ನವದೆಹಲಿ, ಸೆ. 9: ವಾಯುಮಾಲಿನ್ಯ (Air Pollution) ಎಂದಾಕ್ಷಣ ಸಾಮಾನ್ಯವಾಗಿ ಮೊದಲು ನೆನಪಾಗುವ ನಗರ ದೆಹಲಿ. ಆದರೆ 2026ರ ಸ್ವಚ್ಛ ವಾಯು ಸರ್ವೇಕ್ಷಣ್ (Swachh Vayu Sarvekshan 2026) ವರದಿ ಇದೀಗ ವಿಭಿನ್ನ ಚಿತ್ರಣ ನೀಡಿದೆ. ಮಾಲಿನ್ಯ ನಿಯಂತ್ರಣ ಕ್ರಮಗಳ (Pollution Control Measures) ಅನುಷ್ಠಾನದಲ್ಲಿ ದೆಹಲಿ, ಮುಂಬೈ, ಬೆಂಗಳೂರು ಹಾಗೂ ಕೋಲ್ಕತ್ತಾಗಿಂತ ಉತ್ತಮ ಪ್ರದರ್ಶನ ನೀಡಿದೆ (Clean-Air Report Card). 2026ರ ಸ್ವಚ್ಛ ವಾಯು ಸರ್ವೇಕ್ಷಣ್‌ನಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ 48 ನಗರಗಳ ಪೈಕಿ ದೆಹಲಿ 172 ಅಂಕಗಳೊಂದಿಗೆ 21ನೇ ಸ್ಥಾನ ಪಡೆದಿದೆ. ಇದೇ ಸ್ಥಾನವನ್ನು ವಿಶಾಖಪಟ್ಟಣಂ ಕೂಡ ಹಂಚಿಕೊಂಡಿದೆ. ಅಚ್ಚರಿ ಎಂದರೆ ದೆಹಲಿಯು ಮುಂಬೈ, ಬೆಂಗಳೂರು ಮತ್ತು ಕೋಲ್ಕತ್ತಾಗಿಂತ ಮೇಲಿನ ಸ್ಥಾನದಲ್ಲಿದೆ.
ಆದರೆ ಈ ಶ್ರೇಯಾಂಕವನ್ನು ನಗರಗಳ ನೈಜ ವಾಯು ಗುಣಮಟ್ಟ ಅಥವಾ AQI ಆಧಾರದ ಮೇಲೆ ನೀಡಲಾಗಿಲ್ಲ ಎಂಬುದು ಗಮನಾರ್ಹ. ನಗರಗಳು ವಾಯುಮಾಲಿನ್ಯ ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳು ಹಾಗೂ ಅವುಗಳ ಅನುಷ್ಠಾನವನ್ನು ಆಧರಿಸಿ ಅಂಕಗಳನ್ನು ನೀಡಲಾಗಿದೆ.
ರಸ್ತೆ ಧೂಳು ನಿಯಂತ್ರಣ, ತ್ಯಾಜ್ಯ ಸುಡುವಿಕೆ ತಡೆ, ನಿರ್ಮಾಣ ಮತ್ತು ಧ್ವಂಸ ತ್ಯಾಜ್ಯ ನಿರ್ವಹಣೆ, ವಾಹನಗಳಿಂದ ಉಂಟಾಗುವ ಮಾಲಿನ್ಯ, ಕೈಗಾರಿಕಾ ಹೊರಸೂಸುವಿಕೆ ಸೇರಿ ಹಲವು ಅಂಶಗಳನ್ನು ಸರ್ವೇಕ್ಷಣ್‌ನಲ್ಲಿ ಪರಿಗಣಿಸಲಾಗಿದೆ. ಜತೆಗೆ PM10 ಮಟ್ಟದಲ್ಲಿನ ಸುಧಾರಣೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕ್ರಮಗಳಿಗೂ ಅಂಕ ನೀಡಲಾಗಿದೆ.
ಸರ್ಕಾರದ ನ್ಯಾಷನಲ್ ಕ್ಲೀನ್ ಏರ್ ಪ್ರೋಗ್ರಾಂ (NCAP) ಅಡಿಯಲ್ಲಿ ನಡೆಯುತ್ತಿರುವ ಸ್ವಚ್ಛ ವಾಯು ಸರ್ವೇಕ್ಷಣ್ ಮೊದಲ ಬಾರಿಗೆ 2022-23ರಲ್ಲಿ ಆರಂಭವಾಗಿತ್ತು. 2026ರ ಆವೃತ್ತಿಯಲ್ಲಿ ದೇಶದಾದ್ಯಂತ 130 ನಗರಗಳನ್ನು ಮೌಲ್ಯಮಾಪನ ಮಾಡಲಾಗಿದೆ.
