ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸ್ಟಾರ್‌ಲಿಂಕ್‌ ಇಂಟರ್‌ನೆಟ್‌, ಅಂಬಾನಿ, ರಾಹುಲ್‌ ಗಾಂಧಿ: ಎಲಾನ್‌ ಮಸ್ಕ್‌ ಉದ್ಧಟತನಕ್ಕೆ ಭಾರತದ ದಿಟ್ಟ ಉತ್ತರ; ಏನಿದು ವಿವಾದ?

Elon Musk: ಭಾರತದಲ್ಲಿ ತಮ್ಮ ಉಪಗ್ರಹ ಆಧಾರಿತ ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಸೇವೆ ಆರಂಭಿಸಲು ಹಾತೊರೆಯುತ್ತಿರುವ ಅಮೆರಿಕ ಉದ್ಯಮಿ ಎಲಾನ್‌ ಮಸ್ಕ್‌ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಕೇಂದ್ರ ತಿರುಗೇಟು ನೀಡಿದೆ. ಏನಿದು ಉಪಗ್ರಹ ಆಧಾರಿತ ಇಂಟರ್‌ನೆಟ್‌? ಕೇಂದ್ರ ಏಕೆ ಅನುಮತಿ ನೀಡಿಲ್ಲ? ನಿಮ್ಮೆಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಎಲಾನ್‌ ಮಸ್ಕ್‌ ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ಗೆ ಅನುಮತಿ ಸಿಕ್ಕಿಲ್ಲವೇಕೆ?

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Oct 10, 2026 11:21 PM

ದೆಹಲಿ, ಅ. 10: ಸದ್ಯ ದೇಶದಲ್ಲಿ, ಸೋಷಿಯಲ್‌ ಮೀಡಿಯಾದಲ್ಲಿ ಅಮೆರಿಕ ಉದ್ಯಮಿ ಎಲಾನ್‌ ಮಸ್ಕ್‌ (Elon Musk) ಮತ್ತವರ ಸ್ಟಾರ್‌ಲಿಂಕ್‌ (Starlink) ಇಂಟರ್‌ನೆಟ್‌ ಸೇವೆಯದ್ದೇ ಚರ್ಚೆ. ಭಾರತದಲ್ಲಿ ತಮ್ಮ ಉಪಗ್ರಹ ಆಧಾರಿತ ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಸೇವೆ ಆರಂಭಿಸಲು ಹಾತೊರೆಯುತ್ತಿರುವ ಮಸ್ಕ್‌ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ʼಕೈಲಾಗದವರು ಮೈ ಪರಚಿಕೊಂಡಂತೆʼ ಎಂಬಂತಾಗಿದೆ ಸದ್ಯ ಅವರ ಸ್ಥಿತಿ. ಸ್ಟಾರ್‌ಲಿಂಕ್‌ ಭಾರತ ಪ್ರವೇಶಕ್ಕೆ ಅನುಮತಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅವರು ಉದ್ಯಮಿ, ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರನ್ನು ʼಭಾರತದ ಪ್ರಧಾನಿʼ ಎಂದು ಕರೆದು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಕೇಂದ್ರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವ್ಯಂಗ್ಯವಾಗಿ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದ ಮಸ್ಕ್‌, ʼʼಪ್ರೀತಿಯ ಭಾರತದ ಪ್ರಧಾನಿ ಅಂಬಾನಿ. ಭಾರತದ ನಿಜವಾದ ಬಾಸ್‌ ನೀವು ಎಂಬುದನ್ನು ನಾನು ಅರಿತಿರಲಿಲ್ಲ. ಇದಕ್ಕಾಗಿ ಕ್ಷಮೆಯಾಚಿಸುತ್ತೇನೆʼʼ ಎಂದು ಹೇಳಿದ್ದರು. ಅಲ್ಲದೆ ಏಕಸ್ವಾಮ್ಯದ ಶೋಷಣೆ ಮುಂದುವರಿಸಲು ಬಯಸುತ್ತಿದ್ದೀರಾ ಎಂದು ಕೇಂದ್ರವನ್ನು ಪ್ರಶ್ನಿಸಿದ್ದರು. ಇದಕ್ಕೆ ಕೇಂದ್ರ ಸರ್ಕಾರ ಬಲವಾಗಿ ತಿರುಗೇಟು ನೀಡಿದ್ದು, ಸ್ಟಾರ್‌ಲಿಂಕ್‌ ಇಂಟರ್‌ನೆಟ್‌ ಆರಂಭಕ್ಕಿರುವ ಸವಾಲುಗಳೇನು ಎನ್ನುವ ವಾಸ್ತವಾಂಶ ತೆರೆದಿಟ್ಟಿದೆ.

