ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಂದೇ ಮಾತರಂ ಗೀತೆಗೆ ಎದ್ದು ನಿಂತು ಗೌರವ ಸಲ್ಲಿಸಿದ ಫಾರೂಕ್-ಒಮರ್‌ ಅಬ್ದುಲ್ಲಾ: ಕಾಂಗ್ರೆಸ್‌ನಿಂದ ತೀವ್ರ ಅಸಮಾಧಾನ, ಇಂಡಿಯಾ ಕೂಟದಲ್ಲಿ ಮತ್ತೆ ಶುರುವಾಯಿತು ಬಿರುಕು

ವಂದೇ ಮಾತರಂ ಗೀತೆಯ ಸಂಪೂರ್ಣ ಆವೃತ್ತಿಗೆ ಜಮ್ಮು-ಕಾಶ್ಮೀರ ಸಿಎಂ ಉಮರ್ ಅಬ್ದುಲ್ಲಾ ಎದ್ದುನಿಂತು ಗೌರವ ಸಲ್ಲಿಸಿದ್ದಕ್ಕೆ ಮೈತ್ರಿ ಪಕ್ಷ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೇವಲ ಮೊದಲ ಎರಡು ಚರಣಗಳಿಗೆ ಮಾತ್ರ ಗೌರವ ನೀಡುವ ಐತಿಹಾಸಿಕ ನಿಯಮವನ್ನು ಪಾಲಿಸುವಂತೆ ಕಾಂಗ್ರೆಸ್ ಒತ್ತಾಯಿಸಿದ್ದು, ಇಂಡಿಯಾ ಮೈತ್ರಿಕೂಟದಲ್ಲಿ ಹೊಸ ಸಂಘರ್ಷಕ್ಕೆ ಹಾದಿಮಾಡಿಕೊಟ್ಟಿದೆ.

ವಂದೇ ಮಾತರಂಗೆ ಎದ್ದು ನಿಂತು ಗೌರವ ಸಲ್ಲಿಸಿದ ಫಾರೂಕ್-ಒಮರ್‌ ಅಬ್ದುಲ್ಲಾ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Sep 9, 2026 4:03 PM

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಎನ್‌ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ʼವಂದೇ ಮಾತರಂʼ ಗೀತೆಯ ಪೂರ್ಣ ಚರಣವನ್ನು ಹಾಡಿ ಗೌರವ ಸಲ್ಲಿಸಿದ್ದು ರಾಷ್ಟ್ರರಾಜಕಾರಣದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ. ಪೂರ್ಣ ಗೀತೆಯನ್ನು ಹಾಡಿರುವುದಕ್ಕೆ ಮಿತ್ರಪಕ್ಷ ಕಾಂಗ್ರೆಸ್‌ ತೀವ್ರ ಆಕ್ರೋಶ ಹೊರಹಾಕಿದೆ, ಇದಕ್ಕೆ ಇನ್‌ಸಿಯು ʼನಮ್ಮ ಮೇಲೆ ಯಾರು ನಿರ್ಭಂದ ಹೇರಲು ಸಾಧ್ಯವಿಲ್ಲʼ ಎಂದು ತಿರುಗೇಟು ನೀಡಿದೆ. ಇದೇ ವೇಳೆ ಆಡಳಿತರೂಢ ಬಿಜೆಪಿ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್‌ ಪಕ್ಷವನ್ನು ʼ21 ಶಾತಮಾನದ ಮುಸ್ಲಿಂ ಲೀಗ್‌ʼ ಎಂದು ಕರೆದಿದೆ.

