ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಯುವ ಜನತೆಯೇ ಟಾರ್ಗೆಟ್‌; ಉಗ್ರ ಜಾಲವನ್ನು ವಿಸ್ತರಿಸಲು ಸೋಶಿಯಲ್‌ ಮೀಡಿಯಾ ಬಳಸುತ್ತಿದ್ದ ಆತ್ಮಹತ್ಯಾ ಬಾಂಬರ್‌ ಉಮರ್‌

ದೆಹಲಿ ಸ್ಫೋಟದ ರೂವಾರಿ, ಆತ್ಮಹತ್ಯಾ ಬಾಂಬರ್‌ ಡಾ. ಉಮರ್‌ ಉನ್‌ ನಬಿ ಆಲಿಯಾಸ್‌ ಉಮರ್‌ ಮೊಹಮ್ಮದ್‌ ಹೇಗೆ ಯುವ ಜನತೆಯನ್ನು ಬ್ರೈನ್‌ ವಾಷ್‌ ಮಾಡುತ್ತಿದ್ದ ಎನ್ನುವ ವಿಚಾರ ತನಿಖೆಯಿಂದ ಬೆಳಕಿಗೆ ಬರುತ್ತಿದೆ. ಸೋಶಿಯಲ್‌ ಮೀಡಿಯಾವನ್ನು ಬಳಸಿ ಯುವ ಜನತೆಯನ್ನು ಜೈಶ್‌-ಎ-ಮೊಹಮ್ಮದ್‌ ಗುಂಪಿನ ಸ್ಲೀಪರ್‌ ಸೆಲ್‌ಗಳನ್ನಾಗಿ ಮಾಡಲು ಯೋಜನೆ ರೂಪಿಸಿದ್ದ ಎಂದು ಅದಿಕಾರಿಗಳು ವಿವರಿಸಿದ್ದಾರೆ.

ಸೋಶಿಯಲ್‌ ಮೀಡಿಯಾ ಮೂಲಕ ಉಗ್ರ ಜಾಲ ವಿಸ್ತರಿಸುತ್ತಿದ್ದ ಉಮರ್‌

ಉಗ್ರ ಜಾಲವನ್ನು ವಿಸ್ತರಿಸಲು ಸೋಶಿಯಲ್‌ ಮೀಡಿಯಾ ಬಳಸುತ್ತಿದ್ದ ಡಾ. ಉಮರ್‌ ಮೊಹಮ್ಮದ್‌. -

Ramesh B
Ramesh B Nov 17, 2025 11:29 AM

ದೆಹಲಿ, ನ. 17: ದೆಹಲಿ ಕೆಂಪು ಕೋಟೆ ಬಳಿ ನವೆಂಬರ್‌ 10ರಂದು ನಡೆದ ಉಗ್ರ ದಾಳಿಯ ಕುರಿತಾದ ಒಂದೊಂದೇ ರಹಸ್ಯ ಬೆಳಕಿಗೆ ಬರುತ್ತಿದೆ (Delhi Blast). ಸ್ಫೋಟದ ರೂವಾರಿ, ಆತ್ಮಹತ್ಯಾ ಬಾಂಬರ್‌, ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಡಾ. ಉಮರ್‌ ಉನ್‌ ನಬಿ ಆಲಿಯಾಸ್‌ ಉಮರ್‌ ಮೊಹಮ್ಮದ್‌ ಹೇಗೆ ಯುವ ಜನತೆಯನ್ನು ಬ್ರೈನ್‌ ವಾಷ್‌ ಮಾಡುತ್ತಿದ್ದ ಎನ್ನುವ ವಿಚಾರ ತನಿಖೆಯಿಂದ ಹೊರ ಬೀಳುತ್ತಿದೆ. ಸೋಶಿಯಲ್‌ ಮೀಡಿಯಾವನ್ನು ಬಳಸಿ ಯುವ ಜನತೆಯನ್ನು ಜೈಶ್‌-ಎ-ಮೊಹಮ್ಮದ್‌ ಗುಂಪಿನ ಸ್ಲೀಪರ್‌ ಸೆಲ್‌ಗಳನ್ನಾಗಿ ಮಾಡಲು ಯೋಜನೆ ರೂಪಿಸಿದ್ದ.

ತನಿಖಾಧಿಕಾರಿಗಳು ಡಾ. ಉಮರ್ ನಬಿಯ ಮೊಬೈಲ್ ಫೋನ್‌ನಿಂದ ದೊರೆತ ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಜೈಶ್-ಎ-ಮೊಹಮ್ಮದ್‌ಗೆ ಸಂಬಂಧಿಸಿದ ಸ್ಲೀಪರ್ ಸೆಲ್‌ಗಳ ಜಾಲವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದ ಆತ ಯುವಜನರೊಂದಿಗೆ ಸ್ನೇಹ ಬೆಳೆಸಲು ಮತ್ತು ಮೂಲಭೂತವಾದಿಗಳಾಗಿ ಪರಿವರ್ತಿಸಲು ಸಾಮಾಜಿಕ ಮಾಧ್ಯಮವನ್ನು ಹೇಗೆ ಬಳಸುತ್ತಿದ್ದ ಎಂಬುದನ್ನು ವಿವರಿಸಿದ್ದಾರೆ.

ಭದ್ರತಾ ಸಂಸ್ಥೆಗಳ ಗಮನ ಸೆಳೆಯದಿರಲು ಉಮರ್ ಯಾವುದೇ ಪೂರ್ವ ಕ್ರಿಮಿನಲ್ ದಾಖಲೆಗಳಿಲ್ಲದ ಯುವಕರು ಗುರಿಯಾಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಮೂಲಗಳ ಪ್ರಕಾರ, ಉಮರ್ ಆನ್‌ಲೈನ್‌ನಲ್ಲಿ ಜನರ ಸ್ನೇಹ ಬೆಳೆಸಿಕೊಳ್ಳುತ್ತಿದ್ದ. ಕ್ರಮೇಣ ಅವರಿಗೆ ಉಗ್ರಗಾಮಿ ಸಿದ್ಧಾಂತಗಳನ್ನು ಪರಿಚಯಿಸುತ್ತಿದ್ದ. "ಉಮರ್ ಸಂಪರ್ಕದಲ್ಲಿದ್ದ ಹಲವು ವ್ಯಕ್ತಿಗಳ ಬಗ್ಗೆ ಸಂಸ್ಥೆಗೆ ಮಾಹಿತಿ ದೊರೆತಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉಮರ್‌ನ ಜಾಲ ಜಮ್ಮು ಮತ್ತು ಕಾಶ್ಮೀರವನ್ನು ಮೀರಿ ಹರಿಯಾಣದ ಕಡೆಗೂ ವಿಸ್ತರಿಸಿದೆ.

ಈ ಸುದ್ದಿಯನ್ನೂ ಓದಿ: Red Fort Blast: ದೆಹಲಿ ಬಾಂಬ್‌ ಸ್ಫೋಟದ ರೂವಾರಿ ಉಮರ್‌ನ ಸಹಾಯಕನನ್ನು ಬಂಧಿಸಿದ ಎನ್‌ಐಎ

2 ದಶಕಗಳ ಹಿಂದಿನ ಕ್ರಮಕ್ಕೆ ಹೋಲಿಸಿದರೆ ನೇಮಕಾತಿ ತಂತ್ರಗಳಲ್ಲಿ ಗಮನಾರ್ಹ ಬದಲಾವಣೆಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. "ಇದೀಗ ಯಾವುದೇ ಅಪರಾಧ ಹಿನ್ನೆಲೆ ಇಲ್ಲದ ಯುವ ಜನತೆಯತ್ತ ಭಯೋತ್ಪಾದಕರು ಆದ್ಯತೆ ನೀಡುತ್ತಿದ್ದಾರೆ" ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ. "ಇದೀಗ ಉಗ್ರಗಳೊಂದಿಗೆ ಸಂಪರ್ಕಕ್ಕೆ ಬಂದ ಕುಟುಂಬಗಳು ಸಹ ಯಾವುದೇ ಭಯೋತ್ಪಾದನೆ ಅಥವಾ ಪ್ರತ್ಯೇಕತಾವಾದಿ ಸಂಘಟನೆಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಇದು ಅವರ ಮೇಲೆ ಯಾವುದೇ ಅನುಮಾನ ಮೂಡದಂತೆ ಮಾಡುತ್ತದೆʼʼ ಎಂದಿದ್ದಾರೆ.

ಟಿಎಟಿಪಿ ಬಳಸಿರುವ ಶಂಕೆ

ದೆಹಲಿ ಕೆಂಪು ಕೋಟೆ ಮೆಟ್ರೋ ನಿಲ್ದಾಣ ಬಳಿಯ ಡಾ. ಉಮರ್‌ನ ಐ20 ಕಾರ್‌ ಸ್ಫೋಟದಲ್ಲಿ ಟ್ರಯಾಸೆಟೋನ್‌ ಟ್ರೈಪೆರಾಕ್ಸೈಡ್‌ (TATP) ರಾಸಾಯನಿಕ ಬಳಕೆಯಾಗಿರುವ ಶಂಕೆ ವ್ಯಕ್ತವಾಗಿದೆ. 2-3 ಕೆಜಿ ಅಮೋನಿಯಂ ನೈಟ್ರೇಟ್‌ ಮತ್ತು ಇಂಧನ ತೈಲದ ಜತೆಗೆ ಟಿಎಟಿಪಿ ರಾಸಾಯನಿಕ ಬಳಸಿರುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಸ್ಫೋಟಗೊಂಡ ಬಾಂಬ್‌ 40-50 ಕೆಜಿ ತೂಕವಿದ್ದರಿಬಹುದು. ಟಿಎಟಿಪಿ ರಾಸಾಯನಿಕ ಅತ್ಯಂತ ಅಪಾಯಕಾರಿ ರಾಸಾಯನಿಕ. ಇದು ಘರ್ಷಣೆ ಉಂಟಾದರೆ, ಶಾಖ ತಗುಲಿದರೆ ಜೋರಾಗಿ ಸ್ಫೋಟಿಸಬಲ್ಲದು. ಉಮರ್‌ ಕೈಯಿಂದಲೇ ಆನ್‌-ಆಫ್‌ ಮಾಡಬಲ್ಲ ಸರಳ ಸ್ವಿಚನ್ನೇ ಸ್ಫೋಟಕಕ್ಕೆ ಜೋಡಿಸಿದ್ದ. ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಮತ್ತು ವಿಧಿವಿಜ್ಞಾನ ಪರಿಣತರ ತಂಡ ವರದಿ ನೀಡಿದ ಬಳಿಕವಷ್ಟೇ ಈ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಲಿದೆ.