ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದೀಪಕ್ ಆತ್ಮಹತ್ಯೆ ಪ್ರಕರಣ; ಸೋಶಿಯಲ್ ಮಿಡಿಯಾ ಇನ್‌ಫ್ಲುಯೆನ್ಸರ್ ಶಿಮ್ಜಿತಾ ಪೊಲೀಸ್ ವಶಕ್ಕೆ

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹಾಗೂ ವಡಕರ ಮೂಲದ ಶಿಮ್ಜಿತಾ ಮುಸ್ತಫಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೀಪಕ್‌ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಹಾಗೂ ವಿಡಿಯೊ ವೈರಲ್ ಆಗಿರುವ ಅಂಶಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪೊಲೀಸ್ ವಶಕ್ಕೆ ಪಡೆಯುವ ಮೊದಲು ಶಿಮ್ಜಿತಾ ಮುಸ್ತಫಾ ಅವರನ್ನು ಕೋಯಿಲಾಂಡಿ ತಾಲೂಕು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.

ಶಿಮ್ಜಿತಾ ಮುಸ್ತಫಾ - ದೀಪಕ್ (ಸಂಗ್ರಹ ಚಿತ್ರ)

ತಿರುವನಂತಪುರಂ, ಜ. 21: ಲೈಂಗಿಕ ದೌರ್ಜನ್ಯ (Physical assault) ಆರೋಪದ ವಿಡಿಯೊ ವೈರಲ್ ಆಗುತ್ತಿದ್ದಂತೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಸೋಶಿಯಲ್ ಮಿಡಿಯಾ ಇನ್‌ಫ್ಲುಯೆನ್ಸರ್ (social media influencer) ವಡಕರ (Vatakara) ಮೂಲದ ಶಿಮ್ಜಿತಾ ಮುಸ್ತಫಾ (Shimjitha Musthafa) ಅವರನ್ನು ಬುಧವಾರ (ಜನವರಿ 21) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಝಿಕ್ಕೋಡ್‌ನ ಕೋಯಿಲಾಂಡಿ (Koyilandi) ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಶಿಮ್ಜಿತಾಳನ್ನು ಕೋಝಿಕ್ಕೋಡ್‌ನ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ವರದಿಗಳು ತಿಳಿಸಿವೆ.

ಗಾರ್ಮೆಂಟ್ ಕಂಪನಿಯೊಂದರಲ್ಲಿ ಸೇಲ್ಸ್ ಆಫೀಸರ್ ಆಗಿದ್ದ 41 ವರ್ಷದ ದೀಪಕ್, ಭಾನುವಾರ (ಜನವರಿ 18) ಬೆಳಗ್ಗೆ ಮಂಕಾವು ಪ್ರದೇಶದಲ್ಲಿರುವ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಸ್ ಪ್ರಯಾಣದ ವೇಳೆ ದೀಪಕ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಶಿಮ್ಜಿತಾ ಮುಸ್ತಫಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವಿಡಿಯೊ ವೈರಲ್ ಆದ ಬಳಿಕ ಈ ಘಟನೆ ಸಂಭವಿಸಿತ್ತು. ಆ ವಿಡಿಯೊ ವ್ಯಾಪಕ ಸಾರ್ವಜನಿಕ ಪ್ರತಿಕ್ರಿಯೆಗೆ ಕಾರಣವಾಗಿತ್ತು.

ಅರೀಕೋಡ್‌ನ ಪಂಚಾಯತ್‌ನ ಮಾಜಿ ಸದಸ್ಯೆಯಾಗಿರುವ ಶಿಮ್ಜಿತಾ ವಿರುದ್ಧ ದೀಪಕ್‌ನ ಕುಟುಂಬಸ್ಥರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ದೂರು ನೀಡಿದ್ದರು. ಪ್ರಕರಣ ದಾಖಲಾಗುವ ಮೊದಲು, ಆಕೆ ಕೋಝಿಕ್ಕೋಡ್‌ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮುಂಗಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಕರಣ ದಾಖಲಾದ ಬಳಿಕ ಆಕೆ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದರು. ಆಕೆ ದೇಶ ತೊರೆಯದಂತೆ ಲುಕ್‌ಔಟ್ ನೋಟಿಸ್ ಕೂಡ ಹೊರಡಿಸಲಾಗಿತ್ತು.

ಈ ನಡುವೆ, ಬಿಜೆಪಿ ಕಾರ್ಯಕರ್ತರ ಗುಂಪೊಂದು ಮೆಡಿಕಲ್ ಕಾಲೇಜು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ, ಶಿಮ್ಜಿತಾರನ್ನು ಖಾಸಗಿ ವಾಹನಗಳಲ್ಲಿ ಗುಪ್ತವಾಗಿ ಕರೆದೊಯ್ಯುವ ಮೂಲಕ ಪೊಲೀಸರು ಆಕೆಯನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಲೈಂಗಿಕ ಕಿರುಕುಳ ಆರೋಪ ಕೇಸ್‌; ಶಿಮ್ಜಿತಾ ಮುಸ್ತಫಾ ವಿರುದ್ಧ ಪ್ರಕರಣ ದಾಖಲು

ಶಿಮ್ಜಿತಾ ಬಳಸಿದ್ದ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲ ವಿಡಿಯೊವನ್ನು ರೆಕಾರ್ಡ್ ಮಾಡಲು ಬಳಸಿದ ಮೊಬೈಲ್ ಅದೇ ಎಂದು ಶಂಕಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿವಾದಾತ್ಮಕ ವಿಡಿಯೊವನ್ನು ಹಲವು ಕ್ಲಿಪ್‌ಗಳನ್ನು ಸೇರಿಸಿ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

“ಮೂಲ ವಿಡಿಯೊಗಳನ್ನೆಲ್ಲಾ ವಶಕ್ಕೆ ಪಡೆದು, ಅದನ್ನು ಪರಿಶೀಲಿಸಬೇಕು. ದುಷ್ಕೃತ್ಯದ ಆರೋಪ ನಿಜವೇ? ದೃಶ್ಯಗಳನ್ನು ರೆಕಾರ್ಡ್ ಮಾಡುವ ಮತ್ತು ಹಂಚಿಕೊಂಡಿರುವ ಹಿಂದಿನ ಉದ್ದೇಶವೇನು? ಎಂಬುವುದನ್ನು ತಿಳಿಯಬೇಕು. ಅಲ್ಲದೇ ಈ ಹಿಂದೆಯೂ ಈ ರೀತಿ ಮಾಡಿದ್ದಾಳೆ ಎಂಬುದನ್ನು ತಿಳಿಯಲು ಆಕೆಯ ಹಿಂದಿನ ವೀಡಿಯೊಗಳನ್ನೂ ಪರಿಶೀಲಿಸುವ ಯೋಜನೆ ಇದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತ ದೀಪಕ್ ಅವರ ಕುಟುಂಬಕ್ಕೆ ಆಲ್ ಕೇರಳ ಮೆನ್ಸ್ ಅಸೋಸಿಯೇಷನ್ 3.17 ಲಕ್ಷ ರುಪಾಯಿ ಪರಿಹಾರವನ್ನು ನೀಡಿದೆ. ಅಲ್ಲದೇ ಈ ಪ್ರಕರಣವನ್ನು ಸಿಬಿಐ ಅಥವಾ ಕ್ರೈಂ ಬ್ರಾಂಚ್‌ಗೆ ವಹಿಸುವಂತೆ ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಿದೆ. ಇನ್ನು ಶಿಮ್ಜಿತಾ ಅವರನ್ನು ಕುನ್ನಮಂಗಲಂ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.