ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cyclone Ditwah: ದಿತ್ವಾ ಸೈಕ್ಲೋನ್‌ ಎಫೆಕ್ಟ್‌, ಬೆಂಗಳೂರು ಕೂಲ್‌, ತಮಿಳುನಾಡು ಥರಥರ

ದಿತ್ವಾ ಚಂಡಮಾರುತ (Cyclone Ditwah) ಎಫೆಕ್ಟ್ ಕರ್ನಾಟಕಕ್ಕೂ ತಟ್ಟಿದೆ. ರಾಜ್ಯದಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಮುನ್ಸೂಚನೆ ಇದೆ. ಬಂಗಾಳ ಉಪಸಾಗರದ ನೈರುತ್ಯ ಭಾಗದಲ್ಲಿ ದಿತ್ವಾ ಚಂಡಮಾರುತ ಚಲಿಸುತ್ತಿರುವುದರಿಂದ ಕರ್ನಾಟಕದ ದಕ್ಷಿಣ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ತೀವ್ರ ಚಳಿಯ ಅನುಭವ ಆಗಬಹುದು.

ದಿತ್ವಾ ಸೈಕ್ಲೋನ್‌ ಎಫೆಕ್ಟ್‌, ಬೆಂಗಳೂರು ಕೂಲ್‌, ತಮಿಳುನಾಡು ಥರಥರ

ದಿತ್ವಾ ಚಂಡಮಾರುತದಿಂದ ಬೆಂಗಳೂರು ಕೂಲ್ -

ಹರೀಶ್‌ ಕೇರ
ಹರೀಶ್‌ ಕೇರ Dec 2, 2025 8:29 AM

ಬೆಂಗಳೂರು, ಡಿ.2: ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ದಿತ್ವಾ ಚಂಡಮಾರುತ (Cyclone Ditwah) ದುರ್ಬಲಗೊಂಡು ಆಳವಾದ ವಾಯುಭಾರ ಕುಸಿತವಾಗಿ ಉತ್ತರ ತಮಿಳುನಾಡು- ಪುದುಚೇರಿ ಕರಾವಳಿಯ ಕಡೆಗೆ ಗಂಟೆಗೆ 5 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಇದರಿಂದ ತಮಿಳುನಾಡಿನಲ್ಲಿ ಜೋರಾಗಿ ಮಳೆಯಾಗಲಿದ್ದು, ಬೆಂಗಳೂರು (Bengaluru) ತೀವ್ರ ತಾಪಮಾನ ಕುಸಿತವನ್ನು ಅನುಭವಿಸಲಿದೆ.

ದಿತ್ವಾ ಚಂಡಮಾರುತ ಚೆನ್ನೈನಿಂದ ಪೂರ್ವ-ಆಗ್ನೇಯಕ್ಕೆ 50 ಕಿಲೋಮೀಟರ್ ಮತ್ತು ಪುದುಚೇರಿಯಿಂದ ಈಶಾನ್ಯಕ್ಕೆ 130 ಕಿಲೋಮೀಟರ್ ದೂರದಲ್ಲಿ ಕೇಂದ್ರೀಕೃತವಾಗಿದೆ. ಆಳವಾದ ವಾಯುಭಾರ ಕುಸಿತವು ಉತ್ತರ ತಮಿಳುನಾಡು-ಪುದುಚೇರಿ ಕರಾವಳಿಯ ಕಡೆಗೆ ಉತ್ತರದ ಕಡೆಗೆ ಚಲಿಸುತ್ತಿದ್ದು, ಮಧ್ಯಾಹ್ನದ ವೇಳೆಗೆ ಚೆನ್ನೈ ಕರಾವಳಿಯಿಂದ 30 ಕಿಲೋಮೀಟರ್ ದೂರದಲ್ಲಿ ನೆಲೆಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಂದು ಚೆನ್ನೈ ಮತ್ತು ತಿರುವಳ್ಳೂರಿನಲ್ಲಿ ಅತಿ ಹೆಚ್ಚು ಮಳೆಯಾಗೋ ಮುನ್ಸೂಚನೆ ನೀಡಿದ್ದ ಹವಾಮಾನ ಇಲಾಖೆ, ಈಗ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ರೆಡ್ ಅಲರ್ಟ್ ನೀಡಿದೆ. ರಾಣಿಪೇಟೆ, ಕಾಂಚಿಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಮಿಳುನಾಡಿನಲ್ಲಿ, ನಿನ್ನೆ ರಾತ್ರಿಯಿಡೀ ಮಳೆಯಾಗಿದ್ದು, ಚೆನ್ನೈ ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ.

