ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಜನರಲ್ ಎಂಎಂ ನರವಾಣೆ ಪುಸ್ತಕ ವಿವಾದ; ಕಠಿಣ ಮಾರ್ಗಸೂಚಿ ಸಿದ್ಧಪಡಿಸಿದ ಸರ್ಕಾರ

Book Controversy: ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರಾವಣೆಯವರ ಪ್ರಕಟವಾಗದ ಆತ್ಮಕಥೆ ಸುತ್ತಲಿನ ವಿವಾದದ ಹಿನ್ನೆಲೆ, ರಕ್ಷಣಾ ಸಚಿವಾಲಯವು ಕಠಿಣ ಮಾರ್ಗಸೂಚಿಗಳನ್ನು ರೂಪಿಸುವ ದಿಕ್ಕಿನಲ್ಲಿ ಕ್ರಮ ಕೈಗೊಂಡಿದೆ. ಸೈನ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಬರೆಯುವ ಮತ್ತು ಪ್ರಕಟಿಸುವ ಪ್ರಕ್ರಿಯೆಯನ್ನು ಸ್ಪಷ್ಟಗೊಳಿಸುವ ಹೊಸ ನಿಯಮಗಳು ಶೀಘ್ರದಲ್ಲೇ ಜಾರಿಯಾಗುವ ಸಾಧ್ಯತೆ ಇದೆ.

ಮಾಜಿ ಸೇನಾ ಮುಖ್ಯಸ್ಥರ ಪುಸ್ತಕ ವಿವಾದ

ನವದೆಹಲಿ, ಫೆ.12: ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ (MM Naravane) ಅವರ ಅಪ್ರಕಟಿತ ಆತ್ಮಚರಿತ್ರೆಯ ವಿವಾದವು ರಕ್ಷಣಾ ಸಚಿವಾಲಯದೊಳಗೆ ಪೊಲೀಸ್ ತನಿಖೆ ಮತ್ತು ನೀತಿ ಪುನರ್ವಿಮರ್ಶೆ ಎರಡನ್ನೂ ಪ್ರಚೋದಿಸಿದೆ. ಸೇವೆಯಲ್ಲಿರುವ ಮತ್ತು ನಿವೃತ್ತ ಸೈನಿಕರು (retired soldiers) ಪುಸ್ತಕಗಳನ್ನು ಬರೆಯುವುದು ಹಾಗೂ ಪ್ರಕಟಿಸುವ ಬಗ್ಗೆ ಕಠಿಣ ಮಾರ್ಗಸೂಚಿಗಳನ್ನು ರೂಪಿಸುವ ದಿಕ್ಕಿನಲ್ಲಿ ಸರ್ಕಾರ ಈಗ ಕ್ರಮ ಕೈಗೊಳ್ಳುತ್ತಿದೆ.

ಈ ವಿವಾದದ ಕೇಂದ್ರಬಿಂದುವಿನಲ್ಲಿ ಜನರಲ್ ನರಾವಣೆಯವರ ಆತ್ಮಕಥೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಇದೆ. ಪ್ರಕಾಶಕ ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ ಹಾಗೂ ಮಾಜಿ ಸೇನಾ ಮುಖ್ಯಸ್ಥರ ಹೇಳಿಕೆಯ ಪ್ರಕಾರ, ಈ ಪುಸ್ತಕ ಇನ್ನೂ ಪ್ರಕಟವಾಗಿಲ್ಲ. ಆದರೆ, ಹಸ್ತಪ್ರತಿಯಂತೆ ಕಾಣುವ ಪ್ರತಿಯೊಂದು ಸಂಸತ್ತಿನಲ್ಲಿ ರಾಹುಲ್ ಗಾಂಧಿ ಅವರು ಕೈಯಲ್ಲಿ ಹಿಡಿದುಕೊಂಡಿರುವುದು ಕಂಡುಬಂದಿತ್ತು. ಇದೇ ವೇಳೆ ಪುಸ್ತಕದ ವಿಷಯಗಳ ಆಧಾರದ ಮೇಲೆ ಒಂದು ನಿಯತಕಾಲಿಕೆಯು ವರದಿಯನ್ನು ಸಹ ಪ್ರಕಟಿಸಿದೆ.

Vijay Divas: ವಿಜಯ್‌ ದಿವಸ್:‌ ಸೈನಿಕರು ಶೌರ್ಯದ ಸಂಕೇತ

ರಕ್ಷಣಾ ಸಚಿವಾಲಯವು ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ಪುಸ್ತಕಗಳಿಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ರೂಪಿಸುತ್ತಿದೆ. ಪ್ರಸ್ತಾವಿತ ಚೌಕಟ್ಟಿನಡಿಯಲ್ಲಿ, ಸೇವೆಯಲ್ಲಿರುವ ಮತ್ತು ನಿವೃತ್ತ ಸೈನಿಕರು ಇಬ್ಬರೂ ಪುಸ್ತಕ ಬರೆಯುವ ಮೊದಲು ಸಚಿವಾಲಯದಿಂದ ಪೂರ್ವಾನುಮತಿ ಪಡೆಯಬೇಕಾಗುತ್ತದೆ.

