ನವದೆಹಲಿ: ದಕ್ಷಿಣ ದೆಹಲಿಯ ಮಾಳವೀಯ ನಗರದ ಹೌಜ್ ರಾಣಿ ಪ್ರದೇಶದ ಫ್ಲೋರಿಶ್ ಸ್ಟೇಯ ಲೆಮನ್ ಗ್ರೀನ್ ರೆಸ್ಟೋರೆಂಟ್ ನಲ್ಲಿ ಬುಧವಾರ ಬೆಳಕ್ಕೆ ಸಂಭವಿಸಿದ ಬೆಂಕಿ ದುರಂತದಲ್ಲಿ (fire accident) ಸುಮಾರು 21 ಮಂದಿ ಸಾವನ್ನಪ್ಪಿದ್ದು, ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಂತಾಪ ಸೂಚಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು ಮೃತರ ಸಂಬಂಧಿಕರಿಗೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರವನ್ನು ( aid) ಘೋಷಿಸಿದರು.
ಬೆಂಕಿ ದುರಂತದಲ್ಲಿ ಸುಮಾರು 21 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹಲವರು ವಿದೇಶಿಯರು, ಮುಖ್ಯವಾಗಿ ಮಧ್ಯ ಏಷ್ಯಾ ಮತ್ತು ಆಫ್ರಿಕಾದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿರುವ ಅವರು, ಈ ಬೆಂಕಿ ಅವಘಡದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಸಂತ್ರಸ್ತರಿಗೆ ಅಧಿಕಾರಿಗಳು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿ ಬೆಂಕಿ ಅವಘಡ: ಪ್ರಾಣ ಕಾಪಾಡಿಕೊಳ್ಳಲು ಕಟ್ಟಡದಿಂದ ಜಿಗಿದ ಮಹಿಳೆಯರ ವಿಡಿಯೊ ವೈರಲ್
ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ನೆರವು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹೌಜ್ ರಾಣಿ ಪ್ರದೇಶದ ಫ್ಲೋರಿಶ್ ಸ್ಟೇಯ ಲೆಮನ್ ಗ್ರೀನ್ ರೆಸ್ಟೋರೆಂಟ್ ನಲ್ಲಿ ಉಳಿದುಕೊಂಡಿದ್ದವರಲ್ಲಿ ಹೆಚ್ಚಿನವರು ವಿದೇಶಿಯರು. ಇವರು ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದವರು ಎನ್ನಲಾಗಿದೆ. ಈ ಹೋಟೆಲ್ ದೆಹಲಿಯ ಉನ್ನತ ವೈದ್ಯಕೀಯ ಕೇಂದ್ರಗಳಲ್ಲಿ ಒಂದಾದ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಹತ್ತಿರದಲ್ಲಿದೆ.
ಹೌಜ್ ರಾಣಿ ಪ್ರದೇಶದ ಅತ್ಯಂತ ಕಿರಿದಾದ ಬೀದಿಗಳಲ್ಲಿರುವ ಈ ಹೋಟೆಲ್ ನಲ್ಲಿ ತಂಗಿದ್ದ ಹೆಚ್ಚಿನ ಅತಿಥಿಗಳು ಚಿಕಿತ್ಸೆ ಪಡೆಯುತ್ತಿದ್ದರು ಮತ್ತು ಮ್ಯಾಕ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಸಹಾಯಕರು ಎನ್ನಲಾಗಿದೆ.
ಐದು ಅಂತಸ್ತಿನ ರೆಸ್ಟೋರೆಂಟ್ ಕಟ್ಟಡದ ನೆಲಮಾಳಿಗೆಯಲ್ಲಿ ಬೆಂಕಿ ಕಾಣಿಸಿಕೊಂಡು ಮಹಡಿವರೆಗೆ ವ್ಯಾಪಿಸಿದೆ. ಹೋಟೆಲ್‌ನಿಂದ ತುರ್ತು ಕರೆ ಬಂದ ತಕ್ಷಣವೇ ಅಗ್ನಿ ಶಾಮಕ ದಳ ಸ್ಪಂದಿಸಿದ್ದು, ಎರಡು ನೀರಿನ ಎಂಜಿನ್‌ಗಳು, ಎರಡು ನೀರಿನ ಬೌಸರ್‌ಗಳು, ತುರ್ತು ಪ್ರತಿಕ್ರಿಯೆ ವಾಹನ ಮತ್ತು ಇತರ ಅಗ್ನಿಶಾಮಕ ಘಟಕಗಳನ್ನು ಹೋಟೆಲ್‌ಗೆ ಕಳುಹಿಸಲಾಯಿತು. ದುರಂತದ ವೇಳೆ 40ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ.
ಹೋಟೆಲ್ ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂದು ತಿಳಿದು ಬಂದಿಲ್ಲ. ವಿದ್ಯುತ್ ಒಲೆ ಆನ್ ಮಾಡಿದಾಗ ಬೆಂಕಿ ಹೊತ್ತಿಕೊಂಡಿದೆ. ಈ ಕುರಿತು ತಕ್ಷಣವೇ ಸಹಾಯಕರಿಗೆ ತಿಳಿಸಿದ್ದೇನೆ. ನಾನು ಹೊರಗೆ ಬಂದಾಗ ಹೋಟೆಲ್ ಹೊತ್ತಿ ಉರಿಯುತ್ತಿತ್ತು ಎಂದು ಹೋಟೆಲ್‌ನ ಅಡುಗೆಯವರಾದ ಕೇಸರ್ ಸಿಂಗ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಲೆಮನ್ ಗ್ರೀನ್ ರೆಸ್ಟೋರೆಂಟ್ ಗೆ ವ್ಯಾಪಿಸಿದ್ದ ಬೆಂಕಿಯು ಪಕ್ಕದಲ್ಲಿರುವ ಮಿಕಾಸಾ ಇನ್ ಎಂಬ ಹೋಟೆಲ್‌ಗೆ ವ್ಯಾಪಿಸಿತ್ತು. ಲೆಮನ್ ಗ್ರೀನ್ ರೆಸ್ಟೋರೆಂಟ್ ನಲ್ಲಿ ಕೇವಲ ಒಂದು ಪ್ರವೇಶ ಮತ್ತು ನಿರ್ಗಮನ ಕೇಂದ್ರವಿತ್ತು. ಈ ಹೋಟೆಲ್ ಗೆ ದೆಹಲಿ ಸರ್ಕಾರವು ಬೆಡ್ ಅಂಡ್ ಬ್ರೇಕ್‌ಫಾಸ್ಟ್ (ಬಿ & ಬಿ) ಎನ್ನುವ ಹೆಸರಿನಲ್ಲಿ ಪರವಾನಿಗೆಯನ್ನು ನೀಡಿದೆ. ಇದರ ಪ್ರಕಾರ ರೆಸ್ಟೋರೆಂಟ್ ನಲ್ಲಿ ಕೇವಲ ಆರು ಕೊಠಡಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೂ ರೆಸ್ಟೋರೆಂಟ್ ನಲ್ಲಿ ನೆಲ ಮಾಳಿಗೆಯ ಕೊಠಡಿಗಳು ಸೇರಿದಂತೆ ಒಟ್ಟು 25 ಕೊಠಡಿಗಳನ್ನು ಹೊಂದಿತ್ತು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.