Lex Fridman Podcast: ಟೀಕೆ ಪ್ರಜಾಪ್ರಭುತ್ವದ ಆತ್ಮ; ಲೆಕ್ಸ್ ಫ್ರಿಡ್‌ಮನ್ ಪಾಡ್‌ಕ್ಯಾಸ್ಟ್‌ನಲ್ಲಿ ಮೋದಿ ಅಭಿಮತ
Lex Fridman Podcast: ʼʼಟೀಕೆಗಳನ್ನು ನಾನು ಸ್ವಾಗತಿಸುತ್ತೇನೆ. ಆದರೆ ತೀಕ್ಷ್ಣ ಮತ್ತು ನಿಷ್ಪಕ್ಷಪಾತ ನಿಜವಾದ ಟೀಕೆಯನ್ನು ಈ ದಿನಗಳಲ್ಲಿ ಕಂಡುಹಿಡಿಯುವುದು ಕಷ್ಟ. ಟೀಕೆ ಮತ್ತು ಆರೋಪಗಳ ನಡುವೆ ವ್ಯತ್ಯಾಸವಿದೆʼʼ ಎಂದು ಮೋದಿ ಅಮೆರಿಕದ ಪಾಡ್‌ಕ್ಯಾಸ್ಟರ್, ಕಂಪ್ಯೂಟರ್ ವಿಜ್ಞಾನಿ ಲೆಕ್ಸ್ ಫ್ರಿಡ್‌ಮನ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ.

ಹೊಸದಿಲ್ಲಿ: ಟೀಕೆಗಳನ್ನು ಪ್ರಜಾಪ್ರಭುತ್ವದ ಆತ್ಮ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬಣ್ಣಿಸಿದರು. ʼʼಟೀಕೆಗಳನ್ನು ನಾನು ಸ್ವಾಗತಿಸುತ್ತೇನೆ. ಆದರೆ ತೀಕ್ಷ್ಣ ಮತ್ತು ನಿಷ್ಪಕ್ಷಪಾತ ನಿಜವಾದ ಟೀಕೆಯನ್ನು ಈ ದಿನಗಳಲ್ಲಿ ಕಂಡುಹಿಡಿಯುವುದು ಕಷ್ಟ. ಟೀಕೆ ಮತ್ತು ಆರೋಪಗಳ ನಡುವೆ ವ್ಯತ್ಯಾಸವಿದೆʼʼ ಎಂದು ಹೇಳಿದರು. ಅಮೆರಿಕದ ಪಾಡ್‌ಕ್ಯಾಸ್ಟರ್, ಕಂಪ್ಯೂಟರ್ ವಿಜ್ಞಾನಿ ಲೆಕ್ಸ್ ಫ್ರಿಡ್‌ಮನ್ (Lex Fridman) ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಹಲವು ವಿಚಾರಗಳನ್ನು ತೆರೆದಿಟ್ಟರು (Lex Fridman Podcast). ಈ ಬಹುನಿರೀಕ್ಷಿತ ಪಾಡ್‌ಕ್ಯಾಸ್ಟ್ ಭಾನುವಾರ (ಮಾ. 16) ಬಿಡುಗಡೆಯಾಗಿದೆ. ಇದು ಮೋದಿ ಅವರ ಮೊದಲ ಅಂತಾರಾಷ್ಟ್ರೀಯ ಪಾಡ್‌ಕ್ಯಾಸ್ಟ್ ಎನ್ನುವುದು ವಿಶೇಷ. ಈ ವೇಳೆ ಮೋದಿ ಯಾವೆಲ್ಲ ವಿಚಾರಗಳ ಕುರಿತು ಮಾತನಾಡಿದ್ದಾರೆ ಎನ್ನುವ ವಿವರ ಇಲ್ಲಿದೆ.
