ನವದೆಹಲಿ: ಕಳೆದ ಶನಿವಾರ ಏಕಾಏಕಿ ದೆಹಲಿಯ ಜಂತರ್ ಮಂತರ್‌ನಿಂದ (delhi Jantar Mantar) ಸಫ್ದರ್ಜಂಗ್ ಆಸ್ಪತ್ರೆಗೆ (Safdarjung hospital) ದಾಖಲಿಸಲಾಗಿದ್ದ ಹವಾಮಾನ ಕಾರ್ಯಕರ್ತ, ಶಿಕ್ಷಕ ಸೋನಮ್ ವಾಂಗ್‌ಚುಕ್ (Sonam Wangchuk) ಅವರನ್ನು ಸಫ್ದರ್ಜಂಗ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ದೆಹಲಿ ಹೈಕೋರ್ಟ್ (delhi high court) ಮಂಗಳವಾರ ಅನುಮತಿ ನೀಡಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲು ನಿರ್ದೇಶನವನ್ನು ಕೂಡ ನೀಡಿದೆ. ಇದು ಕೇಂದ್ರ ಸರ್ಕಾರದ ನಿರ್ಣಯದ ವಿರುದ್ಧ ಸೋನಮ್ ವಾಂಗ್‌ಚುಕ್‌ಗೆ ದೊರೆತ ದೊಡ್ಡ ಗೆಲುವು ಎಂದೇ ಪರಿಗಣಿಸಲಾಗಿದೆ.
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ಆಗ್ರಹಿಸಿ ಕಳೆದ ಸುಮಾರು 20ಕ್ಕಿಂತಲೂ ಹೆಚ್ಚು ದಿನಗಳಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್‌ಚುಕ್ ಅವರನ್ನು ಶನಿವಾರ ಬಲವಂತವಾಗಿ ಸಫ್ದರ್ಜಂಗ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರ ಬಳಿಕ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಅವರು ಸೋನಮ್ ಅವರನ್ನು ಮೇದಾಂತ ಆಸ್ಪತ್ರೆಗೆ ವರ್ಗಾಯಿಸಲು ಅನುಮತಿ ಕೋರಿ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು.
ಭಯೋತ್ಪಾದನೆಗೆ ಶಾಶ್ವತ ತೆರೆ ಬಿದ್ದರೆ ಮಾತ್ರ ಸಿಂಧು ಜಲ ಒಪ್ಪಂದ: ಪಾಕಿಸ್ತಾನಕ್ಕೆ ಭಾರತದ ಖಡಕ್ ಸಂದೇಶ
ಈ ಅರ್ಜಿಯ ಕುರಿತು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಾಲಯ ಅವರನ್ನು ಮೇದಾಂತ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲು ಅನುಮತಿ ನೀಡಿದೆ. ಈ ಕುರಿತು ನಿರ್ದೇಶನ ನೀಡಿದ ನ್ಯಾಯಪೀಠ, ಸೋನಮ್ ವಾಂಗ್‌ಚುಕ್ ಅವರನ್ನು ಮೇದಾಂತಕ್ಕೆ ಸ್ಥಳಾಂತರಿಸಲಾಗುವುದು. ಅವರಿಗೆ ಅಲ್ಲಿಯೇ ಚಿಕಿತ್ಸೆ ನೀಡಲಾಗುವುದು. ಸಫ್ದರ್ಜಂಗ್‌ನಲ್ಲಿ ಮಾಡಲಾದ ಎಲ್ಲಾ ಚಿಕಿತ್ಸಾ ವಿವರಗಳು, ವರದಿಗಳನ್ನು ಮೇದಾಂತಕ್ಕೆ ತಲುಪಿಸಲಾಗುವುದು ಎಂದು ತಿಳಿಸಿದೆ.
ವಾಂಗ್‌ಚುಕ್ ಅವರಿಗೆ ಚಿಕಿತ್ಸೆ ನೀಡಲು ವೈದ್ಯರ ಸಮಿತಿಯನ್ನು ರಚಿಸುವಂತೆ ಮೇದಾಂತ ಆಸ್ಪತ್ರೆಗೆ ನಿರ್ದೇಶನ ನೀಡಿದ ನ್ಯಾಯಪೀಠ ಈ ಕುರಿತು ವಿವರವಾದ ಆದೇಶವನ್ನು ಬಳಿಕ ಹೊರಡಿಸುವ ಸಾಧ್ಯತೆ ಇದೆ. ಭಾನುವಾರ ವಿಚಾರಣೆ ವೇಳೆ ವಾಂಗ್‌ಚುಕ್ ಅವರ ಚಿಕಿತ್ಸೆಯನ್ನು ಸರ್ಕಾರಿ ಸ್ವಾಮ್ಯದ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮುಂದುವರಿಸುವ ಬಗ್ಗೆ ಕೇಂದ್ರದ ನಿರ್ಧಾರವನ್ನು ಎತ್ತಿಹಿಡಿಡಿದ್ದ ನ್ಯಾಯಾಲಯ ಈಗ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲು ಒಪ್ಪಿಕೊಂಡಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಬರೆದಿರುವ ಗೀತಾಂಜಲಿ, ದೆಹಲಿ ಹೈಕೋರ್ಟ್‌ಗೆ ಧನ್ಯವಾದ ಹೇಳಿದ್ದಾರೆ.
ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಾಂಗ್‌ಚುಕ್ ಅವರನ್ನು ಮೇದಾಂತ ಆಸ್ಪತ್ರೆಗೆ ದಾಖಲಿಸಲು ಸರ್ಕಾರಕ್ಕೆ ಯಾವುದೇ ಆಕ್ಷೇಪವಿಲ್ಲ. ಆದರೆ ವೈದ್ಯಕೀಯ ಸಲಹೆ ಇಲ್ಲದೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು.
ಸಿಜೆಪಿ ಕಾರ್ಯಕರ್ತರು ಅವರನ್ನು ಆಸ್ಪತ್ರೆಯಿಂದ ಹೊರಗೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದಾರೆ . ಮತ್ತೆ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರೆ ಆರೋಗ್ಯ ಹದಗೆಡಬಹುದು ಎಂದು ಕಳವಳ ವ್ಯಕ್ತಪಡಿಸಿರುವ ಅವರು, ಆಸ್ಪತ್ರೆ ಮತ್ತು ವೈದ್ಯರನ್ನು ಆಯ್ಕೆ ಮಾಡುವ ಅಧಿಕಾರ ಅವರಿಗೆ ಇದೆ. ಆರೋಗ್ಯದ ವಿಚಾರದಲ್ಲಿ ಅವರು ಅಪಾಯವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ವಿಚಾರಣೆ ವೇಳೆ ವಾಂಗ್‌ಚುಕ್ ಅವರ ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದ ನ್ಯಾಯಾಲಯ ಅವರಿಗೆ ನಿರಂತರ ವೈದ್ಯಕೀಯ ಮೇಲ್ವಿಚಾರಣೆಯ ಅಗತ್ಯವಿದೆ ಎಂಬುದು ಕಂಡು ಬಂದಿದೆ. ಅವರ ವೈದ್ಯರು ಅವರು ಆಸ್ಪತ್ರೆಯ ಮೇಲ್ವಿಚಾರಣೆಯಲ್ಲಿ ಇರಬೇಕು ಎಂದು ಶಿಫಾರಸ್ಸು ಮಾಡಿದ್ದಾರೆ ಎಂದು ಹೈಕೋರ್ಟ್ ಹೇಳಿದೆ.