ಶ್ರೀನಗರದಲ್ಲಿ ನಡೆದ ಚಲನಚಿತ್ರೋತ್ಸವ ಉದ್ಘಾಟನೆ ಸಮಾರಂಭದಲ್ಲಿ ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂ ಗೀತೆಯನ್ನು ಪೂರ್ಣ ಪ್ರಮಾಣದಲ್ಲಿ ಸುಮಾರು 3 ನಿಮಿಷ 10 ಸೆಕೆಂಡುಗಳಗಳ ಕಾಲ ಪ್ರಸಾರ ಮಾಡಲಾಯಿತು. ಈ ವೇಳೆ ಪ್ರೋಟೋಕಾಲ್ ನಿಯಮಗಳನ್ನು ಗೌರವಿಸಿದ ಸಿಎಂ ಉಮರ್ ಅಬ್ದುಲ್ಲಾ ಹಾಗೂ ಫಾರೂಕ್ ಅಬ್ದುಲ್ಲಾ ಅವರು ಪೂರ್ಣ ಗೀತೆಯ ಮುಕ್ತಾಯದವರೆಗೂ ಎದ್ದು ನಿಂತು ಗೌರವ ಸಲ್ಲಿಸಿದರು. ಪೂರ್ಣ ಗೀತೆ ನುಡಿಸಿದ್ದರಿಂದ ಮಿತ್ರ ಪಕ್ಷ ಕಾಂಗ್ರೆಸ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕಾಂಗ್ರೆಸ್‌ನಿಂದ ಆಕ್ಷೇಪ

ಕಾಂಗ್ರೆಸ್‌ ಪಕ್ಷವು ವಂದೇ ಮಾತರಂ ಗೀತೆಯ ಮೊದಲು ಎರಡು ಚರಣಗಳನ್ನು ಮಾತ್ರ ಹಾಡುವ ಪರಂಪರೆಯನ್ನು ಬಲವಾಗಿ ಪ್ರತಿಪಾದಿಸಿದೆ. 1937ರ ಕಾಂಗ್ರಸ್‌ ಕಾರ್ಯಕಾರಿ ಸಮಿತಿ ಸಭಯಲ್ಲಿ ಮಹಾತ್ಮಾ ಗಾಂಧಿ, ಜವಾಹರಲಾಲ್‌ ನಹರು ಮತ್ತು ರವೀಂದ್ರನಾಥ ಟ್ಯಾಗೋರ್‌ ಅವರ ಸಲಹೆಯಂತೆ ವಂದೇ ಮಾತರಂನ ಮೊದಲು ಎರಡು ಚರಣಗಳನ್ನು ಮಾತ್ರ ಅಧಿಕೃತವಾಗಿ ಸ್ವೀಕರಿಸಲಾಗಿತ್ತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್‌, ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ , ʼಪೂರ್ಣ ವಂದೇ ಮಾತರಂ ಗೀತೆ ಹಾಡುವುದು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ರೂಪಿಸಿದೆ ಬಹುತ್ವದ ಭಾರತದ ಕಲ್ಪನೆಗೆ ಹೊಂದಿಕೆಯಾಗುವುದಿಲ್ಲ. ರವೀಂದ್ರನಾಥ ಟ್ಯಾಗೋರ್‌, ನೆಹರು, ಸುಭಾಷ್‌ ಚಂದ್ರ ಬೋಸ್‌ ಅವರ ನಿರ್ಧಾರವನ್ನು ಗೌರವಿಸಿ, ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ಕಾಂಗ್ರೆಸ್‌ ನಿಲುವಿಗೆ ಮಿತ್ರಪಕ್ಷ ಬೆಂಬಲ್‌ ನೀಡಬೇಕುʼ ಎಂದು ಬರೆದುಕೊಂಡಿದ್ದಾರೆ.

