ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Umar Mohammad: ದೆಹಲಿ ಸ್ಫೋಟಕ್ಕೆ ಮುನ್ನ ಮೊಬೈಲ್‌ ಫೋನ್‌ ನೀರಿಗೆ ಎಸೆಯುವಂತೆ ಸೂಚಿಸಿದ್ದ ಬಾಂಬರ್‌ ಉಮರ್‌ ಮೊಹಮ್ಮದ್‌

Delhi Blast: ದೆಹಲಿಯ ಕೆಂಪು ಕೋಟೆ ಬಳಿ ನವೆಂಬರ್‌ 10ರಂದು ನಡೆದ ಬಾಂಬ್‌ ಸ್ಫೋಟದ ರೂವಾರಿ ಡಾ. ಉಮರ್‌ ಮೊಹಮ್ಮದ್‌ ಬಗ್ಗೆ ಒಂದೊಂದೇ ವಿಚಾರ ಹೊರ ಬೀಳುತ್ತಿದೆ. ಉಮರ್‌‌ ಬಾಂಬ್‌ ಸ್ಫೋಟಕ್ಕೂ ಮುನ್ನ ಪುಲ್ವಾಮಾದಲ್ಲಿರುವ ತನ್ನ ಮನೆಗೆ ತೆರಳಿ ಸಹೋದರನಿಗೆ ಮೊಬೈಲ್‌ ಫೋನ್‌ ನೀಡಿ ಅದನ್ನು ನಾಶಪಡಿಸುವಂತೆ ಸೂಚಿಸಿದ್ದ ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಮೊಬೈಲ್‌ ಫೋನ್‌ ನೀರಿಗೆ ಎಸೆಯುವಂತೆ ಸೂಚಿಸಿದ್ದ ಬಾಂಬರ್‌ ಉಮರ್‌

ದೆಹಲಿ ಬಾಂಬ್‌ ಸ್ಫೋಟ ನಡೆದ ಸ್ಥಳ. ಒಳಚಿತ್ರದಲ್ಲಿ ಡಾ. ಉಮರ್‌ ಮೊಹಮ್ಮದ್‌. -

Ramesh B
Ramesh B Nov 18, 2025 10:39 PM

ಶ್ರೀನಗರ, ನ. 18: ದೆಹಲಿಯ ಕೆಂಪು ಕೋಟೆ ಬಳಿ ನವೆಂಬರ್‌ 10ರಂದು ನಡೆದ ಬಾಂಬ್‌ ಸ್ಫೋಟದಲ್ಲಿ (Delhi Blast) 13 ಮಂದಿ ಬಲಿಯಾಗಿದ್ದು, ಈ ಘಟನೆಯ ಆಘಾತದಿಂದ ದೇಶ ಇನ್ನೂ ಚೇತರಿಸಿಕೊಂಡಿಲ್ಲ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಮೂಲದ ಡಾ. ಉಮರ್‌ ಮೊಹಮ್ಮದ್‌ (Dr Umar Mohammad) ಚಲಾಯಿಸುತ್ತಿದ್ದ ಹ್ಯುಂಡೈ ಐ20 ಕಾರ್‌ ಮೆಟ್ರೋ ಸ್ಟೇಷನ್‌ ಬಳಿ ಸ್ಫೋಟಗೊಳ್ಳುವ ಮೂಲಕ ಉಗ್ರ ಕೃತ್ಯ ಮತ್ತೊಮ್ಮೆ ಬಟಾ ಬಯಾಲಾಗಿದೆ. ಈಗಾಗಲೇ ಕಾರು ಚಲಾಯಿಸುತ್ತಿದ್ದ ಆತ್ಮಹತ್ಯಾ ಬಾಂಬರ್‌ ಡಾ. ಉಮರ್‌ ಮೊಹಮ್ಮದ್‌ ಎನ್ನುವುದು ಡಿಎನ್‌ಎ ಟೆಸ್ಟ್‌ ಮೂಲಕ ಸಾಬೀತಾಗಿದೆ. ಇದೀಗ ಉಮರ್‌ ಕುರಿತಾದ ಒಂದೊಂದೇ ಮಾಹಿತಿ ತನಿಖೆ ವೇಳೆ ಹೊರ ಬೀಳುತ್ತಿದೆ. ಉಮರ್‌‌ ಬಾಂಬ್‌ ಸ್ಫೋಟಕ್ಕೂ ಮುನ್ನ ಪುಲ್ವಾಮಾದಲ್ಲಿರುವ ತನ್ನ ಮನೆಗೆ ತೆರಳಿ ಸಹೋದರನಿಗೆ ಮೊಬೈಲ್‌ ಫೋನ್‌ ನೀಡಿ ಅದನ್ನು ನಾಶಪಡಿಸುವಂತೆ ಸೂಚಿಸಿದ್ದ ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ತನ್ನ ಬಗ್ಗೆ ಸುದ್ದಿ ಏನಾದರೂ ಬಂದರೆ ಮೊಬೈಲ್‌ ಫೋನ್‌ ನೀರಿಗೆ ಎಸೆದು ನಾಶಪಡಿಸುವಂತೆ ಉಮರ್‌ ತನ್ನ ಸಹೋದರ ಝಹೂರ್‌ ಇಲ್ಲಾಹಿಗೆ (Zahoor Illahi) ತಿಳಿಸಿದ್ದ. ಸದ್ಯ ಪೊಲೀಸ್‌ ಕಸ್ಟಡಿಯಲ್ಲಿರುವ ಇಲ್ಲಾಹಿ ಆರಂಭದಲ್ಲಿ ತನಗೆ ಈ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳುತ್ತಲೇ ಬಂದಿದ್ದ. ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆ ಇದೀಗ ಮೊಬೈಲ್‌ ಫೋನ್‌ ಗುಟ್ಟು ಬಿಟ್ಟು ಕೊಟ್ಟಿದ್ದಾನೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಉಮರ್‌ ಮೊಹಮ್ಮದ್‌ನ ವಿಡಿಯೊ ಇಲ್ಲಿದೆ:



ಉಮರ್‌ ಸಹೋದರ ಹೇಳಿದ್ದೇನು?