ದಿತ್ವಾ ಚಂಡಮಾರುತ: 54 ವಿಮಾನ ಸಂಚಾರ ರದ್ದು

ಇಂದು ತಿರುವಲ್ಲೂರು ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದು ಚೆನ್ನೈ, ತಿರುವಲ್ಲೂರು, ಚೆಂಗಲ್ಪಟ್ಟು, ವಿಲ್ಲುಪುರಂ, ಕಡಲೂರು, ಮೈಲಾಡುತುರೈ ಮತ್ತು ನಾಗಪಟ್ಟಣಂ ಜಿಲ್ಲೆಗಳಲ್ಲಿ ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ ಮೇಲ್ಮೈ ಗಾಳಿ ಬೀಸುವ ಮುನ್ಸೂಚನೆ ಇದೆ. ಮಳೆ ಜೋರಾದ ಹಿನ್ನೆಲೆ ಹಲವು ಜಿಲ್ಲೆಯ ಶಾಲೆಗಳಿಗೆ ರಜೆ ನೀಡಲಾಗಿದ್ದು, ಆಯಾ ಜಿಲ್ಲಾಧಿಕಾರಿಗಳು ಸಂದರ್ಭಕ್ಕೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ತಮಿಳುನಾಡು ಸರ್ಕಾರ ಈಗಾಗಲೇ ಸೂಚಿಸಿದೆ.

ದಿತ್ವಾ ಚಂಡಮಾರುತದ ಪ್ರಭಾವದಿಂದಾಗಿ ಆಂಧ್ರ ಪ್ರದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ತಿರುಪತಿ ಜಿಲ್ಲೆಯಲ್ಲಿ ಇಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಜಿಲ್ಲಾಧಿಕಾರಿ ವೆಂಕಟೇಶ್ವರಲು ಜಿಲ್ಲೆಯ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಿದ್ದಾರೆ.

ಶ್ರೀಲಂಕೆಗೆ ನೆರವಿನ ಪಾಕ್‌ ವಿಮಾನಕ್ಕೆ ಭಾರತದ ವಾಯುಪ್ರದೇಶ ಕ್ಷಿಪ್ರ ತೆರವು

ದಿತ್ವಾ ಚಂಡಮಾರುತ ಎಫೆಕ್ಟ್ ಕರ್ನಾಟಕಕ್ಕೂ ತಟ್ಟಿದೆ. ರಾಜ್ಯದಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಮುನ್ಸೂಚನೆ ಇದೆ. ಬಂಗಾಳ ಉಪಸಾಗರದ ನೈರುತ್ಯ ಭಾಗದಲ್ಲಿ ದಿತ್ವಾ ಚಂಡಮಾರುತ ಚಲಿಸುತ್ತಿರುವುದರಿಂದ ಕರ್ನಾಟಕದ ದಕ್ಷಿಣ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆ ಬೀಳುವ ಮುನ್ಸೂಚನೆ ನೀಡಲಾಗಿದೆ.

ಈ ಕರಾವಳಿಯಲ್ಲಿ ಭಾರೀ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಮೀನುಗಾರಿಕೆಗೆ ಹೋಗದಂತೆ ಅಧಿಕಾರಿಗಳು ಸೂಚಿಸಿದ್ದಾರೆ. ತಗ್ಗು ಪ್ರದೇಶದ ಜನರು ಜಾಗರೂಕರಾಗಿರಲು ಸಹ ಅವರು ಎಚ್ಚರಿಕೆ ನೀಡಿದ್ದಾರೆ.