ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೆಹಲಿಯಲ್ಲಿ ಭಾರಿ ಮಳೆ: ತತ್ತರಿಸಿದ ರಾಜಧಾನಿ, ಹಲವೆಡೆ ಜಲಾವೃತ; ಸಂಚಾರ ಅಸ್ತವ್ಯಸ್ತ

Heavy rain lashed Delhi: ದೆಹಲಿಯಲ್ಲಿ ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ ಹಲವು ಪ್ರಮುಖ ರಸ್ತೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ. ಎಂ.ಬಿ. ರಸ್ತೆ ಸೇರಿ ಹಲವು ಪ್ರದೇಶಗಳಲ್ಲಿ 3ರಿಂದ 4 ಅಡಿ ನೀರು ನಿಂತು, ಮನೆ ಕುಸಿದು, ಮರಗಳು ಧರೆಗುರುಳಿದ ಘಟನೆಗಳು ವರದಿಯಾಗಿವೆ. ದೆಹಲಿ ಸಮೀಪದ ನೋಯ್ಡಾ ಮತ್ತು ಗುರುಗ್ರಾಮದಲ್ಲೂ ಭಾರಿ ಮಳೆಯ ಪರಿಣಾಮ ಜನಜೀವನಕ್ಕೆ ತೊಂದರೆಯಾಗಿದೆ. ಶನಿವಾರ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ(Delhi) ಶುಕ್ರವಾರ ಸುರಿದ ಭಾರಿ ಮಳೆಯಿಂದಾಗಿ (Heavy Rain) ನಗರದ ಹಲವು ಭಾಗಗಳಲ್ಲಿ ರಸ್ತೆಗಳು ಜಲಾವೃತಗೊಂಡು, ವಾಹನ ಸಂಚಾರ ನಿಧಾನಗತಿಯಲ್ಲಿತ್ತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರತೀಯ ಹವಾಮಾನ ಲಾಖೆ (IMD) ಪ್ರಕಾರ, ಶನಿವಾರದಿಂದ ಮಳೆಯ ಪ್ರಮಾಣ ಕ್ರಮೇಣ ಕಡಿಮೆಯಾಗುವ ಸಾಧ್ಯತೆಯಿದೆ. ಮುಂದಿನ ಎರಡು ದಿನಗಳಲ್ಲಿ ಹಗುರ ಮಳೆಯಾಗುವ ನಿರೀಕ್ಷೆಯಿದೆ.

ಭಾರಿ ಮಳೆಯಿಂದಾಗಿ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ವಾಹನಗಳು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡವು. ಹಲವು ಪ್ರದೇಶಗಳಲ್ಲಿ ಮನೆ ಕುಸಿತ ಹಾಗೂ ಮರಗಳು ಧರೆಗುರುಳಿದ ಘಟನೆಗಳು ವರದಿಯಾಗಿವೆ.

ಎಂ.ಬಿ. ರಸ್ತೆ ಜಲಾವೃತ

ದಕ್ಷಿಣ ದೆಹಲಿಯ ಎಂ.ಬಿ. ರಸ್ತೆಯಲ್ಲಿ ಪರಿಸ್ಥಿತಿ ಗಂಭೀರವಾಗಿತ್ತು. ವಾಯುಸೇನಾ ನಿಲ್ದಾಣದ ಸಮೀಪದ ರಸ್ತೆಯಲ್ಲಿ ಸುಮಾರು 3ರಿಂದ 4 ಅಡಿ ನೀರು ನಿಂತಿದ್ದು, ವಾಹನ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಒಖ್ಲಾ ಮೋರ್, ಸಂಗಮ್ ವಿಹಾರ್, ಖಾನ್‌ಪುರ, ದೇವ್ಲಿ ಮತ್ತು ಅಂಬೇಡ್ಕರ್ ನಗರ ಸೇರಿ ಹಲವು ಪ್ರದೇಶಗಳಲ್ಲೂ ಭಾರಿ ಪ್ರಮಾಣದ ನೀರು ಸಂಗ್ರಹವಾಗಿತ್ತು. ಖಾನ್‌ಪುರದಿಂದ ಒಖ್ಲಾ ಮೋರ್‌ವರೆಗಿನ ಹಲವು ಕಿಲೋಮೀಟರ್‌ಗಳಷ್ಟು ರಸ್ತೆಯಲ್ಲಿ ವಾಹನಗಳು ನಿಧಾನವಾಗಿ ಸಂಚರಿಸಿದವು.

