು ಪರಿಷ್ಕರಿಸಲಾಗುವುದು ಎಂದು ತಿಳಿಸಿದರು.
ಉದ್ದೇಶಪೂರ್ವಕವಲ್ಲ: ಎನ್‌ಸಿಇಆರ್‌ಟಿ
8ನೇ ತರಗತಿಯ ಸಮಾಜ ವಿಜ್ಞಾನದ ಅಧ್ಯಾಯ 4ರಲ್ಲಿ ನ್ಯಾಯಾಂಗ ಭ್ರಷ್ಟಾಚಾರ ಅಧ್ಯಾಯದ ಬಗ್ಗೆ ವಿಷಾಧ ವ್ಯಕ್ತಪಡಿಸಿರುವ ಎನ್‌ಸಿಇಆರ್‌ಟಿ, ಇದರಲ್ಲಿ ನ್ಯಾಯಾಲಯಗಳು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಲಾಗಿದೆ. ಇದು ನ್ಯಾಯ ವ್ಯವಸ್ಥೆಯಲ್ಲಿ ಸಾರ್ವಜನಿಕ ವಿಶ್ವಾಸದ ಬಗ್ಗೆ ಕಳವಳಗಳಿಗೆ ಸಂಬಂಧಿಸಿದ್ದಾಗಿದೆ. ಇದನ್ನು ಯಾವುದೇ ಉದ್ದೇಶದಿಂದ ಸೇರ್ಪಡೆಗೊಳಿಸಲಾಗಿಲ್ಲ. ಆದರೂ ಕ್ಷಮೆಯಾಚಿಸುವುದಾಗಿ ಹೇಳಿದೆ.
ಇಸ್ರೇಲ್, ಪಾಲೆಸ್ತೀನ್ ಎರಡೂ ದೇಶಗಳ ಅತ್ಯುನ್ನತ ಗೌರವ ಪಡೆದ ಅಪರೂಪದ ನಾಯಕ ಪ್ರಧಾನಿ ಮೋದಿ
ಹೊಸ ಪಠ್ಯಪುಸ್ತಕಗಳ ಉದ್ದೇಶವು ಸಾಂವಿಧಾನಿಕ ಸಾಕ್ಷರತೆ, ಸಾಂಸ್ಥಿಕ ಗೌರವ ಮತ್ತು ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ಭಾಗವಹಿಸುವಿಕೆಯ ಬಗ್ಗೆ ತಿಳುವಳಿಕೆಯನ್ನು ಮೂಡಿಸುವುದಾಗಿದೆ ಎಂದು ಹೇಳಿರುವ ಎನ್‌ಸಿಇಆರ್‌ಟಿ, ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅವಲೋಕನಗಳ ಅನಂತರ ಈ ಪಠ್ಯಪುಸ್ತಕದ ವಿತರಣೆಯನ್ನು ತಡೆಹಿಡಿಯಲಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಪುಸ್ತಕವನ್ನು ಮರಳಿ ಪಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದೆ.
ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಅಧ್ಯಾಯವನ್ನು ಮರಳಿ ಬರೆಯಲಾಗುತ್ತದೆ. 2026– 27ರ ಶೈಕ್ಷಣಿಕ ಅವಧಿಗೆ ಪುಸ್ತಕವನ್ನು ಮರು ಪ್ರಕಟಿಸಲಾಗುವುದು. ಸಂವಿಧಾನ, ಮೂಲಭೂತ ಹಕ್ಕುಗಳ ರಕ್ಷಕನಾಗಿ ನ್ಯಾಯಾಂಗ ಅತ್ಯುನ್ನತ ಗೌರವವನ್ನು ಹೊಂದಿದೆ ಎಂದು ಎನ್‌ಸಿಇಆರ್‌ಟಿ ತಿಳಿಸಿದೆ.