ಡೊನಾಲ್ಡ್ ಟ್ರಂಪ್-ನರೇಂದ್ರ ಮೋದಿ ಫೋನ್ ಸಂಭಾಷಣೆಯಲ್ಲಿ ಎಲಾನ್ ಮಸ್ಕ್ ಭಾಗವಹಿಸಿಲ್ಲ; ಭಾರತದಿಂದ ಸ್ಪಷ್ಟನೆ
Narendra Modi: ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾದ ಬಳಿಕ ಈ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಸಿದ ಫೋನ್ ಸಂಭಷಣೆಯಲ್ಲಿ ಉದ್ಯಮಿ ಎಲಾನ್ ಮಸ್ಕ್ ಪಾಲ್ಗೊಂಡಿದ್ದರು ಎನ್ನುವ ಸುದ್ದಿಯನ್ನು ಭಾರತ ನಿರಾಕರಿಸಿದೆ.
ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್ ಮತ್ತು ಎಲಾನ್ ಮಸ್ಕ್ (ಸಂಗ್ರಹ ಚಿತ್ರ) -
ದೆಹಲಿ, ಮಾ. 28: ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾಗಿ 1 ತಿಂಗಳು ಕಳೆದಿದ್ದು, ಇನ್ನೂ ಪರಿಸ್ಥಿತಿ ತಿಳಿಯಾಗಿಲ್ಲ. ಅದರ ಬದಲು ದಿನ ಕಳೆದಂತೆ ಸಂಘರ್ಷ ತೀವ್ರಗೊಳ್ಳುತ್ತಿದೆ. ಈ ಮಧ್ಯೆ ಮಾರ್ಚ್ 24ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಫೋನ್ ಮೂಲಕ ನಡೆಸಿದ ಸಂಭಾಷಣೆ ಸದ್ದು ಮಾಡುತ್ತಿದೆ. ಈ ಮಾತುಕತೆ ವೇಳೆ ಉದ್ಯಮಿ ಎಲಾನ್ ಮಸ್ಕ್ (Elon Musk) ಪಾಲ್ಗೊಂಡಿದ್ದರು ಎನ್ನುವ ಸುದ್ದಿಯನ್ನು ಇದೀಗ ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ಎರಡು ದೇಶಗಳ ನಡುವಿನ ಸಂಭಾಷಣೆಯ ವೇಳೆ ಮಸ್ಕ್ ಇರಲಿಲ್ಲ ಎಂದು ಸ್ಪಷ್ಟಪಡಿಸಿದೆ.
ಮೋದಿ ಅವರಿಗೆ ಕರೆ ಮಾಡಿದ್ದ ಟ್ರಂಪ್ ಇರಾನ್ ಜತೆಗಿನ ಯುದ್ಧ ಮತ್ತು ಪಶ್ಚಿಮ ಏಷ್ಯಾದ ಸ್ಥಿತಿ-ಗತಿ ಬಗ್ಗೆ ಚರ್ಚೆ ನಡೆಸಿದ್ದರು. ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಈ ಇಬ್ಬರು ನಾಯಕರು ನಡೆಸಿದ ಮೊದಲ ಸಂಭಾಷಣೆ ಇದಾಗಿತ್ತು.
ವಿದೇಶಾಂಗ ಸಚಿವಾಲಯದ ಸ್ಪಷ್ಟನೆ
ಮೋದಿ ಮತ್ತು ಟ್ರಂಪ್ ನಡುವಿನ ಫೋನ್ ಸಂಭಾಷಣೆ ವೇಳೆ ಎಲಾನ್ ಮಸ್ಕ್ ಕೂಡ ಇದ್ದರು ಎನ್ನುವ ಸುದ್ದಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. 2 ದೇಶಗಳ ನಾಯಕರ ನಡುವಿನ ಮಾತುಕತೆ ವೇಳೆ ಉದ್ಯಮಿ ಭಾಗವಹಿಸಿದ್ದೇಕೆ ಎಂದು ಹಲವರು ಪ್ರಶ್ನಿಸಿದ್ದಾರೆ. ಇದೀಗ ವಿದೇಶಾಂಗ ಸಚಿವಾಲಯದ ವಕ್ತಾರ ಈ ಬಗ್ಗೆ ಸ್ಪಷ್ಟನೆ ನೀಡಿ, ʼʼಈ ಬಗ್ಗೆ ಹರಿದಾಡುತ್ತಿರುವ ಸುದ್ದಿಯನ್ನು ಗಮನಿಸಿದ್ದೇವೆ. ಮಾರ್ಚ್ 24ರಂದು ನಡೆದ ಫೋನ್ ಸಂಭಾಷಣೆಯಲ್ಲಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಮಾತ್ರ ಇದ್ದರುʼʼ ಎಂದು ತಿಳಿಸಿದ್ದಾರೆ.