ಎನ್‌ಸಿ ತಿರುಗೇಟು

ವಂದೇ ಮಾತರಂ ಗೀತೆಯ ಪೂರ್ಣ ಚರಣ ಹಾಡಿರುವುದಕ್ಕೆ ಫಾರೂಕ್‌ ಅಬ್ದುಲ್ಲಾ ಮತ್ತು ಒಮರ್‌ ಅಬ್ದುಲ್ಲಾ ಅವರಿಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್‌ ವಿರುದ್ಧ, ಜಮ್ಮ ಮತ್ತು ಕಾಶ್ಮೀರದ ಆಡಳಿತರೂಢ ನ್ಯಾಷನಲ್‌ ಕಾನ್ಫರೆನ್ಸ್‌ ಕಿಡಿಕಾರಿದೆ. ʼಕಾಂಗ್ರಸ್‌ ಮೈತ್ರಿ ಪಾಲುದಾರರಿಗೆ ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ. ನಿಯಮಗಳ ಪಾಲನೆಗೆ ನಾವು ಬದ್ಧರಾಗಿದ್ದೇವೆʼ ಎಂದು ಎನ್‌ಸಿ ನೇರವಾಗಿ ತಿಳಿಸಿದೆ.

ʼಮೈತ್ರಿ ಪಾಲುದಾರರಾಗಿ ನಾವು ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಬೇಕೇ ಅಥವಾ ಎಷ್ಟು ಚರಣಗಳನ್ನು ಹಾಡಬೇಕು ಎಂಬುವುದರ ಕುರಿತು ನೀವು ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ. ವೇಣುಗೋಪಾಲ್‌ ಅವರಿಗೆ ಟ್ವೀಟ್‌ ಮಾಡುವ ಹಕ್ಕಿದೆ, ಆದರೆ ಅವರಿಗೆ ನಮ್ಮ ಮೇಲೆ ತಮ್ಮ ಷರತ್ತುಗಳನ್ನು ವಿಧಿಸುವ ಹಕ್ಕಿಲ್ಲʼ ಎಂದು ಎನ್‌ಸಿ ನಾಯಕ ಬಶೀರ್‌ ಅಹ್ಮದ್‌ ಗುಡುಗಿದ್ದಾರೆ.

ಬಿಜೆಪಿ ಟೀಕೆ

ಈ ವಿವಾದದ ಕುರಿತು ಮಾತನಾಡಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ʼವಂದೇ ಮಾತರಂ ಗೀತೆ ಹಾಡುವುದಕ್ಕೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸುವುದನ್ನು ನೋಡಿದರೆ, ಅದು 21 ಶತಮಾನದ ನವ ಮುಸ್ಲಿಂ ಲೀಗ್‌ ಆಗಿ ಬದಲಾಗಿದೆʼ ಎಂದು ಕಿಡಿಕಾರಿದ್ದಾರೆ. ʼಕಣಿವೆಯ ಪ್ರತ್ಯೇಕವಾದಿಗಳು ಕೂಡಾ ಎಂದೂ ಇಂತಹ ಆಕ್ಷೇಪ ಎತ್ತಿರಲಿಲ್ಲಾ ಎಂದು ಬಿಜೆಪಿ ಮುಖಂಡ ಆರ್. ಎಸ್‌. ಪಠಾನಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವು ಎಲ್ಲಾ ಅಧಿಕೃತ ಕಾರ್ಯಕ್ರಮಗಳು, ಶಾಲೆಗಳು ಮತ್ತು ಸರ್ಕಾರಿ ಸಮಾರಂಭಗಳಲ್ಲಿ ರಾಷ್ಟ್ರಗೀತೆ ‘ಜನ ಗಣ ಮನ’ ಹಾಡುವ ಮುನ್ನ ವಂದೇ ಮಾತರಂನ ಎಲ್ಲಾ 6 ಚರಣಗಳನ್ನು ಕಡ್ಡಾಯವಾಗಿ ನುಡಿಸಬೇಕು ಎಂದು ಇತ್ತೀಚೆಗೆ ಆದೇಶಿಸಿರುವುದು ಈ ರಾಜಕೀಯ ಜಟಾಪಟಿಗೆ ಪ್ರಮುಖ ಕಾರಣವಾಗಿದೆ.