ನಿಮ್ಮ ವಿರುದ್ಧ ಮಾಡಲಾಗುವ ಟೀಕೆಗಳನ್ನು ಹೇಗೆ ಎದುರಿಸುತ್ತೀರಿ? ಎಂದು ಕೇಳಿದಾಗ, ಪ್ರಧಾನಿ ಮೋದಿ ಅದನ್ನು ಸ್ವಾಗತಿಸುವುದಾಗಿ ಹೇಳಿದರು. "ಟೀಕೆಯು ಪ್ರಜಾಪ್ರಭುತ್ವದ ಆತ್ಮ ಎಂಬುದು ನನ್ನ ನಂಬಿಕೆ. ಪ್ರಜಾಪ್ರಭುತ್ವವು ನಿಜವಾಗಿಯೂ ನಿಮ್ಮ ರಕ್ತನಾಳಗಳಲ್ಲಿ ಹರಿಯುತ್ತಿದ್ದರೆ, ನೀವು ಅದನ್ನು ಸ್ವೀಕರಿಸಬೇಕು" ಎಂದು ಅವರು ಹೇಳಿದರು. "ನಾವು ಹೆಚ್ಚು ಟೀಕೆಗಳನ್ನು ಎದುರಿಸುತ್ತಿರಬೇಕಾಗುತ್ತದೆ. ಅದು ತೀಕ್ಷ್ಣ ಮತ್ತು ತಿಳುವಳಿಕೆಯುಳ್ಳದ್ದಾಗಿರಬೇಕು. ನಮ್ಮ ಧರ್ಮಗ್ರಂಥಗಳಲ್ಲಿ ಟೀಕಾಕಾರರನ್ನು ಯಾವಾಗಲೂ ಹತ್ತಿರದಲ್ಲಿರಿಸಿಕೊಳ್ಳಿ ಎಂದು ಹೇಳಲಾಗಿದೆ. ಟೀಕಾಕಾರರು ನಿಮ್ಮ ಹತ್ತಿರದ ಸಂಗಾತಿಗಳಾಗಿರಬೇಕು. ನಿಜವಾದ ಟೀಕೆಯ ಮೂಲಕ, ನೀವು ತ್ವರಿತವಾಗಿ ಸುಧಾರಿಸಬಹುದುʼʼ ಎಂದು ಹೇಳಿದರು.
ಮೋದಿ ಅವರ ಪಾಡ್‌ಕ್ಯಾಸ್ಟ್ ಇಲ್ಲಿದೆ
A wonderful conversation with @lexfridman, covering a wide range of subjects. Do watch! https://t.co/G9pKE2RJqh
— Narendra Modi (@narendramodi) March 16, 2025
"ಮೊದಲೇ ಹೇಳಿದಂತೆ ನಾವು ಹೆಚ್ಚು ಟೀಕೆಗಳನ್ನು ಹೊಂದಿರಬೇಕು ಎಂದು ನಾನು ಬಯಸುತ್ತೇನೆ. ಆದರೆ ಇತ್ತೀಚಿನ ದಿನಗಳಲ್ಲಿ, ನಾವು ನೋಡುತ್ತಿರುವುದು ನಿಜವಾದ ಟೀಕೆಯಲ್ಲ. ನಿಜವಾದ ಟೀಕೆಗೆ ಸಮಗ್ರ ಅಧ್ಯಯನ, ಆಳವಾದ ಸಂಶೋಧನೆ ಮತ್ತು ಎಚ್ಚರಿಕೆಯ ವಿಶ್ಲೇಷಣೆಯ ಅಗತ್ಯವಿದೆ. ಇದು ಸುಳ್ಳುಗಳಿಂದ ಸತ್ಯವನ್ನು ಹೊರಗೆಳೆಯುವಂತಿರಬೇಕು. ಇತ್ತೀಚೆಗೆ ಜನರು ಶಾರ್ಟ್‌ಕಟ್‌ಗಳನ್ನು