ವಾಸ್ತವಾಂಶವೇನು?

ಕೇಬಲ್‌, ಮೊಬೈಲ್ ಟವರ್‌ಗಳ ಹಂಗಿಲ್ಲದೆ ನೇರವಾಗಿ ಬಾಹ್ಯಾಕಾಶದ ಉಪಗ್ರಹಗಳಿಂದಲೇ ದೊರೆಯುವ ಇಂಟರ್‌ನೆಟ್‌ ಸೇವೆ ನೀಡಲು ಸ್ಟಾರ್‌ಲಿಂಕ್‌ 2025ರ ಜೂನ್‌ನಲ್ಲಿ ಜಿಎಂಪಿಸಿಎಸ್‌ ಪರವಾನಗಿ ಪಡೆದುಕೊಂಡಿದ್ದರೂ ಸ್ಟ್ರೆಕ್ಟ್ರಮ್‌ ಮತ್ತು ಭದ್ರತಾ ಅನುಮತಿ ಇನ್ನೂ ಸಿಕ್ಕಿಲ್ಲ. ಭದ್ರತಾ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಸ್ಟಾರ್‌ಲಿಂಕ್‌ಗೆ ಭಾರತಕ್ಕೆ ಪ್ರವೇಶಿಸಲು ಸಾಧ್ಯವಾಗುವುದೂ ಇಲ್ಲ. ಅನುಮತಿಗಾಗಿ ಮಸ್ಕ್‌ 5 ವರ್ಷಗಳಿಂದ ಕಾಯುತ್ತಲೇ ಇದ್ದಾರೆ.

ʼʼಯುಪಿಎ ಸರ್ಕಾರದ ಅವಧಿಯಲ್ಲಿ ನಿಯಮ ಪಾಲಿಸದೆ ಸ್ಪೆಕ್ಟ್ರಮ್ ಮಾರಾಟ ಮಾಡಲಾಗಿತ್ತುʼʼ: ರಾಹುಲ್‌ ಗಾಂಧಿ ವಿರುದ್ಧ ತಿರುಗಿಬಿದ್ದ ಬಿಜೆಪಿ

ಏನಿದು ಉಪಗ್ರಹ ಆಧಾರಿತ ಇಂಟರ್‌ನೆಟ್‌?

ಉಪಗ್ರಹ ಆಧಾರಿತ ಇಂಟರ್‌ನೆಟ್‌ಗೆ ಕೇಬಲ್‌, ಮೊಬೈಲ್ ಟವರ್‌ಗಳ ಸಹಾಯ ಬೇಕಿಲ್ಲ. ನೇರವಾಗಿ ಬಾಹ್ಯಾಕಾಶದ ಉಪಗ್ರಹಗಳಿಂದಲೇ ಇಂಟನೆಟ್‌ ಪಡೆಯಬಹುದು. ʼʼಭಾರತದ ಅನೇಕ ಭಾಗಗಳಲ್ಲಿ ಸಾಂಪ್ರದಾಯಿಕ ಇಂಟರ್‌ನೆಟ್‌ ಸೌಲಭ್ಯ ದೊರೆಯದ ಕಾರಣ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ ನೈಸರ್ಗಿಕ ವಿಪತ್ತು ಮುಂತಾದ ಸಂದರ್ಭದಲ್ಲಿ ಇತರ ಸಂಪರ್ಕಗಳೆಲ್ಲ ಕಡಿತಗೊಂಡರೂ ಉಪಗ್ರಹ ಆಧಾರಿತ ಇಂಟರ್‌ನೆಟ್‌ ನೆರವಿಗೆ ಧಾವಿಸಲಿದೆʼʼ ಎನ್ನುವುದು ಮಸ್ಕ್‌ ವಾದ. ಹೀಗಾಗಿ ಭಾರತ ಪ್ರವೇಶಕ್ಕೆ ಅನುಮತಿ ಶೀಘ್ರದಲ್ಲೇ ನೀಡುಬೇಕು ಎಂದು ಅವರು ಆಗ್ರಹಿಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಸುರಕ್ಷತೆಯ ಆತಂಕ ವ್ಯಕ್ತಪಡಿಸಿದೆ.

