ಭಾರತಕ್ಕೆ ಎಲ್‌ಪಿಜಿ ಹೊತ್ತು ತರುವ ನೌಕೆಗೆ ಮಾತ್ರ ಹೊರ್ಮುಜ್ ಜಲಸಂಧಿಯ ದಾರಿ ಬಿಡಲು ಇರಾನ್ ಒಪ್ಪಿಗೆ
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಉದ್ವಿಗ್ನತೆಯ ಪರಿಣಾಮ ಇರಾನ್ ಹೊರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆಗೆ ಅಡ್ಡಿ ಪಡಿಸಿತ್ತು. ಆದರೆ ಇದೀಗ ಅದು ಭಾರತಕ್ಕೆ ಸರಕು ಸಾಗಿಸುವ ನೌಕೆಗಳನ್ನು ಬಿಡಲು ಒಪ್ಪಿಕೊಂಡಿದೆ. ಈ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಭಾನುವಾರ ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಇಸ್ರೇಲ್ (Israel) ಮತ್ತು ಯುಎಸ್ (US) ಸೇನಾ ಪಡೆಯು ಇರಾನ್ (Iran war) ಮೇಲೆ ದಾಳಿ ನಡೆಸಿದ ಬಳಿಕ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿದೆ. ಜೊತೆಗೆ ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ಸರಕು ಸಾಗಣೆಗೆ ಅಡ್ಡಿ ಪಡಿಸಿದೆ. ಭಾರತದ ನಿರಂತರ ಮಾತುಕತೆಯ ಬಳಿಕ ಇದೀಗ ಈ ಜಲಸಂಧಿಯ ಮೂಲಕ ಭಾರತಕ್ಕೆ ಎಲ್‌ಪಿಜಿ (LPG) ಹೊತ್ತು ತರುವ ನೌಕೆಗೆ ಮಾತ್ರ ದಾರಿ ಬಿಡಲು ಇರಾನ್ ಒಪ್ಪಿಗೆ ನೀಡಿರುವುದಾಗಿ ವಿದೇಶಾಂಗ ಸಚಿವ ಎಸ್ ಜೈಶಂಕರ್ (External Affairs Minister S Jaishankar) ಅವರು ಭಾನುವಾರ ತಿಳಿಸಿದ್ದಾರೆ.
ಹೊರ್ಮುಜ್ ಜಲಸಂಧಿಯ ಮೂಲಕ ಭಾರತಕ್ಕೆ ಹೋಗುವ ಅನಿಲ ಸಾಗಾಟ ನೌಕೆಗಳನ್ನು ಇರಾನ್ ಬಿಡಲು ಒಪ್ಪಿರುವುದಾಗಿ ಹೇಳಿರುವ ಜೈಶಂಕರ್, ಭಾರತದ ಧ್ವಜ ಹೊಂದಿರುವ ಎರಡು ಅನಿಲ ಸಾಗಾಟ ನೌಕೆಗಳಿಗೆ ಅನುಮತಿಸುವುದಾಗಿ ಹೇಳಿದೆ. ಈ ಮೂಲಕ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಒಪ್ಪಂದವು ಇದೀಗ ಫಲ ನೀಡಿದೆ ಎಂದು ತಿಳಿಸಿದರು.
ಇರಾನ್‌ನ ದುಷ್ಟರಿಗೆ ತಕ್ಕ ಪಾಠ ಕಲಿಸುತ್ತೇನೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ
ಯುದ್ಧದಿಂದ ಇಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಈ ನಡುವೆ ಇದೀಗ ಭಾರತೀಯ ಧ್ವಜ ಹೊಂದಿರುವ ಅನಿಲ ಸಾಗಾಟ ನೌಕೆಗಳನ್ನು ಹೊರ್ಮುಜ್ ಜಲಸಂಧಿಯಲ್ಲಿ ಹಾದುಹೋಗಲು ಅನುಮತಿಸುವುದಾಗಿ ಇರಾನ್ ಹೇಳಿದೆ. ಇರಾನ್ ಅಧಿಕೃತವಾಗಿ ಮುಚ್ಚಿರುವ ಈ ಜಲಸಂಧಿಯು ಕಿರಿದಾದ ಚಾಕ್‌ಪಾಯಿಂಟ್ ಅನ್ನು ಹೊಂದಿದೆ. ಇದರ ಮೂಲಕವೇ ಭಾರತಕ್ಕೆ ತೈಲ ಮತ್ತು ಅನಿಲ ಟ್ಯಾಂಕರ್‌ಗಳು ಬರಬೇಕಿದ್ದು, ಅವುಗಳನ್ನು ಸಾಗಿಸಲು ಭಾರತಕ್ಕೆ ಇರಾನ್ ಅನುಮತಿಸಿರುವುದಾಗಿ ಜೈಶಂಕರ್ ತಿಳಿಸಿದರು.
