ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನುಡಿದಂತೆ ನಡೆಯುತ್ತಿರುವ ಬಿಜೆಪಿ: ಪಶ್ಚಿಮ ಬಂಗಾಳದಲ್ಲಿ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ; 18 ಬಾಂಗ್ಲಾದೇಶಿ ಪ್ರಜೆಗಳ ಅರೆಸ್ಟ್

Illegal Immigrants in West Bengal: ಪಶ್ಚಿಮ ಬಂಗಾಳದಲ್ಲಿ ಆರು ಮಕ್ಕಳು ಸೇರಿ 18 ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲರೂ ಬಾಂಗ್ಲಾದೇಶದ ನಿವಾಸಿಗಳಾಗಿದ್ದು, ಏಜೆಂಟರ ಸಹಾಯದಿಂದ ಗಡಿಯ ಬೇಲಿ ದಾಟಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 18 ಬಾಂಗ್ಲಾದೇಶಿ ಪ್ರಜೆಗಳ ಅರೆಸ್ಟ್

ಸಾಂದರ್ಭಿಕ ಚಿತ್ರ -

Priyanka P
Priyanka P Jun 3, 2026 4:09 PM

ಕೋಲ್ಕತ್ತಾ, ಜೂ. 3: ಪಶ್ಚಿಮ ಬಂಗಾಳದಲ್ಲಿ (West Bengal) ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಅಕ್ರಮ ವಲಸಿಗರ ವಿರುದ್ಧ ತನ್ನ ಕಠಿಣ ಕ್ರಮಗಳನ್ನು ತೀವ್ರಗೊಳಿಸುತ್ತಿದೆ. ಇದೀಗ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಆರು ಮಕ್ಕಳು ಸೇರಿ 18 ಬಾಂಗ್ಲಾದೇಶಿ ಪ್ರಜೆಗಳನ್ನು (Bangladeshi Nationals) ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ (ಜೂನ್‌ 2) ರಾತ್ರಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು 18 ಮಂದಿಯನ್ನು ಅರೆಸ್ಟ್‌ ಮಾಡಿದರು.

ಪ್ರಾಥಮಿಕ ವಿಚಾರಣೆಯ ಪ್ರಕಾರ, ಎಲ್ಲ 18 ಮಂದಿ ಬಂಧಿತರು ಬಾಂಗ್ಲಾದೇಶದ ನಿವಾಸಿಗಳು ಎನ್ನುವುದು ತಿಳಿದು ಬಂದಿದೆ. ಅವರು ಏಜೆಂಟರ ಸಹಾಯದಿಂದ ಗಡಿ ಬೇಲಿಯನ್ನು ದಾಟಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಪೊಲೀಸ್ ಮೂಲಗಳು ತಿಳಿಸಿರುವ ಪ್ರಕಾರ, ಈ ಗುಂಪು ಕಳೆದ ಮೂರರಿಂದ ಮೂರೂವರೆ ವರ್ಷಗಳಿಂದ ಕುಲ್ತಾಲಿಯಲ್ಲಿ ವಾಸಿಸುತ್ತಿತ್ತು. ಅವರಲ್ಲಿ ಕೆಲವರು ಸ್ಥಳೀಯ ಇಟ್ಟಿಗೆ ಕುಲುಮೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

18 ಬಂಧಿತರ ಗುರುತಿನ ದಾಖಲೆಗಳು ಮತ್ತು ಹಿನ್ನೆಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಂಡ ನಂತರ ಅವರನ್ನು ನಿಗದಿತ ತಾತ್ಕಾಲಿಕ ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ. ಅಲ್ಲಿಂದ ಅವರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಲು ಆಡಳಿತಾತ್ಮಕ ಕಾರ್ಯವಿಧಾನಗಳನ್ನು ಪ್ರಾರಂಭಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ರೌಡಿಗಳ ಹೆಡೆಮುರಿ ಕಟ್ಟಿ ಅರೆಬೆತ್ತಲೆ ಮೆರವಣಿಗೆ ನಡೆಸಿದ ಪೊಲೀಸರು: ಬದಲಾಗುತ್ತಿದೆ ಪಶ್ಚಿಮ ಬಂಗಾಳ

ಬಂಗಾಳ ಸರ್ಕಾರವು ದಾಖಲೆರಹಿತ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಪ್ರಜೆಗಳ ವಿರುದ್ಧ ಕಠಿಣ ವಿಧಾನವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ ನಂತರ ಅಕ್ರಮ ವಲಸೆಯ ವಿರುದ್ಧ ರಾಜ್ಯಾದ್ಯಂತ ಕ್ರಮ ಕೈಗೊಳ್ಳಲಾಗಿದೆ. ಈ ನಡುವೆ ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ.

ಮೇ 23ರಂದು ರಾಜ್ಯದ ಗೃಹ ಹಾಗೂ ಬೆಟ್ಟ ಪ್ರದೇಶ ವ್ಯವಹಾರಗಳ ಇಲಾಖೆಯ ವಿದೇಶಿಯರ ವಿಭಾಗ ಆದೇಶ ಹೊರಡಿಸಿ, ಗಡಿಪಾರು ಪ್ರಕ್ರಿಯೆಗಾಗಿ ಕಾಯುತ್ತಿರುವ ವಿದೇಶಿ ಪ್ರಜೆಗಳನ್ನು ಇರಿಸಲು ಎಲ್ಲ ಜಿಲ್ಲಾ ಆಡಳಿತಗಳು ತಾತ್ಕಾಲಿಕ ವಸತಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ನಿರ್ದೇಶಿಸಿತು. ಗಡಿಪಾರು ಮತ್ತು ವಾಪಸಾತಿಗೆ ಕಾನೂನು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಬಂಧಿತ ವಿದೇಶಿಯರು ಮತ್ತು ಬಿಡುಗಡೆಯಾದ ವಿದೇಶಿ ಕೈದಿಗಳಿಗೆ ವಾಸಿಸಲು ಅಗತ್ಯ ಸೌಲಭ್ಯಗಳನ್ನು ಜಿಲ್ಲಾಧಿಕಾರಿಗಳು ಕಲ್ಪಿಸಬೇಕು ಎಂದು ಸೂಚಿಸಲಾಗಿದೆ.

ಈ ಆದೇಶವು ರಾಜ್ಯ ಸರ್ಕಾರದ ಪತ್ತೆ, ಬಂಧನ ಮತ್ತು ಗಡಿಪಾರು ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿತು. ದಾಖಲೆರಹಿತ ವಿದೇಶಿ ಪ್ರಜೆಗಳನ್ನು ಅವರ ತಾಯ್ನಾಡಿಗೆ ಕಳುಹಿಸುವ ಮೊದಲು ಅವರಿಗೆ ವಸತಿ ಕಲ್ಪಿಸಲು ರಚನಾತ್ಮಕ ಕಾರ್ಯವಿಧಾನವನ್ನು ರಚಿಸಿತು.

ಮುರ್ಷಿದಾಬಾದ್ ಮತ್ತು ಉತ್ತರ 24 ಪರಗಣಗಳ ಗಡಿ ಪ್ರದೇಶಗಳಿಂದ ಹಿಡಿದು ಉತ್ತರ ಬಂಗಾಳದ ಸಿಲಿಗುರಿವರೆಗೆ, ಸ್ಥಳೀಯ ಆಡಳಿತಗಳು ಪರಿಶೀಲನೆ ಮತ್ತು ಗಡೀಪಾರು ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೆ ಬಂಧಿತರನ್ನು ಇರಿಸಲು ಸೂಕ್ತ ಸೌಲಭ್ಯಗಳನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿವೆ.