ಉತ್ತರ ಪ್ರದೇಶದಲ್ಲಿ ಭಾರಿ ಮಳೆ: ಮನೆ, ಗೋಡೆ ಕುಸಿದು 9 ಮಂದಿ ದುರ್ಮರಣ
Heavy Rain: ಉತ್ತರ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಪ್ರತಾಪಗಢ, ಬರಾಬಂಕಿ ಹಾಗೂ ಸಹಾರನ್‌ಪುರ ಜಿಲ್ಲೆಗಳಲ್ಲಿ ಮನೆ ಮತ್ತು ಗೋಡೆ ಕುಸಿದು ಒಂದೇ ಕುಟುಂಬದ ಆರು ಮಂದಿ ಸೇರಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದು, ಘಟನೆಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಳೆ ಅಬ್ಬರಕ್ಕೆ ಉತ್ತರ ಪ್ರದೇಶ ತತ್ತರ -
ಲಖನೌ, ಆ. 6: ಉತ್ತರ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ (Heavy Rain) ಪರಿಣಾಮ ವಿವಿಧ ಜಿಲ್ಲೆಗಳಲ್ಲಿ ಮನೆ ಹಾಗೂ ಗೋಡೆ ಕುಸಿದು ಒಂದೇ ಕುಟುಂಬದ ಆರು ಮಂದಿ ಸೇರಿದಂತೆ ಒಟ್ಟು 9 ಮಂದಿ ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ. ಹಲವರು ಗಾಯಗೊಂಡಿದ್ದು, ರಾಜ್ಯದ ಹಲವು ಭಾಗಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ.
ಅತ್ಯಂತ ಭೀಕರ ಘಟನೆ ಪ್ರತಾಪಗಢ ಜಿಲ್ಲೆಯ ಮಹುಲಿ ಬಜಾರ್‌ನಲ್ಲಿ ಗುರುವಾರ ಮುಂಜಾನೆ 2 ಗಂಟೆ ಸುಮಾರಿಗೆ ನಡೆದಿದೆ. ಸುಮಾರು 100 ವರ್ಷಗಳಷ್ಟು ಹಳೆಯ ಮನೆ ಏಕಾಏಕಿ ಕುಸಿದು ಬಿದ್ದ ಪರಿಣಾಮ, ಒಂದೇ ಕೋಣೆಯಲ್ಲಿ ಮಲಗಿದ್ದ ಕುಟುಂಬದ ಏಳು ಮಂದಿ ಅವಶೇಷಗಳಡಿ ಸಿಲುಕಿದರು. ಘಟನೆಯಲ್ಲಿ ಪ್ರಮೋದ್ ಶ್ರೀವಾಸ್ತವ, ಅವರ ಪತ್ನಿ ರೀಟಾ, ಪುತ್ರ ನಿತಿನ್, ಸೊಸೆ ಮಾಧುರಿ ಹಾಗೂ ಇಬ್ಬರು ಪುಟ್ಟ ಮೊಮ್ಮಕ್ಕಳು ಮೃತಪಟ್ಟಿದ್ದಾರೆ. ಕುಟುಂಬದ ಹಿರಿಯ ಪುತ್ರ ಅಮನ್ ಅವಶೇಷಗಳಿಂದ ಹೊರಬಂದು ನೆರವಿಗಾಗಿ ಕೂಗಿದ ಬಳಿಕ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರೂ ಆರು ಮಂದಿಯನ್ನು ವೈದ್ಯರು ಮೃತರೆಂದು ಘೋಷಿಸಿದರು.
ವೈರಲ್ ವಿಡಿಯೊ ಇಲ್ಲಿದೆ:
🚨 TRAGIC INCIDENT | Pratapgarh, Uttar Pradesh: Six members of a family lost their lives after the roof of their dilapidated house collapsed during heavy rainfall. One person was seriously injured and is currently undergoing treatment. pic.twitter.com/7ihpfOeKRV
— indiainlast24hr (@indiain24hr) August 6, 2026
ಬರಾಬಂಕಿ ಜಿಲ್ಲೆಯ ಅಲಿಯಾಬಾದ್ ಗ್ರಾಮದಲ್ಲಿ, ನಿರಂತರ ಮಳೆಯಿಂದ ಶಿಥಿಲಗೊಂಡಿದ್ದ ಹಳೆಯ ಇಟ್ಟಿಗೆ ಗೋಡೆ ಆಟವಾಡುತ್ತಿದ್ದ ಐವರು ಮಕ್ಕಳ ಮೇಲೆ ಕುಸಿದು ಬಿದ್ದಿದೆ. ಈ ದುರ್ಘಟನೆಯಲ್ಲಿ ಸಹೋದರ-ಸಹೋದರಿ ಹುಜೈಫಾ ಮತ್ತು ಹಜ್ರಾ ಬಾನು ಮೃತಪಟ್ಟಿದ್ದು, ಹಸನ್, ಹಾನಿಯಾ ಹಾಗೂ ಅದ್ನಾನ್ ಎಂಬ ಮೂವರು ಮಕ್ಕಳು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋಡೆಯು ಬಹಳ ಹಳೆಯದಾಗಿದ್ದು, ನಿರಂತರ ಮಳೆಯಿಂದ ಇನ್ನಷ್ಟು ದುರ್ಬಲಗೊಂಡಿತ್ತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಸ್ಸಾಂನಲ್ಲಿ ಬಿಗಡಾಯಿಸಿದ ಪ್ರವಾಹ ಪರಿಸ್ಥಿತಿ, ಸಾವಿನ ಸಂಖ್ಯೆ 95ಕ್ಕೆ ಏರಿಕೆ
ಇನ್ನೊಂದು ಘಟನೆ ಸಹಾರನ್‌ಪುರ ಜಿಲ್ಲೆಯ ಘಾಘ್ರೆಕಿ ಗ್ರಾಮದಲ್ಲಿ ನಡೆದಿದ್ದು, ಬುಧವಾರ ತಡರಾತ್ರಿ ಭಾರಿ ಮಳೆಯ ನಡುವೆ ಮಣ್ಣಿನ ಮನೆ ಕುಸಿದ ಪರಿಣಾಮ 35 ವರ್ಷದ ಮಹಿಳೆ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ.
ಮೂರು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 9 ಮಂದಿ ಮೃತಪಟ್ಟಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನೆಗಳ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ನಿರಂತರ ಮಳೆಯ ಹಿನ್ನೆಲೆಯಲ್ಲಿ ಹಳೆಯ ಹಾಗೂ ಶಿಥಿಲಗೊಂಡ ಕಟ್ಟಡಗಳಿಂದ ದೂರವಿರಲು ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.