ನೀರಿನಲ್ಲಿ ಸಿಲುಕಿದ ಪರಿಣಾಮ ಕೆಲವು ದ್ವಿಚಕ್ರ ವಾಹನಗಳು ಮತ್ತು ಆಟೋರಿಕ್ಷಾಗಳು ಕೆಟ್ಟು ನಿಂತವು. ದೀರ್ಘ ಟ್ರಾಫಿಕ್‌ ಜಾಮ್‌ನಿಂದ ಕಚೇರಿಗೆ ತೆರಳುತ್ತಿದ್ದವರು ಪರದಾಡುವಂತಾಯಿತು.

ಹಲವು ಪ್ರಮುಖ ರಸ್ತೆಗಳಲ್ಲೂ ಸಂಚಾರಕ್ಕೆ ಹೊಡೆತ

ಐಟಿಒ, ವಜೀರಾಬಾದ್ ರಸ್ತೆ, ಪಟೇಲ್ ರಸ್ತೆ, ರೋಹ್ಟಕ್ ರಸ್ತೆ, ಶಂಕರ್ ರಸ್ತೆ, ಕೀರ್ತಿ ನಗರ, ದೆಹಲಿ-ಜೈಪುರ ಹೆದ್ದಾರಿ, ಪೀರಾಗಢಿ ಮತ್ತು ಶಾಹೀನ್ ಬಾಗ್ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ವಸಂತ್ ಕುಂಜ್, ಸಂಗಮ್ ವಿಹಾರ್ ಮತ್ತು ಬದರ್‌ಪುರ ಬಾರ್ಡರ್ ಮೆಟ್ರೋ ನಿಲ್ದಾಣದ ಸಮೀಪವೂ ಭಾರಿ ಜಲಾವೃತ ವರದಿಯಾಗಿದೆ. ಕೆಲವು ಕಡೆ ಮಳೆನೀರು ಭೂಗತ ಸುರಂಗಕ್ಕೂ ನುಗ್ಗಿ ಸಂಚಾರಕ್ಕೆ ಅಡ್ಡಿಯಾಯಿತು. ಪೂರ್ವ ದೆಹಲಿಯ ಜಿಟಿ ರಸ್ತೆ, ಜಿಟಿಬಿ ಎನ್‌ಕ್ಲೇವ್ ಮತ್ತು ದಿಲ್ಶಾದ್ ಗಾರ್ಡನ್ ಪ್ರದೇಶಗಳಲ್ಲೂ ವಾಹನಗಳು ನಿಧಾನವಾಗಿ ಚಲಿಸಿದವು.

ಮನೆ ಕುಸಿತ, ಮರ ಬಿದ್ದ ಘಟನೆಗಳು

ಭಾರಿ ಮಳೆಯಿಂದಾಗಿ ದೆಹಲಿ ಅಗ್ನಿಶಾಮಕ ದಳಕ್ಕೆ ಹಲವು ತುರ್ತು ಕರೆಗಳು ಬಂದಿವೆ. ಅಧಿಕಾರಿಗಳ ಪ್ರಕಾರ, 9 ಮನೆ ಕುಸಿತದ ಘಟನೆಗಳು ಮತ್ತು 16 ಮರಗಳು ಧರೆಗುರುಳಿದ ಪ್ರಕರಣಗಳು ವರದಿಯಾಗಿವೆ. ಯಾವುದೇ ಘಟನೆಯಲ್ಲಿ ಗಾಯಗಳಾಗಿಲ್ಲ ಎಂದು ತಿಳಿಸಲಾಗಿದೆ. ಮರ ಬಿದ್ದ ಪರಿಣಾಮ ಮನೆಯೊಂದರಲ್ಲಿ ಮೂವರು ಮಹಿಳೆಯರು ಸಿಲುಕಿಕೊಂಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೂವರನ್ನೂ ಸುರಕ್ಷಿತವಾಗಿ ರಕ್ಷಿಸಿದರು.

