ಚೆನ್ನೈ, ಡಿ. 22: ತಮಿಳುನಾಡಿನ ತಿರುಪರನ್ ಕುಂಡ್ರಮ್ (Thiruparankundram deepam) ಬೆಟ್ಟದಲ್ಲಿ ದೀಪ ಹಚ್ಚುವ ವಿವಾದಕ್ಕೆ (Controvarcy) ಸಂಬಂಧಿಸಿದಂತೆ, ಬೆಟ್ಟದ ಮೇಲಿರುವ ದರ್ಗಾದಲ್ಲಿ(Dargah) ನಡೆದ ಸಂತಾನಕೂಡು ಉತ್ಸವದಲ್ಲಿ (Santhanakoodu festival) ಧಾರ್ಮಿಕ ಸಾಮರಸ್ಯತೆ ಮೆರೆದಿರುವ ಘಟನೆ ವರದಿಯಾಗಿದೆ. ಇದು ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗುವ ಮೂಲಕ ವಿವಾದ ಬದಿಗೆ ಸರಿದು, ಸಾಮರಸ್ಯತೆ ಮೆರೆದಿದೆ. ಮಸೀದಿಯ ಪ್ರತಿನಿಧಿಗಳು ಧ್ವಜವನ್ನು ಮತ್ತು ಗಂಧದ ಲೇಪವನ್ನು ದರ್ಗಾಕ್ಕೆ ಕೊಂಡೊಯ್ಯುವ ಮೊದಲು, ಇಬ್ಬರು ಹಿಂದೂ ಕಲಾವಿದರ ತಂಡ ಮೃದಂಗ ಮತ್ತು ಥವಿಲ್ ನುಡಿಸಿದರು. ಇವರಿಗೆ ನಾದಸ್ವರದಲ್ಲಿ ಮುಸ್ಲಿಂ ಸಂಗೀತಗಾರ ನಾಗೋರ್ ಸಾಥ್ ನೀಡಿದರು.
ಇದಕ್ಕೆ ಸಂಬಂಧಿಸಿದಂತೆ ಹಿಂದೂ ವಾದಕ ಎಸ್. ಮುರುಗನ್ ಮಾಧ್ಯಮಗಳ ಜತೆ ಮಾತನಾಡಿ, ʼʼನಮಗೆಲ್ಲ ಬೇಕಿದ್ದುದು ಕೋಮು ಸಾಮರಸ್ಯತೆ ಮತ್ತು ಒಗ್ಗಟ್ಟು ಮಾತ್ರʼʼ ಎಂದು ಹೇಳಿದ್ದಾರೆ. ಇನ್ನೊಬ್ಬ ವಾದಕ ಸೆಲ್ಲದುರೈ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿನ ಬೆಟ್ಟದ ಮೇಲಿರುವ ದರ್ಗಾದ ಪಕ್ಕದಲ್ಲಿರುವ ಕಂಬದ ಮೇಲೆ ದೀಪಗಳನ್ನು ಹಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಥವಿಲ್ ನುಡಿಸಿದ ಮೀನಾಕ್ಷಿ ಸುಂದರಂ, ʼʼನನ್ನ ಪ್ರಕಾರ, ಇದೊಂದು ಸಮಥಾವು ದೀಪವಾಗಿದ್ದು, ಸಮಾನತೆಯ ಬೆಳಕನ್ನು ಬೀರುವಂತದ್ದಾಗಿದೆʼʼ ಎಂದು ಹೇಳಿದ್ದಾರೆ.
ವಿಡಿಯೊ ಇಲ್ಲಿದೆ:
ಈ ಸಂಪ್ರದಾಯಕ್ಕೆ ಹೊಸ ಆಯಾಮವೊಂದು ಸೇರ್ಪಡೆಯಾಗಿರುವ ನಿಟ್ಟಿನಲ್ಲಿ, ಹಿಂದೂ ಕುಟುಂಬ ಕಳುಹಿಸಿಕೊಟ್ಟಿದ್ದ ಮಸೀದಿಯ ಧ್ವಜವನ್ನು ಹೊತ್ತ ರಥವನ್ನು ಎತ್ತುಗಳೆರಡು ಎಳೆದಿದ್ದು ವಿಶೇಷವಾಗಿತ್ತು. ಎತ್ತುಗಳ ಯಜಮಾನನಾಗಿರುವ ಹಿಂದೂ ವ್ಯಕ್ತಿಯ ಪ್ರಕಾರ, ‘ʼನಾನಿದನ್ನು ಕಳೆದ ಎಂಟು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೇವೆ. ಇದಕ್ಕೂ ಮೊದಲು ನನ್ನ ಕುಟುಂಬದವರು ಈ ಸಂಪ್ರದಾಯದ ಭಾಗವಾಗಿದ್ದರು. ನನ್ನ ಹಿರಿಯರು ಅವರದ್ದೇ ಸ್ವಂತ ಎತ್ತುಗಳನ್ನು ಹೊಂದಿದ್ದರು. ನಾವಿದನ್ನು ಪ್ರತೀ ಸಲ ಹಿಂದುಗಳಿಂದ ಪಡೆದುಕೊಂಡು ಬರುತ್ತಿದ್ದೆವುʼʼ ಎಂದು ಹೇಳಿಕೊಂಡಿದ್ದಾರೆ.
