ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಲೂಚಿಸ್ತಾನದಲ್ಲಿ ಪಾಕಿಸ್ತಾನದ ಸೈನಿಕರು ಅಸಹಾಯಕ ಸ್ಥಿತಿಯಲ್ಲಿದ್ದಾರೆ ; ಪಾಕ್‌ ರಕ್ಷಣಾ ಸಚಿವರೇ ಸೋಲನ್ನು ಒಪ್ಪಿಕೊಂಡ್ರಾ?

Khawaja Asif: ಪಾಕಿಸ್ತಾನದ ಅತಿದೊಡ್ಡ ಆದರೆ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭದ್ರತಾ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದ್ದು, ಇಂತಹ ಸಂದರ್ಭದಲ್ಲಿ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನಿ ಸೈನಿಕರು ಅಸಹಾಯಕ ಸ್ಥಿತಿಯಲ್ಲಿ ಇದ್ದಾರೆ ಎಂದು ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ.

ಪಾಕಿಸ್ತಾನದ ಸೈನಿಕರು ಅಸಹಾಯಕ ಸ್ಥಿತಿಯಲ್ಲಿದ್ದಾರೆ; ಪಾಕ್‌ ರಕ್ಷಣಾ ಸಚಿವ

ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ (ಸಂಗ್ರಹ ಚಿತ್ರ) -

Priyanka P
Priyanka P Feb 4, 2026 1:14 PM

ಇಸ್ಲಾಮಾಬಾದ್: ಬಲೂಚಿಸ್ತಾನ ಪ್ರಾಂತ್ಯದ ವಿಶಾಲ ವಿಸ್ತೀರ್ಣದ ಕಾರಣದಿಂದ ಬಲೂಚ್ ಬಂಡುಕೋರರ ವಿರುದ್ಧ ಹೋರಾಡುವಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳು (Pakistani Army) ಅಸಹಾಯಕ ಸ್ಥಿತಿಯಲ್ಲಿ ಇವೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ (Khawaja Asif) ಒಪ್ಪಿಕೊಂಡಿದ್ದಾರೆ. ಬಲೂಚಿಸ್ತಾನ (Balochistan) ಪ್ರಾಂತ್ಯದ ಹಲವು ಪಟ್ಟಣಗಳಲ್ಲಿ ಬಲೂಚ್ ಬಂಡುಕೋರರು ಏಕಕಾಲದಲ್ಲಿ ದಾಳಿ ನಡೆಸಿ ಕನಿಷ್ಠ 80 ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದು, 30ಕ್ಕಿಂತ ಹೆಚ್ಚು ಸರ್ಕಾರಿ ಆಸ್ತಿಗಳನ್ನು ನಾಶಪಡಿಸಿದ ಕೆಲವು ದಿನಗಳ ನಂತರ ರಕ್ಷಣಾ ಸಚಿವರ ಹೇಳಿಕೆ ಹೊರಬಂದಿದೆ.

ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯನ್ನುದ್ದೇಶಿಸಿ ಮಾತನಾಡಿದ ಆಸಿಫ್, ದೇಶದ ಅತಿದೊಡ್ಡ ಆದರೆ, ಕಡಿಮೆ ಜನಸಂಖ್ಯೆ ಹೊಂದಿರುವ ಪ್ರಾಂತ್ಯದಲ್ಲಿ ಸೈನಿಕರು ಎದುರಿಸುತ್ತಿರುವ ಭೌಗೋಳಿಕ ಸವಾಲುಗಳನ್ನು ವಿವರಿಸಿದರು. ಪ್ರತ್ಯೇಕತಾವಾದಿ ಪಡೆಗಳು ಕನಿಷ್ಠ 12 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ನಂತರ ಗಂಭೀರ ಭದ್ರತಾ ಪರಿಸ್ಥಿತಿ ಉಂಟಾಗಿದೆ. ಈ ದಾಳಿಗಳು ಇತ್ತೀಚಿನ ವರ್ಷಗಳಲ್ಲೇ ಪ್ರಾಣಹಾನಿ ಉಂಟುಮಾಡಿದ ಅತ್ಯಂತ ಮಾರಕ ಭದ್ರತಾ ಬಿಕ್ಕಟ್ಟಾಗಿದೆ ಎಂದು ಹೇಳಿದರು. ಇದರ ಬೆನ್ನಲ್ಲೇ ಪ್ರಾಂತ್ಯದಾದ್ಯಂತ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 177 ದಂಗೆಕೋರರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಲೂಚ್‌ ಮಹಿಳಾ ಆತ್ಮಾಹುತಿ ಬಾಂಬರ್‌ಗಳಿಂದ ಪಾಕಿಸ್ತಾನ ಸೇನೆ ಛಿದ್ರ-ಛಿದ್ರ; ಕಾರ್ಯಾಚರಣೆ ಕುರಿತು ನಾಯಕರು ಹೇಳಿದ್ದೇನು?