ಸಫ್ದರ್‌ಜಂಗ್‌ನಲ್ಲಿ 59.2 ಮಿಮೀ ಮಳೆ

ಶುಕ್ರವಾರ ಬೆಳಗ್ಗೆ 8.30ರವರೆಗೆ ದೆಹಲಿಯ ಪ್ರಮುಖ ಹವಾಮಾನ ಕೇಂದ್ರವಾದ ಸಫ್ದರ್‌ಜಂಗ್‌ನಲ್ಲಿ 59.2 ಮಿಮೀ ಮಳೆ ದಾಖಲಾಗಿದೆ. ಲೋಧಿ ರಸ್ತೆಯಲ್ಲಿ 60.4 ಮಿಮೀ, ರಿಡ್ಜ್‌ನಲ್ಲಿ 57 ಮಿಮೀ, ಅಯಾನಗರದಲ್ಲಿ 26.2 ಮಿಮೀ ಹಾಗೂ ಪಾಲಂನಲ್ಲಿ 16.9 ಮಿಮೀ ಮಳೆಯಾಗಿದೆ. IMD ಪ್ರಕಾರ, ಶುಕ್ರವಾರ ಸಾಧಾರಣದಿಂದ ಭಾರಿ ಮಳೆ ಮುಂದುವರಿಯುವ ಸಾಧ್ಯತೆಯಿದ್ದು, ಶನಿವಾರದಿಂದ ಮಳೆಯ ತೀವ್ರತೆ ಕಡಿಮೆಯಾಗಲಿದೆ. ಆಗಸ್ಟ್ 8 ಮತ್ತು 9ರಂದು ದೆಹಲಿಯಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಪ್ರದೇಶದಲ್ಲಿ ಭಾರಿ ಮಳೆ: ಮನೆ, ಗೋಡೆ ಕುಸಿದು 9 ಮಂದಿ ದುರ್ಮರಣ

ನೋಯ್ಡಾ, ಗುರುಗ್ರಾಮದಲ್ಲೂ ಭಾರಿ ಮಳೆ

ದೆಹಲಿಯ ನೆರೆಯ ನೋಯ್ಡಾ ಮತ್ತು ಗುರುಗ್ರಾಮದಲ್ಲೂ ಭಾರಿ ಮಳೆಯಿಂದ ಜನಜೀವನ ತತ್ತರಿಸಿದೆ. ನೋಯ್ಡಾದಲ್ಲಿ ರಸ್ತೆಗಳು ಜಲಾವೃತಗೊಂಡು ಹಲವು ಕಡೆ ವಾಹನಗಳ ಉದ್ದನೆಯ ಸಾಲು ಕಂಡುಬಂದಿತು. ಸೆಕ್ಟರ್ 37ರಿಂದ ಸೆಕ್ಟರ್ 18ಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಸಂಜೆ ಕಚೇರಿ ಸಮಯದಲ್ಲಿ ಸಂಚಾರ ಮತ್ತಷ್ಟು ನಿಧಾನಗೊಂಡಿತು. ಮಹಾಮಾಯಾ ಫ್ಲೈಓವರ್ ಸಮೀಪದ ಜಲಾವೃತ ಅಂಡರ್‌ಪಾಸ್‌ನಲ್ಲಿ ರೋಗಿಯನ್ನು ಕರೆದೊಯ್ಯದೇ ಇದ್ದ ಆಂಬುಲೆನ್ಸ್‌ವೊಂದು 30 ನಿಮಿಷಕ್ಕೂ ಹೆಚ್ಚು ಕಾಲ ಸಿಲುಕಿಕೊಂಡಿತ್ತು.

ಗುರುಗ್ರಾಮದ ಸಿವಿಲ್ ಆಸ್ಪತ್ರೆಯಲ್ಲೂ ಮಳೆನೀರು ನುಗ್ಗಿದ್ದು, ನೆಲಮಾಳಿಗೆ ಮತ್ತು ನೆಲಮಹಡಿಯ ಕೆಲವು ಭಾಗಗಳು ಜಲಾವೃತಗೊಂಡವು. ಪರಿಣಾಮ ನೆಲಮಾಳಿಗೆಯಲ್ಲಿ ನಡೆಯುತ್ತಿದ್ದ ಹಲವು ವೈದ್ಯಕೀಯ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಇಂಜೆಕ್ಷನ್ ಕೊಠಡಿಯೂ ನೀರಿನಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿತ್ತು. ಈಗಾಗಲೇ ಎನ್‌ಸಿಆರ್‌ನ ಹಲವು ಪ್ರದೇಶಗಳಲ್ಲಿ 100 ಮಿಮೀಗೂ ಅಧಿಕ ಮಳೆ ದಾಖಲಾಗಿದೆ. ಫರಿದಾಬಾದ್‌ನ ಸೆಕ್ಟರ್ 17ರಲ್ಲಿ ಮಧ್ಯರಾತ್ರಿಯಿಂದ ಸಂಜೆ 5ರವರೆಗೆ 119.4 ಮಿಮೀ ಮಳೆಯಾಗಿದೆ.