ನವದೆಹಲಿ, ನ.13: ದೆಹಲಿಯ ಕೆಂಪು ಕೋಟೆಯ ಬಳಿ (delhi red fort car blast) ನಡೆದ ಕಾರು ಸ್ಫೋಟ (Delhi Blast) ಪ್ರಕರಣದಲ್ಲಿ ಕಾರು ಚಲಾಯಿಸುತ್ತಿದ್ದವನು ಡಾ. ಉಮರ್ ಎಂಬುದು ಖಚಿತವಾಗಿದೆ. ಸ್ಫೋಟಗೊಂಡ ಐ20 ಕಾರಿನಲ್ಲಿ ಪತ್ತೆಯಾಗಿರುವ ಪತ್ತೆಯಾದ ಛಿದ್ರಗೊಂಡ ಶವದ ಡಿಎನ್ಎ ಪರೀಕ್ಷಾ (DNA test) ವರದಿ ಬಂದಿದ್ದು, ಶವ ಉಮರ್ನದ್ದು ಎಂದು ತಿಳಿದುಬಂದಿದೆ. ಈತ ಫರೀದಾಬಾದ್‌ನಲ್ಲಿ ತನ್ನ ಸಹಚರರ ಬಂಧನದ ಬಳಿಕ ಕಾರ್ ತೆಗೆದುಕೊಂಡು ಪರಾರಿಯಾಗಿದ್ದ.
ಡಾ. ಉಮರ್ ಬಿಳಿ ಬಣ್ಣದ ಹುಂಡೈ ಐ20 ಕಾರನ್ನು ಖರೀದಿಸಿದ್ದ ಮತ್ತು ಸ್ಫೋಟದ ಸಮಯದಲ್ಲಿ ಕಾರಿನಲ್ಲಿದ್ದ ಎಂದು ಭಾರತೀಯ ತನಿಖಾ ಸಂಸ್ಥೆಗಳು ಕಂಡುಹಿಡಿದಿವೆ. ಆತ ಫರಿದಾಬಾದ್‌ನಲ್ಲಿ ಬಂಧಿಸಲಾದ ಭಯೋತ್ಪಾದಕ ಘಟಕದ ಸದಸ್ಯನೂ ಆಗಿದ್ದ. ಪುಲ್ವಾಮಾದ ಸಂಬುರಾ ಗ್ರಾಮದ ನಿವಾಸಿಗಳಾದ ಉಮರ್‌ನ ತಾಯಿ ಮತ್ತು ಸಹೋದರರಿಂದ ಡಿಎನ್‌ಎ ಮಾದರಿಗಳನ್ನು ತೆಗೆದುಕೊಂಡು ಕಾರಿನಲ್ಲಿ ಕಂಡುಬಂದ ದೇಹದ ಅವಶೇಷಗಳೊಂದಿಗೆ ಹೋಲಿಸಿದಾಗ, ಅವು ಶೇ. 100 ಹೊಂದಿಕೆಯಾಗುತ್ತವೆ ಎಂದು ಕಂಡುಬಂದಿದೆ. ಮೃತನ ಹಲ್ಲುಗಳು, ಮೂಳೆಗಳು ಮತ್ತು ಇತರ ಅವಶೇಷಗಳು ತಾಯಿ ಮತ್ತು ಸಹೋದರನ ಮಾದರಿಗಳೊಂದಿಗೆ ಹೊಂದಿಕೆಯಾಗಿವೆ.
ಭಯೋತ್ಪಾದಕ ಉಮರ್ ಪೊಲೀಸರ ಕೈಗೆ ಸಿಕ್ಕಿಬೀಳುವ ಭಯದಲ್ಲಿದ್ದ. ಫರಿದಾಬಾದ್‌ನಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದು, ಸೋಮವಾರ ಬೆಳಿಗ್ಗೆ ಆತನ ಸಹಚರರನ್ನು ಬಂಧಿಸಲಾಗಿತ್ತು. ವೈದ್ಯ ಉಮರ್ ಹೇಗೋ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಬಳಿಕ ಕಾರಿನಲ್ಲಿ ತುಂಬಿದ್ದ ಸ್ಫೋಟಕಗಳ ಜೊತೆಗೆ ದೆಹಲಿಗೆ ಪರಾರಿಯಾಗಿದ್ದ. ಮಯೂರ್ ವಿಹಾರ್, ಫರಿದಾಬಾದ್ ಮತ್ತು ಕನ್ನಾಟ್ ಪ್ಲೇಸ್‌ನಲ್ಲಿ ಕಾಣಿಸಿಕೊಂಡಿದ್ದ. ಕೆಂಪು ಕೋಟೆಯ ಸಮೀಪದ ಮಸೀದಿಯ ಪಾರ್ಕಿಂಗ್ ಸ್ಥಳದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಸುಮ್ಮನೆ ಕುಳಿತು ಕಳೆದಿದ್ದ.