ಟ್ರಂಪ್ ಜತೆಗಿನ ಮಾತುಕತೆ ಬಗ್ಗೆ ತಿಳಿಸಿದ್ದ ಮೋದಿ:
PM Narendra Modi tweets, "Received a call from President Trump and had a useful exchange of views on the situation in West Asia. India supports de-escalation and restoration of peace at the earliest. Ensuring that the Strait of Hormuz remains open, secure and accessible is… pic.twitter.com/jPxEJMgIjw
— ANI (@ANI) March 24, 2026
ʼʼಮೊದಲೇ ತಿಳಿಸಿದಂತೆ ಇಬ್ಬರು ನಾಯಕರು ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದರುʼʼ ಎಂದು ಹೇಳುವ ಮೂಲಕ ವದಂತಿಯನ್ನು ನಿರಾಕರಿಸಿದ್ದಾರೆ. ಈ ಮೊದಲು ನ್ಯೂಯಾರ್ಕ್ ಟೈಮ್ಸ್ ಮಾಧ್ಯಮ ಸಂಸ್ಥೆಯು ಈ ಮಾತುಕತೆಯಲ್ಲಿ ಮಸ್ಕ್ ಪಾಲ್ಗೊಂಡಿದ್ದರು ಎಂದು ವರದಿ ಮಾಡಿತ್ತು.
ಇರಾನ್ ಯುದ್ಧದ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ-ಟ್ರಂಪ್ ಫೋನ್ ಕರೆ: ಎಲಾನ್ ಮಸ್ಕ್ ಭಾಗಿ?
ʼʼಯುದ್ಧದ ಬಗ್ಗೆ ಮೋದಿ ಮತ್ತು ಟ್ರಂಪ್ ನಡೆಸಿದ ಸಂಭಾಷಣೆಯಲ್ಲಿ ಎಲಾನ್ ಮಸ್ಕ್ ಪಾಲ್ಗೊಂಡಿದ್ದರು. 2 ದೇಶಗಳ ಮುಖ್ಯಸ್ಥರ ಮಧ್ಯೆ ನಡೆದ ಮಾತುಕತೆಯಲ್ಲಿ ಖಾಸಗಿ ವ್ಯಕ್ತಿ ಕಾಣಿಸಿಕೊಂಡಿದ್ದು ಅಸಮಾನ್ಯವಾಗಿತ್ತುʼʼ ಎಂದು ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ ತಿಳಿಸಿತ್ತು. ಕಳೆದ ವರ್ಷ ಟ್ರಂಪ್ ಮತ್ತು ಮಸ್ಕ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಅದಾಗ್ಯೂ ಈ ಮಹತ್ವದ ಕರೆ ವೇಳೆ ಮಸ್ಕ್ ಏಕೆ ಹಾಜರಿದ್ದರು? ಅವರು ಮಾತನಾಡಿದ್ದರೊ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿ ಹೇಳಿದೆ.
ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದ ಪ್ರಧಾನಿ ಮೋದಿ, ಎರಡೂ ದೇಶಗಳ ರಾಜತಾಂತ್ರಿಕ ವಿಚಾರಗಳ ಬಗ್ಗೆ ವಿವರವಾಗಿ ಮಾತನಾಡಿದ್ದಾಗಿ ತಿಳಿಸಿದ್ದರು. ಈ ವೇಳೆ ಇರಾನ್‌ನ ಹೊರ್ಮುಜ್ ಜಲಸಂಧಿಯ ಬಗ್ಗೆ ಚರ್ಚೆ ನಡೆಸಿದ್ದಾಗಿಯೂ, ಶಾಂತಿ ನೆಲೆಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾತುಕತೆ ನಡೆಸಿದ್ದಾಗಿಯೂ ಹೇಳಿದ್ದರು.
ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.