ಕೇಂದ್ರದ ವಾದವೇನು?

ಉಪಗ್ರಹ ಇಂಟರ್‌ನೆಟ್‌ ಸೇವೆಗೆ ಅಂತಿಮ ಭದ್ರತಾ ಅನುಮೋದನೆ ನೀಡಬೇಕಾದ ಭಾರತದ ಗೃಹ ವ್ಯವಹಾರಗಳ ಸಚಿವಾಲಯ ಸುರಕ್ಷತೆ ಬಗ್ಗೆ ಅಧ್ಯಯನ ನಡೆಯುತ್ತಿದೆ. ವಿದೇಶಿ ಉಪಗ್ರಹ ಆಪರೇಟರ್‌ಗಳು ಭಾರತೀಯ ಗೇಟ್‌ವೇಗಳನ್ನು ಬೈಪಾಸ್ ಮಾಡಿ ನೇರವಾಗಿ ಸೇವೆ ನೀಡದಂತೆ ಮತ್ತು ಭಾರತದ ಭದ್ರತೆಗೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳಲು ಕಾರ್ಯ ನಿರ್ವಹಿಸುತ್ತಿದೆ.

ಉಪಗ್ರಹ ಇಂಟರ್‌ನೆಟ್‌ಗೆ ಸಂಬಂಧಿಸಿದ ತರಂಗಾಂತರಗಳನ್ನು (ಸ್ಟ್ರೆಕ್ಟ್ರಮ್‌) ಹಂಚಿಕೆ ಮಾಡುವುದು ಮತ್ತು ಅದಕ್ಕೆ ಅನ್ವಯಿಸುವ ಶುಲ್ಕಗಳ ನಿಯಮಾವಳಿಗಳನ್ನು ಅಂತಿಮಗೊಳಿಸುವ ಕೆಲಸ ಇನ್ನೂ ನಡೆಯುತ್ತಿದೆ. ಸ್ಪೆಕ್ಟ್ರಮ್ ಹಂಚಿಕೆ ವಿಚಾರದಲ್ಲಿ ಯಾವುದೇ ಕಂಪನಿಗೆ ವಿಶೇಷ ಸೌಲಭ್ಯ ನೀಡುವುದಿಲ್ಲ ಅಥವಾ ತಾರತಮ್ಯ ಮಾಡುವುದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಸ್ಟಾರ್‌ಲಿಂಕ್‌ ಜತೆ ಭಾರ್ತಿ ಏರ್‌ಟೆಲ್ ಬೆಂಬಲಿತ ಒನ್‌ವೆಬ್, ರಿಲಯನ್ಸ್ ಜಿಯೋ ಸ್ಯಾಟಲೈಟ್ ಕಮ್ಯುನಿಕೇಷನ್ಸ್ ಕೂಡ ಸ್ಪೆಕ್ಟ್ರಮ್ ಹಂಚಿಕೆಗಾಗಿ ಕಾಯುತ್ತಿವೆ ಎಂದು ತಿಳಿಸಿದೆ. ಹೀಗಾಗಿ ಭಾರತದಲ್ಲಿ ಯಾವುದೇ ಒಂದು ಕಂಪನಿಗೆ ತಾರತಮ್ಯ ಮಾಡುತ್ತಿಲ್ಲ ಅಥವಾ ಯಾರದೇ ಏಕಸ್ವಾಮ್ಯಕ್ಕೆ ಮಣಿಯುತ್ತಿಲ್ಲ ಎಂದು ಕೇಂದ್ರ ಒತ್ತಿ ಹೇಳುವ ಮೂಲಕ ಮಸ್ಕ್‌ಗೆ ತಿರುಗೇಟು ನೀಡಿದೆ.

ಕೇಂದ್ರದ ಆತಂಕವೇನು?