ಶಿವಾಲಿಕ್ ಮತ್ತು ನಂದಾ ದೇವಿ ಎಂಬ ಎರಡು ಅನಿಲ ಸಾಗಾಟ ನೌಕೆಗಳು ಸುಮಾರು 92,712 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತುಕೊಂಡು ಶನಿವಾರ ಭಾರತಕ್ಕೆ ಹೊರಟಿದೆ. ಇವುಗಳು ಈಗ ವಿಶ್ವದ ತೈಲ ಪೂರೈಕೆಯ ಶೇಕಡಾ 20 ರಷ್ಟು ಹಾದುಹೋಗುವ ಹೊರ್ಮುಜ್ ಜಲಸಂಧಿಯನ್ನು ಇದು ದಾಟಿ ಬಂದಿದೆ ಎಂದರು.
ಸಂಘರ್ಷದ ಈ ಸಂದರ್ಭದಲ್ಲಿ ಭಾರತದ ದೃಷ್ಟಿಕೋನದಿಂದ ನಾವು ತರ್ಕಿಸುವುದು, ಸಮನ್ವಯ ನಡೆಸುವುದು ಮತ್ತು ಪರಿಹಾರವನ್ನು ಕಂಡುಕೊಳ್ಳುವುದು ಉತ್ತಮ ಎಂದು ಹೇಳಿದ ಅವರು, ಹೊರ್ಮುಜ್ ಜಲಸಂಧಿ ಮುಚ್ಚಿದ ಬಳಿಕ ಇರಾನ್ ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರೊಂದಿಗೆ ನಾಲ್ಕು ಬಾರಿ ದೂರವಾಣಿಯಲ್ಲಿ ಮಾತನಾಡಿರುವುದಾಗಿ ತಿಳಿಸಿದರು.
ಜಾಗತಿಕ ತೈಲ ಬಳಕೆಯ ಐದನೇ ಒಂದು ಭಾಗವು ಪ್ರತಿದಿನ ಹೊರ್ಮುಜ್ ಜಲಸಂಧಿ ಮೂಲಕ ಹಾದುಹೋಗುತ್ತದೆ. ಪರ್ಷಿಯನ್ ಕೊಲ್ಲಿಯನ್ನು ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುವ ಏಕೈಕ ಸಮುದ್ರ ಮಾರ್ಗ ಇದಾಗಿದೆ. ಭಾರತ ಹೊರತುಪಡಿಸಿ ಚೀನಾ ಮತ್ತು ರಷ್ಯಾ ಕೂಡ ತಮ್ಮ ಹಡಗುಗಳು ಹೊರ್ಮುಜ್ ಜಲಸಂಧಿ ದಾಟಿಸಲು ಇರಾನ್‌ನಿಂದ ಅನುಮತಿ ಪಡೆದಿವೆ ಎನ್ನಲಾಗಿದೆ.
ಭಾರತೀಯ ಧ್ವಜ ಹೊಂದಿರುವ ಹಡಗುಗಳಿಗೆ ಯಾವುದೇ ರಕ್ಷಣೆ ಅಥವಾ ಇದಕ್ಕೆ ಪ್ರತಿಯಾಗಿ ಇರಾನ್ ಯಾವುದೇ ಬೇಡಿಕೆಯನ್ನು ಇಟ್ಟಿಲ್ಲ ಎಂದ ಜೈಶಂಕರ್, ಇದು ಕೇವಲ ಸರಕು ವಿನಿಮಯ ಸಮಸ್ಯೆಯಲ್ಲ. ಭಾರತ ಮತ್ತು ಇರಾನ್ ಉತ್ತಮ ಸಂಬಂಧವನ್ನು ಹೊಂದಿವೆ. ಆದರೆ ಈಗ ದುರದೃಷ್ಟಕರ ಸಂಗತಿ ಎಂದರೆ ಸಂಘರ್ಷದ ಸಮಯವಾಗಿದೆ ಎಂದರು.
ಕೆನಡಾದಲ್ಲಿ ಕಾಲೇಜು ಸಹಪಾಠಿಗಳಿಂದಲೇ ಭಾರತೀಯ ಮೂಲದ ವಿದ್ಯಾರ್ಥಿಯ ಹತ್ಯೆ
ಇನ್ನೂ ಹಲವು ಹಡಗುಗಳು ಭಾರತಕ್ಕೆ ಬರಬೇಕಿದೆ. ಈಗ ಅವರು ತೈಲ ಮತ್ತು ಅನಿಲ ಸಾಗಾಟ ಹಡಗುಗಳಿಗೆ ಅನುಮತಿ ನೀಡಿದ್ದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಮುಂದೆ ಬರಬೇಕಿರುವ ಹಡಗುಗಳ ಕುರಿತು ಕೂಡ ಮಾತುಕತೆ ಮುಂದುವರಿಸುವುದಾಗಿ ತಿಳಿಸಿದರು.