ಹುಡುಕುತ್ತಾರೆ. ಸಂಶೋಧನೆಗೆ ಬೆಲೆ ಇಲ್ಲದಂತಾಗಿದೆ. ನಿಜವಾದ ದೌರ್ಬಲ್ಯಗಳನ್ನು ಗುರುತಿಸುವ ಬದಲು ಆರೋಪ ಮಾಡುತ್ತಾರೆ" ಎಂದು ಮೋದಿ ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿಯನ್ನೂ ಓದಿ: Pawan Kalyan: "ಭಾರತಕ್ಕೆ ಎರಡಲ್ಲ, ಬಹು ಭಾಷೆಗಳು ಬೇಕು" ; ಸ್ಟ್ಯಾಲಿನ್‌ಗೆ ಕೌಂಟರ್ ಕೊಟ್ಟ ಪವನ್ ಕಲ್ಯಾಣ್
ಬಲವಾದ ಪ್ರಜಾಪ್ರಭುತ್ವಕ್ಕಾಗಿ ನಿಜವಾದ ಟೀಕೆ ಅಗತ್ಯ ಎಂದ ಪಿಎಂ ಮೋದಿ, "ಆರೋಪಗಳಿಂದ ಯಾರಿಗೂ ಪ್ರಯೋಜನವಿಲ್ಲ. ಇದು ಅನಗತ್ಯ ಸಂಘರ್ಷಗಳಿಗೆ ಕಾರಣವಾಗುತ್ತವೆ. ಅದಕ್ಕಾಗಿಯೇ ನಾನು ಯಾವಾಗಲೂ ಟೀಕೆಗಳನ್ನು ಬಹಿರಂಗವಾಗಿ ಸ್ವಾಗತಿಸುತ್ತೇನೆ. ಸುಳ್ಳು ಆರೋಪಗಳು ಬಂದಾಗಲೆಲ್ಲ ನಾನು ಶಾಂತವಾಗಿ ನನ್ನ ದೇಶಕ್ಕೆ ಸಂಪೂರ್ಣ ಸಮರ್ಪಣೆಯಿಂದ ಸೇವೆ ಸಲ್ಲಿಸುತ್ತೇನೆʼʼ ಎಂದು ತಿಳಿಸಿದರು.
ಬಾಲ್ಯದ ಬಗ್ಗೆ ಮಾತನಾಡಿದ ಮೋದಿ
ಇದೇ ವೇಳೆ ಮೋದಿ ಅವರು ತಮ್ಮ ಬಾಲ್ಯದ ಬಗ್ಗೆ ಮಾತನಾಡಿದರು. ಉಪವಾಸದಿಂದ ಮಲಗುತ್ತಿದ್ದ ದಿನಗಳಿಂದ ಹಿಡಿದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ ಶ್ವೇತಭವನದಲ್ಲಿ ಊಟ ಮಾಡಿದ ದಿನಗಳವರೆಗಿನ ನೆನಪನ್ನು ಹಂಚಿಕೊಂಡರು. ಚಿಕ್ಕವರಿದ್ದಾಗ ಕ್ಯಾನ್ವಾಸ್ ಶೂಗಳನ್ನು ಚಾಕ್‌ನಿಂದ ಬಿಳಿಯಾಗಿಸುತ್ತಿದ್ದುದಾಗಿ ತಿಳಿಸಿದರು. ಇಸ್ತ್ರಿ ಪೆಟ್ಟಿಗೆ ಇಲ್ಲದ ಕಾರಣ ಬಿಸಿ ನೀರಿನಿಂದ ತುಂಬಿದ ತಾಮ್ರದ ಪಾತ್ರೆಯಿಂದ ತಮ್ಮ ಬಟ್ಟೆಗಳನ್ನು ಒಪ್ಪ ಮಾಡುತ್ತಿದ್ದುದನ್ನು ನೆನಪಿಸಿಕೊಂಡರು. ಆದರೆ ಬಡತನದ ಬಗ್ಗೆ ಎಂದೂ ಕೊರಗಲಿಲ್ಲ ಎಂದೂ ತಿಳಿಸಿದರು.