ಕೇಂದ್ರ ಸರ್ಕಾರ ಸುರಕ್ಷತೆ ಮತ್ತು ಗೌಪ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಇರಾನ್‌ನಲ್ಲಿ ಸ್ಟಾರ್‌ಲಿಂಕ್‌ಗೆ ಅಧಿಕೃತ ಪರವಾನಗಿ ಇಲ್ಲದಿದ್ದರೂ, ಅಲ್ಲಿನ ಯುದ್ಧದ ಸಮಯದಲ್ಲಿ ಜನರು ಮತ್ತು ಕೆಲವು ಸಂಘಟನೆಗಳು ಸ್ಟಾರ್‌ಲಿಂಕ್ ಟರ್ಮಿನಲ್‌ಗಳನ್ನು ಕಾನೂನುಬಾಹಿರವಾಗಿ ಬಳಸಿರುವುದನ್ನು ಕೇಂದ್ರ ಗಮನಿಸಿದೆ. ಅಲ್ಲದೆ ಭಾರತದ ಗಡಿ ಭಾಗಗಳಲ್ಲಿ ಕೆಲವರು ಸ್ಟಾರ್‌ಲಿಂಕ್ ಇಂಟರ್‌ನೆಟ್‌ ಬಳಸಿರುವುದು ಪತ್ತೆಯಾಗಿದ್ದು ಸರ್ಕಾರದ ಕಳವಳಕ್ಕೆ ಕಾರಣ. ವಿದೇಶಿ ಕಂಪನಿಯೊಂದು ಭಾರತದ ಭದ್ರತಾ ನಿಯಮಗಳನ್ನು ಸಂಪೂರ್ಣವಾಗಿ ಪಾಲಿಸಲಿದೆಯೇ ಎನ್ನುವ ಅನುಮಾನವೂ ಇದೆ.

Starlink

ಭಾರತೀಯ ಬಳಕೆದಾರರ ಡೇಟಾವನ್ನು ಭಾರತದ ಗಡಿಯೊಳಗೆ ಇರುವ ಸರ್ವರ್‌ಗಳಲ್ಲೇ ಸಂಗ್ರಹಿಸಬೇಕು ಎಂದು ಸರ್ಕಾರ ಹೇಳಿದೆ. ಸ್ಟಾರ್‌ಲಿಂಕ್ ಈ ನಿಯಮ ಪಾಲಿಸುತ್ತಾ ಎನ್ನುವುದು ಈಗ ಎದ್ದಿರುವ ಮುಖ್ಯ ಪ್ರಶ್ನೆ. ಭಾರತದಲ್ಲೇ ಗೇಟ್‌ವೇ ಸೈಟ್‌ಗಳನ್ನು ನಿರ್ಮಿಸಿರುವುದಾಗಿ ಅದು ಹೇಳಿದರೂ ಪರಿಶೀಲನೆ ನಡೆಯಬೇಕಿದೆ.

ಇನ್ನೊಂದು ಮುಖ್ಯ ವಿಚಾರ ಎಂದರೆ ದೇಶದಲ್ಲಿ ಗಲಭೆ ಉಂಟಾದಾಗ ನಿರ್ದಿಷ್ಟ ಪ್ರದೇಶದಲ್ಲಿ ಇಂಟರ್‌ನೆಟ್‌ ಸ್ಥಗಿತಗೊಳಿಸಲಾಗುತ್ತದೆ. ಭದ್ರತೆಗೆ ಯಾವುದೇ ಧಕ್ಕೆ ಬಂದಾಗ ಇಂಟರ್‌ನೆಟ್‌ ಸಂಪರ್ಕವನ್ನು ಸ್ಥಗಿರಗೊಳಿಸುವ ಅಧಿಕಾರ ಭಾರತೀಯ ತನಿಖಾ ಸಂಸ್ಥೆಗಳಿಗೆ ಇದೆ. ಆದರೆ ಸ್ಟಾರ್‌ಲಿಂಕ್‌ನ ಸ್ಯಾಟಲೈಟ್‌ಗಳು ಪರಸ್ಪರ ಲೇಸರ್ ಲಿಂಕ್‌ಗಳ ಮೂಲಕ ಜಾಗತಿಕವಾಗಿ ಸಂಪರ್ಕ ಹೊಂದಿವೆ. ವ್ಯವಸ್ಥೆ ಹೀಗಿರುವಾಗ ಭಾರತದ ಗಡಿಯೊಳಗೆ ಮಾತ್ರ ನಿಯಂತ್ರಿಸಲು ಸಾಧ್ಯವೇ ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಹೀಗಾಗಿ ಉಗ್ರರು, ದೇಶದ್ರೋಹಿಗಳು ತಮ್ಮ ಚಟುವಟಿಕೆಗಳಿಗೆ ಇಂಟರ್‌ನೆಟ್‌ ಬಳಸಬಹುದು ಎನ್ನುವ ಆತಂಕವಿದೆ. ಒಟ್ಟಿನಲ್ಲಿ ರಾಷ್ಟ್ರೀಯ ಭದ್ರತೆ ಮುಖ್ಯ ಎನ್ನುವುದನ್ನು ಕೇಂದ್ರ ಸಾರಿ ಸಾರಿ ಹೇಳಿದೆ.