ಈ ನಿಯಮವನ್ನು ವಿಶೇಷವಾಗಿ ನಿವೃತ್ತ ಸೈನಿಕರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗುತ್ತಿದೆ. ಏಕೆಂದರೆ ಸೇವೆಯಿಂದ ನಿವೃತ್ತಿಯಾದ ನಂತರ ತಮ್ಮ ಅನುಭವಗಳ ಆಧಾರದ ಮೇಲೆ ಹಲವರು ಪುಸ್ತಕಗಳನ್ನು ಬರೆಯುತ್ತಾರೆ. ಪ್ರಸ್ತುತ, ನಿವೃತ್ತ ಸೈನಿಕ ಅಧಿಕಾರಿಗಳು ಪುಸ್ತಕ ಬರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಒಂದು ನಿರ್ದಿಷ್ಟ ಕಾನೂನು ಇಲ್ಲ. ಬದಲಿಗೆ, ಪ್ರಕಟಣೆಯ ಸ್ವಭಾವ ಮತ್ತು ವಿಷಯವಸ್ತುವಿನ ಆಧಾರದ ಮೇಲೆ ವಿಭಿನ್ನ ಕಾನೂನುಗಳು ಹಾಗೂ ಸೇವಾ ನಿಯಮಗಳು ಅನ್ವಯವಾಗುತ್ತವೆ.

ಮೂಲಗಳ ಪ್ರಕಾರ, ರಕ್ಷಣಾ ಸಚಿವಾಲಯದೊಳಗೆ ಗಂಭೀರ ಆಂತರಿಕ ಚರ್ಚೆಗಳು ನಡೆಯುತ್ತಿವೆ. ಸೈನ್ಯಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಬರೆಯುವುದು ಮತ್ತು ಪ್ರಕಟಿಸುವ ಕುರಿತು ಕ್ರಮಗಳನ್ನು ಸ್ಪಷ್ಟಪಡಿಸುವ ಹೊಸ ನಿಯಮಗಳನ್ನು ರೂಪಿಸಲು ವಿವರವಾದ ಮಾತುಕತೆಗಳು ನಡೆಯುತ್ತಿವೆ.

ಪ್ರಸ್ತಾವಿತ ನಿಯಮಗಳಲ್ಲಿ, ಇಂತಹ ಪುಸ್ತಕವನ್ನು ಬರೆಯುವ ಅಥವಾ ಪ್ರಕಟಿಸುವ ಮೊದಲು ಯಾವ ಕ್ರಮಗಳನ್ನು ಅನುಸರಿಸಬೇಕು, ಯಾರ ಅನುಮತಿ ಪಡೆಯಬೇಕು ಹಾಗೂ ಈ ನಿಯಮಗಳನ್ನು ಪಾಲಿಸದಿದ್ದರೆ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬುದನ್ನು ಸ್ಪಷ್ಟಪಡಿಸುವ ಸಾಧ್ಯತೆಯಿದೆ.

ಈ ವಿಷಯದ ಬಗ್ಗೆ ರಕ್ಷಣಾ ಸಚಿವಾಲಯ ಮತ್ತು ಸೇನಾ ಇಲಾಖೆ ಅಧಿಕೃತವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದ್ದರೂ, ಹೊಸ ನಿಯಮಗಳು ಶೀಘ್ರದಲ್ಲೇ ಜಾರಿಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಅಸ್ತಿತ್ವದಲ್ಲಿರುವ ಸೇವಾ ನಿಯಮಗಳು ಮತ್ತು ಅಧಿಕೃತ ರಹಸ್ಯ ಕಾಯ್ದೆಯ ನಿಬಂಧನೆಗಳನ್ನು ಹೊಸ ಚೌಕಟ್ಟಿನಲ್ಲಿ ಸೇರಿಸುವ ಬಗ್ಗೆ ಚರ್ಚೆ ನಡೆದಿದೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಯ ರಕ್ಷಣೆಯನ್ನು ಅತ್ಯಂತ ಮುಖ್ಯವೆಂದು ಪರಿಗಣಿಸಲಾಗಿದೆ.

ಪ್ರಸ್ತುತ ಕಾನೂನು ನಿಬಂಧನೆಗಳ ಅಡಿಯಲ್ಲಿ, ನಿವೃತ್ತ ಅಧಿಕಾರಿಗಳು ಪುಸ್ತಕಗಳನ್ನು ಬರೆಯುವುದನ್ನು ನಿಷೇಧಿಸಲಾಗಿಲ್ಲ. ಆದರೆ, ನಿವೃತ್ತಿಯ ನಂತರವೂ ಅಧಿಕೃತ ರಹಸ್ಯಗಳ ಕಾಯ್ದೆ ಅನ್ವಯಿಸುತ್ತದೆ. ಗೌಪ್ಯ ಅಥವಾ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸುವುದು ಕ್ರಿಮಿನಲ್ ಅಪರಾಧವಾಗಿದೆ.

ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ಸೈನಿಕರು ಅಸಹಾಯಕ ಸ್ಥಿತಿಯಲ್ಲಿದ್ದಾರೆ ; ಪಾಕ್‌ ರಕ್ಷಣಾ ಸಚಿವರೇ ಸೋಲನ್ನು ಒಪ್ಪಿಕೊಂಡ್ರಾ?

ಒಂದು ಪುಸ್ತಕವು ಮಿಲಿಟರಿ ಕಾರ್ಯಾಚರಣೆಗಳು, ಸೂಕ್ಷ್ಮ ಮಾಹಿತಿ ಅಥವಾ ಗೌಪ್ಯ ವಿಷಯಗಳಿಗೆ ಸಂಬಂಧಿಸಿದ ವಿಷಯವನ್ನು ಹೊಂದಿದ್ದರೆ, ಅದನ್ನು ಮೊದಲು ರಕ್ಷಣಾ ಸಚಿವಾಲಯಕ್ಕೆ ಅನುಮೋದನೆಗಾಗಿ ಸಲ್ಲಿಸಬೇಕು. ಸಂಬಂಧಿತ ಇಲಾಖೆಯೊಂದಿಗೆ ವಿಷಯವನ್ನು ಪರಿಶೀಲಿಸಿದ ನಂತರವೇ ಸಚಿವಾಲಯವು ಅನುಮತಿ ನೀಡುತ್ತದೆ.

ಸೇವೆಯಲ್ಲಿರುವ ಸೈನಿಕರಿಗೆ ನಿಯಮಗಳು ಈಗಾಗಲೇ ಕಠಿಣವಾಗಿವೆ. ಯಾವುದೇ ಪುಸ್ತಕ, ಲೇಖನ ಅಥವಾ ಅಂತಹುದೇ ಚಟುವಟಿಕೆಗೆ ಅವರು ಲಿಖಿತ ಅನುಮತಿಯನ್ನು ಪಡೆಯಬೇಕಾಗುತ್ತದೆ. ಗೌಪ್ಯ ಮಾಹಿತಿ, ಮಿಲಿಟರಿ ಕಾರ್ಯಾಚರಣೆಗಳ ವಿವರಗಳು, ಶಸ್ತ್ರಾಸ್ತ್ರ ಸಾಮರ್ಥ್ಯಗಳು, ಗುಪ್ತಚರ ಮಾಹಿತಿಗಳು ಅಥವಾ ರಾಷ್ಟ್ರೀಯ ಭದ್ರತೆ ಅಥವಾ ವಿದೇಶಿ ಸಂಬಂಧಗಳ ಮೇಲೆ ಪರಿಣಾಮ ಬೀರುವ ಯಾವುದೇ ಮಾಹಿತಿಯನ್ನು ಪ್ರಕಟಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಇನ್ನು ವಿವಾದಕ್ಕೆ ಕಾರಣವಾದ ಪುಸ್ತಕದ ಬಗ್ಗೆ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಸ್ಪಷ್ಟೀಕರಣ ನೀಡಿದೆ. ಈ ಪುಸ್ತಕ ಇನ್ನೂ ಪ್ರಕಟಣೆಗೆ ಬಂದಿಲ್ಲ. ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಈ ಪುಸ್ತಕದ ಯಾವುದೇ ಪ್ರತಿಗಳನ್ನು ಮುದ್ರಣ ಅಥವಾ ಡಿಜಿಟಲ್ ರೂಪದಲ್ಲಿ ಪ್ರಕಟಿಸಿಲ್ಲ, ವಿತರಿಸಿಲ್ಲ, ಮಾರಾಟ ಮಾಡಿಲ್ಲ ಅಥವಾ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿಲ್ಲ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ತಿಳಿಸಿದೆ.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆತ್ಮಚರಿತ್ರೆಯ ಆಯ್ದ ಭಾಗಗಳನ್ನು ಓದಿದ ನಂತರ ಈ ವಿಷಯವು ರಾಜಕೀಯ ವಿವಾದಕ್ಕೆ ಕಾರಣವಾಯಿತು. ಸಂಸತ್ತಿನಲ್ಲಿ ಹಸ್ತಪ್ರತಿ ಕಾಣಿಸಿಕೊಂಡ ನಂತರ ಪ್ರಕಟವಾಗದ ಮತ್ತು ಅಸ್ಪಷ್ಟವಾಗಿರುವ ಪಠ್ಯವು ಸಾರ್ವಜನಿಕ ವಲಯಕ್ಕೆ ಹೇಗೆ ಪ್ರವೇಶಿಸಿತು ಎಂಬ ಪ್ರಶ್ನೆಗಳು ತೀವ್ರಗೊಂಡವು.