ಖವಾಜಾ ಆಸಿಫ್ ಹೇಳಿದ್ದೇನು?

ಭೌಗೋಳಿಕವಾಗಿ ಬಲೂಚಿಸ್ತಾನ ಪಾಕಿಸ್ತಾನದ ಶೇ. 40 ಕ್ಕಿಂತ ಹೆಚ್ಚು ಭಾಗವನ್ನು ಹೊಂದಿದೆ. ಅದನ್ನು ನಿಯಂತ್ರಿಸುವುದು ಜನನಿಬಿಡ ನಗರಕ್ಕಿಂತ ಬಹಳ ಕಷ್ಟಕರ. ಅಲ್ಲಿ ಬೃಹತ್ ಪ್ರಮಾಣದ ಸೈನಿಕರ ನಿಯೋಜನೆಯ ಅಗತ್ಯವಿದೆ. ನಮ್ಮ ಪಡೆಗಳು ಅಲ್ಲಿ ನಿಯೋಜಿಸಲ್ಪಟ್ಟಿದ್ದು, ಬಂಡುಕೋರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿವೆ. ಆದರೆ, ಇಷ್ಟು ವಿಶಾಲ ಪ್ರದೇಶವನ್ನು ಕಾವಲು ಕಾಯುವುದು ಮತ್ತು ಗಸ್ತು ತಿರುಗುವುದು ದೈಹಿಕವಾಗಿ ಅವರಿಗೆ ಅಸಹಾಯಕತೆಯನ್ನುಂಟುಮಾಡುತ್ತಿದೆ ಎಂದು ಅವರು ಹೇಳಿದರು.

ವಾರಾಂತ್ಯದ ಹಿಂಸಾಚಾರದಲ್ಲಿ ಕನಿಷ್ಠ 33 ನಾಗರಿಕರು ಮತ್ತು 13 ಮಂದಿ ಭದ್ರತಾ ಪಡೆಗಳು ಮೃತಪಟ್ಟಿದ್ದಾರೆ. ದಾಳಿಗಳ ಹೊಣೆ ಹೊತ್ತಿರುವ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಎಂಬ ಬಂಡುಕೋರ ಸಂಘಟನೆಯೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಖ್ವಾಜಾ ಆಸಿಫ್ ಸ್ಪಷ್ಟಪಡಿಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರ ಹತ್ಯೆಗೆ ಕಾರಣರಾದ ಭಯೋತ್ಪಾದಕರೊಂದಿಗೆ ಯಾವುದೇ ಮಾತುಕತೆ ನಡೆಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಅಪರಾಧಿಗಳು ಮತ್ತು ಪ್ರತ್ಯೇಕತಾವಾದಿ ಸಂಘಟನೆಗಳ ನಡುವೆ ನಂಟು ಇದೆ ಎಂದು ಅವರು ಆರೋಪಿಸಿದರು. ಬಿಎಲ್‌ಎ ಹೆಸರಿನ ಅಡಿಯಲ್ಲಿ ಅಪರಾಧಿ ಗ್ಯಾಂಗ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಆ ಸಂಘಟನೆ ಕಳ್ಳಸಾಗಣೆಗಾರರಿಗೆ ರಕ್ಷಣೆ ನೀಡುತ್ತಿದೆ ಎಂಬುದಾಗಿ ಖ್ವಾಜಾ ಆಸಿಫ್ ಹೇಳಿದ್ದಾರೆ.

ಬಲೂಚ್ ಬಂಡಾಯದ ಇತಿಹಾಸ

ಇರಾನ್ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿರುವ ಬಲೂಚಿಸ್ತಾನದಲ್ಲಿ, ಹೆಚ್ಚಿನ ಸ್ವಾಯತ್ತತೆ ಹಾಗೂ ತನ್ನ ನೈಸರ್ಗಿಕ ಸಂಪನ್ಮೂಲಗಳಲ್ಲಿ ಹೆಚ್ಚಿನ ಪಾಲು ಬೇಕೆಂದು ಆಗ್ರಹಿಸುವ ಬಲೂಚ್ ಜನಾಂಗೀಯ ಪ್ರತ್ಯೇಕತಾವಾದಿಗಳ ನೇತೃತ್ವದಲ್ಲಿ ದಶಕಗಳಿಂದ ಬಂಡಾಯ ನಡೆಯುತ್ತಿದೆ.