ಶೃಂಗಾರಗೊಂಡಿದ್ದ ರಥವನ್ನು ಎಳೆದ ಎತ್ತುಗಳು ತಿರುಪರಮಕುಂಡ್ರಮ್ ದೇವಳದ ಬೀದಿಗಳಲ್ಲಿ ಸುತ್ತು ಬಂದವು. ಈ ಸಂದರ್ಭದಲ್ಲಿ ಸುಮಾರು 25ರಷ್ಟು ಮುಸ್ಲಿಮರು ಪೊಲೀಸ್ ಭದ್ರತೆಯೊಂದಿಗೆ ಈ ಮೆರವಣಿಗೆಯಲ್ಲಿ ಸಾಗಿ ಬಂದರು. ಬಳಿಕ ಬೆಟ್ಟದ ಬಳಿ ಈ ಧ್ವಜವನ್ನು ಹಾರಿಸಲಾಯಿತು.
ಇದೇ ಸಂದರ್ಭದಲ್ಲಿ ತಿರುಪರನಕುಂಡ್ರಮ್ ನಲ್ಲಿ ಪ್ರತಿಭಟನೆಗಿಳಿದಿದ್ದ 50 ಜನರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ದರ್ಗಾದ ಬಳಿ ಇರುವ ಸ್ಥಂಭದ ಬಳಿ ಹೋಗಲು ಅನುಮತಿ ಕೊಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ಘಟನೆ ದರ್ಗಾ ಉತ್ಸವ ಪ್ರಾರಂಭಗೊಳ್ಳುವ ಕೆಲವೇ ಕ್ಷಣಗಳಿಗೆ ಮೊದಲು ನಡೆದಿದೆ.
ರೋಗಿಯ ಮೇಲೆ ಕೈ ಎತ್ತಿದ ಡಾಕ್ಟರ್.. ವಿಡಿಯೋ ವೈರಲ್!
ಈ ಎಲ್ಲ ಗೊಂದಲಗಳನ್ನು ‘ಪ್ರಚೋದಿತ’ ಗುಂಪುಗಳು ಸೃಷ್ಟಿ ಮಾಡಿವೆ ಎಂದು ಮಸೀದಿ ಆಡಳಿತ ಆರೋಪಿಸಿದೆ. ಮಾತ್ರವಲ್ಲದೇ ಈ ಎಲ್ಲ ಗೊಂದಲಗಳ ಹಿಂದೆ ಹಿಂದೂ ಮುನ್ನಾನಿ ಮತ್ತು ಆರೆಸ್ಸೆಸ್ ಸಂಘಟನೆಗಳ ಕೈವಾಡವಿದೆ ಎಂದು ಅವರು ಆರೊಪಿಸಿದ್ದಾರೆ. ‘ʼಇಲ್ಲಿ ಹಿಂದೂ ಮತ್ತು ಮುಸ್ಲಿಮರು ಒಗ್ಗಟ್ಟಿನಿಂದ ಬಾಳುತ್ತಿದ್ದಾರೆ. ನಾವು ಅವರ ಹಬ್ಬವನ್ನು ಮತ್ತು ಅವರು ನಮ್ಮ ಹಬ್ಬವನ್ನು ಆಚರಿಸುತ್ತಾರ. ಆದರೆ ಈ ಪ್ರದೇಶಕ್ಕೆ ಸಂಬಂಧಿಸಿರದ ಕೆಲ ಗುಂಪುಗಳು ಇಲ್ಲಿ ವಿನಾಕಾರಣ ಗೊಂದಲವನ್ನು ಸೃಷ್ಟಿ ಮಾಡಿವೆʼʼ ಎಂದು ಮಸೀದಿ ಆಡಳಿತ ಮಂಡಳಿ ಹೇಳಿದೆ.