ರಾಹುಲ್‌ ಗಾಂಧಿ ಎಂಟ್ರಿ

ಈ ಮಧ್ಯೆ ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್‌ ಗಾಂಧಿ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸುವ ಮೂಲಕ ಈ ವಿಚಾರವನ್ನು ರಾಜಕೀಯಗೊಳಿಸಿದ್ದಾರೆ. ʼʼವಿಶ್ವದ 165ಕ್ಕೂ ಹೆಚ್ಚು ದೇಶಗಳಲ್ಲಿ ಸ್ಟಾರ್‌ಲಿಂಕ್‌ ಸಂಸ್ಥೆಗೆ ಪರವಾನಗಿ ಸಿಕ್ಕಿದೆ. ಐದು ವರ್ಷಗಳಿಂದ ಭಾರತ ಸರ್ಕಾರದ ಲೈಸೆನ್ಸ್ ಏಕೆ ಸಿಗುತ್ತಿಲ್ಲ? ಭಾರತದ ನಿಜವಾದ ಬಾಸ್ ಅಂಬಾನಿಯೇ?ʼʼ ಎಂದು ಎಲಾನ್‌ ಮಸ್ಕ್‌ ಎಕ್ಸ್‌ನಲ್ಲಿ ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, ʼʼಭಾರತಕ್ಕೆ ಸ್ವಾಗತ ಎಲಾನ್, ನೀವು ಇನ್ನೊಬ್ಬ ವ್ಯಕ್ತಿಯನ್ನು ಕಂಡುಕೊಳ್ಳುವವರೆಗೂ ಕಾಯಿರಿʼʼ ಎಂದಿದ್ದಾರೆ. ಸದ್ಯ ಈ ವಿಚಾರ ಚರ್ಚೆಗೆ ಕಾರಣವಾಗಿದೆ. ರಾಹುಲ್‌ ಗಾಂಧಿ ನೈಜಾಂಶ ತಿಳಿಯದೆ ಎಲ್ಲ ವಿಚಾರದಲ್ಲೂ ಮೂಗು ತೂರಿಸುತ್ತಿದ್ದಾರೆ ಎಂದು ಬಿಜೆಪಿ ದೂರಿದೆ.

ಎಲಾನ್ ಮಸ್ಕ್‌ಗೆ ಮತ್ತೊಂದು ಗರಿ: ವಿಶ್ವದ ಮೊದಲ ಟ್ರಿಲಿಯನೇರ್ ಆದ ಸ್ಪೇಸ್‌ಎಕ್ಸ್ ಮಾಲಕ

“ರಾತ್ರೋರಾತ್ರಿ ಏನಾಯಿತು ಎಂಬುದನ್ನು ತಿಳಿದುಕೊಳ್ಳಲು ಇಡೀ ದೇಶ ಬಯಸುತ್ತಿದೆ. ರಾಹುಲ್ ಗಾಂಧಿ ಈ ಬಗ್ಗೆ ದೇಶಕ್ಕೆ ವಿವರಣೆ ನೀಡಬೇಕು. ಸ್ಪೆಕ್ಟ್ರಮ್ ವಿಚಾರಕ್ಕೆ ಬಂದರೆ, ಯುಪಿಎ ಸರ್ಕಾರದ ಅವಧಿಯಲ್ಲಿ ಆ ಪಕ್ಷದ ನಾಯಕರು ಸ್ಪೆಕ್ಟ್ರಮ್‌ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಯಾವುದೇ ನಿಯಮಗಳ ಪಾಲನೆಯಿಲ್ಲದೆ ಸ್ಪೆಕ್ಟ್ರಮ್ ಮಾರಾಟ ಮಾಡಲಾಗಿತ್ತು. ಇದರಿಂದ ಭಾರಿ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಇದು ಮೋದಿ ಸರ್ಕಾರ. ಇಲ್ಲಿ ಎಲ್ಲವೂ ಪಾರದರ್ಶಕವಾಗಿ ಮತ್ತು ಯಾವುದೇ ತಾರತಮ್ಯವಿಲ್ಲದೆ ನಡೆಯಲಿದೆ” ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಾಮ್ ಮಾಧವ್ ವಾಗ್ದಾಳಿ ನಡೆಸಿದ್ದಾರೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.