ಪಾಕಿಸ್ತಾನಕ್ಕೆ ಕಲಾತ್ ಎಂಬ ಸಂಸ್ಥಾನವನ್ನು ಸೇರಿಸಿಕೊಂಡ ತಕ್ಷಣವೇ ಬಲೂಚ್ ಜನರ ಪ್ರತಿರೋಧ ಆರಂಭವಾಯಿತು. 1948, 1958–59, 1962–63, 1973–77 ಮತ್ತು 2000ರ ದಶಕದ ಆರಂಭದಿಂದ ಇಂದಿನವರೆಗೂ ಬಲೂಚಿಸ್ತಾನದಲ್ಲಿ ದಂಗೆಗಳು ನಡೆದಿವೆ.

ಭಾರತದ ಮೇಲೆ ನಿಗಾ ಇಟ್ಟಿರುವ ಪಾಕಿಸ್ತಾನ? ಸಾಂಬಾದಲ್ಲಿ ಮತ್ತೊಂದು ಶಂಕಿತ ಡ್ರೋನ್ ಪತ್ತೆ

ಖನಿಜ ಸಂಪತ್ತು, ನೈಸರ್ಗಿಕ ಅನಿಲ, ಕಲ್ಲಿದ್ದಲು, ತಾಮ್ರ, ಚಿನ್ನ ಹಾಗೂ ಗ್ವಾದರ್‌ನಂತಹ ಅಮೂಲ್ಯ ಸಂಪತ್ತುಗಳಿಂದ ಬಲೂಚಿಸ್ತಾನ ಅತ್ಯಂತ ಸಮೃದ್ಧವಾಗಿದೆ. ಈ ಅಪಾರ ಸಂಪತ್ತಿದ್ದರೂ ಬಲೂಚಿಸ್ತಾನವು ಪಾಕಿಸ್ತಾನದ ಅತಿ ಬಡ ಪ್ರಾಂತ್ಯವಾಗಿಯೇ ಉಳಿದಿದೆ.

ಪ್ರಾಂತ್ಯದಲ್ಲಿ ಸಮರ್ಪಕ ರಸ್ತೆ, ಆಸ್ಪತ್ರೆಗಳು, ಶಾಲೆಗಳು, ವಿದ್ಯುತ್ ಮತ್ತು ಉದ್ಯೋಗಾವಕಾಶಗಳ ಕೊರತೆಯಿದೆ. ಬಲೂಚಿಸ್ತಾನದ ಸಂಪನ್ಮೂಲಗಳಿಂದ ಲಭಿಸುವ ಹೆಚ್ಚಿನ ಲಾಭವನ್ನು ಪಂಜಾಬ್ ಮತ್ತು ಕೇಂದ್ರ ಸರ್ಕಾರವೇ ಪಡೆದುಕೊಳ್ಳುತ್ತಿವೆ ಎಂಬ ಆರೋಪಗಳಿವೆ. ಇದರ ಪರಿಣಾಮವಾಗಿ ಬಲೂಚಿಸ್ತಾನ ಆರ್ಥಿಕ ಹಾಗೂ ರಾಜಕೀಯವಾಗಿ ಅಂಚಿನಲ್ಲೇ ಉಳಿಯುವಂತಾಗಿದೆ.

ಕಾಲಕ್ರಮೇಣ ಬಿಎಲ್‌ಎ (ಬಲೂಚ್ ಲಿಬರೇಶನ್ ಆರ್ಮಿ) ಸೇರಿದಂತೆ ಪ್ರತ್ಯೇಕತಾವಾದಿ ಸಂಘಟನೆಗಳು ಭದ್ರತಾ ಪಡೆಗಳು, ಮೂಲಸೌಕರ್ಯಗಳು ಹಾಗೂ ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಸಂಬಂಧಿತ ಯೋಜನೆಗಳನ್ನು ಗುರಿಯಾಗಿಸಿಕೊಂಡಿವೆ. ಸಿಪಿಇಸಿ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಗ್ವಾದರ್ ಬಂದರು ಸೇರಿದಂತೆ ಚೀನಾದ ಯೋಜನೆಗಳ ಮೇಲೆ ದಾಳಿ ನಡೆಸುತ್ತಿವೆ.