ದೊಡ್ಡ ನಗರಗಳಲ್ಲಿ ಲಖನೌಗೆ ಅಗ್ರಸ್ಥಾನ
10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯ 48 ನಗರಗಳ ಪೈಕಿ ಲಖನೌ 198 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದೆ. ಇಂದೋರ್ 197 ಅಂಕಗಳೊಂದಿಗೆ ಎರಡನೇ ಹಾಗೂ ಜಬಲ್ಪುರ 195 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿವೆ. ಭೋಪಾಲ್ ಮತ್ತು ಆಗ್ರಾ ತಲಾ 192 ಅಂಕ ಗಳಿಸಿ ನಂತರದ ಸ್ಥಾನದಲ್ಲಿದ್ದರೆ, ಸೂರತ್ 191 ಅಂಕ ಪಡೆದಿದೆ. ಈ ವಿಭಾಗದಲ್ಲಿ ಮಧುರೈ 132.1 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ. ಕೋಲ್ಕತಾ 142.2, ಕೋಟಾ 146.3 ಮತ್ತು ಜಂಶೆಡ್‌ಪುರ 147.3 ಅಂಕ ಗಳಿಸಿವೆ.
ವಂದೇ ಮಾತರಂ ಗೀತೆಗೆ ಎದ್ದು ನಿಂತು ಗೌರವ ಸಲ್ಲಿಸಿದ ಫಾರೂಕ್-ಒಮರ್ ಅಬ್ದುಲ್ಲಾ: ಕಾಂಗ್ರೆಸ್‌ನಿಂದ ತೀವ್ರ ಅಸಮಾಧಾನ
3–10 ಲಕ್ಷ ಜನಸಂಖ್ಯೆಯ ನಗರಗಳಲ್ಲಿ ರೌರ್ಕೆಲಾ ನಂ.1
3 ಲಕ್ಷದಿಂದ 10 ಲಕ್ಷದವರೆಗೆ ಜನಸಂಖ್ಯೆ ಹೊಂದಿರುವ 42 ನಗರಗಳ ಪೈಕಿ ಒಡಿಶಾದ ರೌರ್ಕೆಲಾ 198.5 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದೆ. ಫಿರೋಜಾಬಾದ್ ಮತ್ತು ಗುಂಟೂರು ತಲಾ 195 ಅಂಕಗಳೊಂದಿಗೆ ಎರಡನೇ ಸ್ಥಾನ ಹಂಚಿಕೊಂಡಿವೆ. ಈ ವಿಭಾಗದಲ್ಲಿ ಜಲಂಧರ್ 124.5 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದ್ದು, ಕಲಬುರಗಿ 138.2 ಹಾಗೂ ಗಯಾ 140.9 ಅಂಕ ಗಳಿಸಿದೆ.
ಸಣ್ಣ ನಗರಗಳಲ್ಲಿ ಕಲಿಂಗನಗರಕ್ಕೆ ಅಗ್ರಸ್ಥಾನ
3 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯ 40 ನಗರಗಳ ಪೈಕಿ ಒಡಿಶಾದ ಕಲಿಂಗನಗರ 198.5 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದೆ. ಅಂಗುಲ್ 196.5 ಮತ್ತು ತಾಲ್ಚೇರ್ 193.5 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿವೆ. ಎಲೂರು 193 ಹಾಗೂ ಹಾಲ್ದಿಯಾ 190.6 ಅಂಕ ಗಳಿಸಿವೆ. ಈ ವಿಭಾಗದಲ್ಲಿ ಮೇಘಾಲಯದ ಬೈರ್ನಿಹಾಟ್ 108.5 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದ್ದು, ದೇರಾ ಬಸ್ಸಿ 110.5 ಮತ್ತು ಕೊಹಿಮಾ 134.1 ಅಂಕ ಗಳಿಸಿವೆ.
ಮುಖ್ಯವಾಗಿ, ಈ ಸರ್ವೇಕ್ಷಣ್‌ನಲ್ಲಿ ಹೆಚ್ಚಿನ ಅಂಕ ಪಡೆದ ನಗರ ಎಂದರೆ ಅಲ್ಲಿ ವಾಯುಮಾಲಿನ್ಯ ಕಡಿಮೆ ಇದೆ ಎಂದರ್ಥವಲ್ಲ. ನಗರವು ಮಾಲಿನ್ಯ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳು ಮತ್ತು ಸರ್ವೇಕ್ಷಣ್‌ನಲ್ಲಿ ನಿಗದಿಪಡಿಸಿದ ಮಾನದಂಡಗಳ ಮೇಲೆ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂಬುದನ್ನು ಮಾತ್ರ ಈ ಅಂಕಗಳು ಸೂಚಿಸುತ್ತವೆ.