ಇದನ್ನೂ ಓದಿ: Delhi Blast: ಕಾಲೇಜಿನಲ್ಲಿ ಟಾಪರ್ ಆಗಿದ್ದ ಡಾ. ಶಾಹೀನ್ ಸಯೀದ್ ಭಯೋತ್ಪಾದಕಿ ಆಗಿದ್ದು ಹೇಗೆ?
ಕೆಂಪು ಕೋಟೆಯ ಬಳಿಯಲ್ಲೇ ಹೆಚ್ಚು ಜನಜಂಗುಳಿ ತುಂಬಿರುವ ಸಂದರ್ಭದಲ್ಲಿ ಸ್ಫೋಟಿಸುವುದು ಆತನ ಉದ್ದೇಶವಾಗಿತ್ತು. ಆತ್ಮಹತ್ಯಾ ದಾಳಿ ಆತನ ಉದ್ದೇಶವಾಗಿರಲಿಲ್ಲ. ಸ್ಫೋಟಕವನ್ನು ಕಾರಿನಲ್ಲಿ ಬಿಟ್ಟು ಟೈಮರ್ ಫಿಕ್ಸ್ ಮಾಡುವ ಉದ್ದೇಶವಿತ್ತು. ಕೊನೆಗೆ ಬೇರೆ ದಾರಿಯಿಲ್ಲದೆ ಕೆಂಪು ಕೋಟೆ ಮೆಟ್ರೋ ಗೇಟ್ ಸಂಖ್ಯೆ 1ರ ಬಳಿ ಆತ ಸ್ಫೋಟಿಸಿದ ಎಂದು ಅಂದಾಜಿಸಲಾಗಿದೆ.
ದೆಹಲಿ ಸ್ಫೋಟವನ್ನು ಭಯೋತ್ಪಾದಕ ದಾಳಿ ಎಂದು ಪರಿಗಣಿಸಿದ ಸರ್ಕಾರ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಭದ್ರತಾ ಕುರಿತ ಸಂಪುಟ ಸಮಿತಿ (CCS) ಸಭೆಯ ವೇಳೆ ಈ ವಿಷಯ ಚರ್ಚಿಸಲಾಯಿತು. ದೆಹಲಿ ಸ್ಫೋಟವನ್ನು ಭೀಕರ ಭಯೋತ್ಪಾದಕ ದಾಳಿ ಕರೆಯಲಾಗಿದೆ. ತನಿಖೆಯ ಜವಾಬ್ದಾರಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗೆ ವಹಿಸಲಾಗಿದ್ದು, ವರದಿಯನ್ನು ಕೋರಲಾಗಿದೆ. ವೈಟ್-ಕಾಲರ್ ಭಯೋತ್ಪಾದನಾ ಮಾಡ್ಯೂಲ್ ಅನ್ನು ಅಪಾಯಕಾರಿ ಎಂದು ವಿವರಿಸಲಾಗಿದೆ. ಇದರಲ್ಲಿ ಪಾಕಿಸ್ತಾನದಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರೊಂದಿಗೆ ವೈದ್ಯರಂತಹ ಗೌರವಾನ್ವಿತ ವೃತ್ತಿಯಲ್ಲಿರುವವರು ಕೂಡಾ ಸೇರಿಕೊಂಡಿದ್ದಾರೆ.
ಇದನ್ನೂ ಓದಿ: Delhi Blast: ದೆಹಲಿ ಸ್ಫೋಟವನ್ನು ಉಗ್ರರ ಭೀಕರ ಕೃತ್ಯ ಎಂದು ಘೋಷಿಸಿದ ಕೇಂದ್ರ ಸರ್ಕಾರ; ಶೀಘ್ರದಲ್ಲೇ ಪ್ರತೀಕಾರ?