ಪುಣೆ: ಏಳನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲು 100 ರೂ. ಸುಪಾರಿ ನೀಡಿರುವ ಆತಂಕಕಾರಿ ಘಟನೆ ಪುಣೆಯಲ್ಲಿ ನಡೆದಿದೆ. ಇಲ್ಲಿನ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಓದುತ್ತಿದ್ದ ಈ ಏಳನೇ ತರಗತಿ ವಿದ್ಯಾರ್ಥಿ ತನ್ನ ಸಹಪಾಠಿಯನ್ನು ಕೊಲೆ ಮಾಡುವಂತೆ 9ನೇ ತರಗತಿ ವಿದ್ಯಾರ್ಥಿಗೆ ಸುಪಾರಿ ನೀಡಿದ್ದಾನೆ. ವಿದ್ಯಾರ್ಥಿಯಿಂದ ಸುಪಾರಿ (Supari) ಪಡೆದುಕೊಂಡ ವಿದ್ಯಾರ್ಥಿ ಶಾಲಾ ಆಡಳಿತ ಮಂಡಳಿ ಬಳಿಗೆ ಹೋಗಿ ತಪ್ಪೊಪ್ಪಿಕೊಳ್ಳುವ ಮೂಲಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಸುಪಾರಿ ನೀಡಿದ ಈ 7ನೇ ತರಗತಿ ವಿದ್ಯಾರ್ಥಿಯ ಮೇಲೆ ಯಾವುದೇ ಕ್ರಮವನ್ನು ಕೈಗೊಳ್ಳದ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಇಬ್ಬರು ಶಿಕ್ಷಕರ ವಿರುದ್ಧ ವಿದ್ಯಾರ್ಥಿನಿಯ ತಂದೆ ನೀಡಿದ ಪೊಲೀಸ್ ದೂರನ್ನು ಆಧರಿಸಿ ಪೊಲೀಸರು ಈ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತನ್ನ ರಿಪೋರ್ಟ್ ಕಾರ್ಡ್ ನಲ್ಲಿ ಹೆತ್ತವರ ಸಹಿಯನ್ನು ನಕಲು ಮಾಡಿರುವ ವಿಚಾರವನ್ನು ಈ ವಿದ್ಯಾರ್ಥಿನಿ ಕ್ಲಾಸ್ ಟೀಚರ್ ಗೆ ಹೇಳಿದಳು ಎಂದು ಸಿಟ್ಟುಗೊಂಡ ಈ 7ನೇ ತರಗತಿ ವಿದ್ಯಾರ್ಥಿ ಆಕೆಗೊಂದು ಪಾಠ ಕಲಿಸಬೇಕೆಂದು 9ನೇ ತರಗತಿ ವಿದ್ಯಾರ್ಥಿಗೆ ಆಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡುವಂತೆ 100 ರೂಪಾಯಿಗೆ ಸುಪಾರಿ ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆ ಬೆಳಕಿಗೆ ಬಂದ ಬಳಿಕವೂ ಶಾಲಾ ಆಡಳಿತ ಮಂಡಳಿ ಯಾವುದೇ ಕ್ರಮವನ್ನು ಆ ವಿದ್ಯಾರ್ಥಿಯ ವಿರುದ್ಧ ಕೈಗೊಂಡಿಲ್ಲ, ಮತ್ತು ಹಲವಾರು ದೂರುಗಳನ್ನು ನೀಡಿದರೂ ಅದಕ್ಕೆ ಸ್ಪಂದಿಸಲಿಲ್ಲ ಎಂದು ವಿದ್ಯಾರ್ಥಿನಿಯ ಹೆತ್ತವರು ಆರೋಪಿಸಿದ್ದಾರೆ. ಬಳಿಕ ವಿದ್ಯಾರ್ಥಿನಿಯ ಹೆತ್ತವರು ನ.23ರಂದು ಪೊಲೀಸರಿಗೆ ದೂರು ಸಲ್ಲಿಸಿದ್ದು, ಪೊಲೀಸರು ಬಳಿಕ FIR ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನೂ: Mahakumbh Stampede: ಮಹಾ ಕುಂಭಮೇಳದ ಕಾಲ್ತುಳಿತ; ಹೇಗಾಯ್ತು ಈ ದುರಂತ?
ಜ್ಯುವೆನೈಲ್ ಜಸ್ಟಿಸ್ ಆಕ್ಟ್‌ನ ಸೆಕ್ಷನ್ 75(ವಿದ್ಯಾರ್ಥಿಗಳ ಪಾಲನೆ ಮತ್ತು ರಕ್ಷಣೆ), ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 3(5) (ಒಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳಿಂದ ನಡೆಸಲಾದ ಅಪರಾಧ ಚಟುವಟಿಕೆ) ಅಡಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಇಬ್ಬರು ಶಿಕ್ಷಕರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ಅವರನ್ನು ವಿಚಾರಣೆಗೆಂದು ಕರೆದಿದ್ದಾರೆ.
ಡೌಂಡ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಗೋಪಾಲ್ ಪವಾರ್ ಹೇಳಿದಂತೆ, ಇಬ್ಬರು ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಈ ವಿಷಯದ ಬಗ್ಗೆ ಮಾಹಿತಿ ಇದ್ದರೂ ಇದನ್ನು ವರದಿ ಮಾಡುವಲ್ಲಿ ವಿಫಲರಾಗಿದ್ದಾರೆ ಮಾತ್ರವಲ್ಲದೇ ಈ ಗಂಭೀರ ವಿಚಾರವನ್ನು ತಮ್ಮಲ್ಲೇ ಇರಿಸಿಕೊಂಡಿದ್ದಾರೆ. ಆರೊಪಿ ವಿದ್ಯಾರ್ಥಿ 12 ವರ್ಷಗಳಾಗಿರದಿದ್ದ ಕಾರಣ ಈತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲವೆಂದು ತಿಳಿದುಬಂದಿದೆ. ಜುವೈನಲ್ ಜಸ್ಟಿಸ್ ಕಾಯ್ದೆಯು 12 ವರ್ಷದೊಳಗಿನ ಮಕ್ಕಳ ಮೇಲೆ ಯಾವುದೇ ರೀತಿಯ ಕ್ರಿಮಿನಲ್ ಕ್ರಮ ಕೈಗೊಳ್ಳಲು ಅನುಮತಿ ನೀಡುವುದಿಲ್ಲ.