ಝಹೂರ್‌ ಈ ಬಗ್ಗೆ ಮಾತನಾಡಿದ್ದು, ಉಮರ್‌ ಪುಲ್ವಾಮಾದಲ್ಲಿರುವ ಮನೆಗೆ ಅಕ್ಟೋಬರ್‌ 26ರಂದು ಭೇಟಿ ನೀಡಿದ್ದಾಗಿ ತಿಳಿಸಿದ್ದಾನೆ. ಉಮರ್ ತನ್ನ ಸುದ್ದಿ ಹೊರ ಬಿದ್ದರೆ ಫೋನ್ ನೀರಿಗೆ ಎಸೆಯಲು ಸೂಚನೆ ನೀಡಿದ್ದ. ಇದೀಗ ಝಹೂರ್‌ ಪೊಲೀಸರನ್ನು ಮೊಬೈಲ್‌ ಎಸೆದ ಸ್ಥಳಕ್ಕೆ ಕರೆದೊಯ್ದ. ಅಲ್ಲಿ ಉಮರ್‌ನ ಹಾನಿಗೊಳಗಾದ ಮೊಬೈಲ್‌ ಫೋನ್‌ ಲಭಿಸಿದೆ. ಹಾನಿಯ ಹೊರತಾಗಿಯೂ ವಿಧಿವಿಜ್ಞಾನ ತಂಡದ ಸದಸ್ಯರು ಅದರಿಂದ ನಿರ್ಣಾಯಕ ಡೇಟಾ ಹೊರತೆಗೆದಿದ್ದಾರೆ.

Umar Nabi Video: ಉಗ್ರ ಉಮರ್‌ ನಬಿ ವಿಡಿಯೊ ರಿಲೀಸ್‌; ದೆಹಲಿ ಸ್ಫೋಟದ ಬಗ್ಗೆ ಈ ಪಾಪಿ ಹೇಳಿದ್ದೇನು ಗೊತ್ತಾ?

ಸದ್ಯ ಉಮರ್‌ ಮಾತನಾಡಿರುವ ವಿಡಿಯೊ ಹೊರ ಬಿದ್ದಿದ್ದು, ಅದರಲ್ಲಿ ಆತ ದಾಳಿಯನ್ನು ಹುತಾತ್ಮರ ಕಾರ್ಯಾಚರಣೆ ಎಂದು ಕರೆಯುವ ಮೂಲಕ ತನ್ನ ಹೀನ ಕೃತ್ಯವನ್ನು ಸಮರ್ಥಿಸಿಕೊಂಡಿರುವುದು ಕಂಡು ಬಂದಿದೆ. ʼʼಈ ಉಗ್ರ ದಾಳಿಯನ್ನು ಆತ್ಮಾಹುತಿ ದಾಳಿ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಆದರೆ ಇಸ್ಲಾಂ ಪ್ರಕಾರ ಇದೊಂದು ಕೇವಲ ಹುತಾತ್ಮರು ನಡೆಸುವ ಕಾರ್ಯಾಚರಣೆ ಅಷ್ಟೇʼʼ ಎಂದು ವಾದಿಸಿದ್ದಾನೆ.

ʼʼಯಾರೂ ಯಾವಾಗ ಅಥವಾ ಎಲ್ಲಿ ಸಾಯುತ್ತಾರೆಂದು ನಿಖರವಾಗಿ ಊಹಿಸಲು ಸಾಧ್ಯವಿಲ್ಲ ಮತ್ತು ಅದು ವಿಧಿಯಾಗಿದ್ದರೆ ಸಂಭವಿಸುತ್ತದೆ. ಹೀಗಾಗಿ ಯಾವತ್ತೂ ಸಾವಿಗೆ ಹೆದರಬೇಡಿʼʼ ಎಂದು ಹೇಳಿದ್ದಾನೆ. ಝಹೂರ್‌ ಫೋನ್‌ ಅನ್ನು ಪುಲ್ವಾಮಾದಲ್ಲಿರುವ ಅವರ ಮನೆಯ ಬಳಿಯ ಕೊಳಕ್ಕೆ ಫೋನ್ ಎಸೆದಿದ್ದ. "ಫೋನ್‌ ಒಳಗೆ ನೀರು ತುಂಬಿ ಹಾನಿಯಾಗಿತ್ತು ಮತ್ತು ಮದರ್‌ಬೋರ್ಡ್ ಸಹ ಅಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಅದಾಗ್ಯೂ ವಿಡಿಯೊವನ್ನು ರಿಕವರಿ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ" ಎಂದು ಮೂಲಗಳು ತಿಳಿಸಿವೆ.