Delhi Blast: ಕಾಲೇಜಿನಲ್ಲಿ ಟಾಪರ್ ಆಗಿದ್ದ ಡಾ. ಶಾಹೀನ್ ಸಯೀದ್ ಭಯೋತ್ಪಾದಕಿ ಆಗಿದ್ದು ಹೇಗೆ?
Delhi red fort car blast: ಹರಿಯಾಣದ ಫರಿದಾಬಾದ್‌ನಲ್ಲಿ (Faridabad) ಬೃಹತ್ ಸ್ಫೋಟಕಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಲಕ್ನೋದ ಕೈಸರ್‌ಬಾಗ್ ನಿವಾಸಿಯಾದ ಶಾಹೀನ್‌ಳನ್ನು ಬಂಧಿಸಲಾಗಿದೆ. ರಷ್ಯಾದ ಅಸಾಲ್ಟ್ ರೈಫಲ್ ಮತ್ತು ಲೈವ್ ಕಾರ್ಟ್ರಿಜ್‌ಗಳನ್ನು ವಶಪಡಿಸಿಕೊಂಡ ನಂತರ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಶಾಹೀನ್ ಜೈಶ್ ಮಹಿಳಾ ವಿಂಗ್‌ಗೆ ಭಾರತದ ನಾಯಕಿಯಾಗಿದ್ದು, ಜೆಇಎಂ ಸಂಸ್ಥಾಪಕ ಮಸೂದ್ ಅಜರ್‌ನ ಸಹೋದರಿ ಸಾದಿಯಾ ಅಜರ್ ನೇತೃತ್ವದ ಜೆಇಎಂನ ಮಹಿಳಾ ವಿಭಾಗವಾದ ಜಮಾತ್ ಉಲ್-ಮೊಮಿನಾತ್‌ನ ಕಮಾಂಡ್ ಜವಾಬ್ದಾರಿಯನ್ನು ಸಹ ವಹಿಸಿಕೊಂಡಿದ್ದಳು.
ಶಂಕಿತ ಭಯೋತ್ಪಾದಕಿ ಡಾ. ಶಹೀನ್ ಸಯೀದ್ -
ನವದೆಹಲಿ: ಈಕೆ ಕಾಲೇಜಿನಲ್ಲಿ ಟಾಪರ್ ಆಗಿದ್ದಳು. ಒಳ್ಳೆಯ ಉದ್ಯೋಗವೂ ಇತ್ತು. ಮದುವೆಯೂ ಆಗಿದ್ದು, ವಿದೇಶಕ್ಕೆ ಹೋಗಬೇಕು ಎಂದು ಗಂಡನ ಜೊತೆ ಜಗಳವಾಡಿ ವಿಚ್ಛೇದನವನ್ನೂ ಪಡೆದಿದ್ದಳು. ನಂತರ ಉಗ್ರನ ಸ್ನೇಹ ಬೆಳೆಸಿದ್ದಳು. ಇಷ್ಟು ತಿಳಿದರೂ ಇವಳ ಬದುಕು ಇನ್ನೂ ರಹಸ್ಯಮಯವಾಗಿದೆ. ರಾಜಧಾನಿಯ ಕೆಂಪುಕೋಟೆ ಬಳಿ ಕಾರ್ ಸ್ಫೋಟ (Delhi blast) ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಶಂಕಿತ ಭಯೋತ್ಪಾದಕಿ ವೈದ್ಯೆ ಶಾಹೀನ್ ಶಾಹಿದ್ (Dr Shaheen Shahid) ಹಿನ್ನೆಲೆಯನ್ನು ಬೆದಕುತ್ತಿದ್ದು, ತಿಳಿದಷ್ಟೂ ವಿವರಗಳು ಎದ್ದುಬರುತ್ತಿವೆ.
ದಿಲ್ಲಿ ಸ್ಫೋಟ ಶಂಕಿತರ ಹಿನ್ನೆಲೆ ಜಾಲಾಡುವ ವೇಳೆ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ. ಅದರಲ್ಲೂ ಭಾರತದಲ್ಲಿ ಪಾಕಿಸ್ತಾನದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮಹಿಳಾ ವಿಭಾಗ ಸ್ಥಾಪನೆಯ ಹೊಣೆ ಹೊತ್ತಿದ್ದ ವೈದ್ಯೆ ಶಾಹೀನ್ ಶಾಹಿದ್ (46) ಬದುಕು ನಿಗೂಢ ರಹಸ್ಯವಾಗಿ ಕಂಡುಬರುತ್ತಿದೆ. ಹರಿಯಾಣದ ಫರಿದಾಬಾದ್‌ನಲ್ಲಿ (Faridabad) ಬೃಹತ್ ಸ್ಫೋಟಕಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಲಕ್ನೋದ ಕೈಸರ್‌ಬಾಗ್ ನಿವಾಸಿಯಾದ ಶಾಹೀನ್‌ಳನ್ನು ಬಂಧಿಸಲಾಗಿದೆ. ರಷ್ಯಾದ ಅಸಾಲ್ಟ್ ರೈಫಲ್ ಮತ್ತು ಲೈವ್ ಕಾರ್ಟ್ರಿಜ್‌ಗಳನ್ನು ವಶಪಡಿಸಿಕೊಂಡ ನಂತರ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಲಕ್ನೋ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಓದಿದ್ದ ಶಾಹೀನ್ ಶಾಹಿದ್ 10 ಮತ್ತು 12 ನೇ ತರಗತಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದಳು. ಉತ್ತರ ಪ್ರದೇಶದ (Uttar Pradesh) ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಶಾಹೀನ್ ಪ್ರಯಾಗ್‌ರಾಜ್‌ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮತ್ತು ಎಂಡಿ ಪದವಿ ಪಡೆದಿದ್ದಾಳೆ.
ಓದಿದ ನಂತರ 2009 ರಲ್ಲಿ ಕಾನ್ಪುರದ ಗಣೇಶ ಶಂಕರ ವಿದ್ಯಾರ್ಥಿ ಮೆಡಿಕಲ್ ಕಾಲೇಜಿನಲ್ಲಿ (GSVM) ಔಷಧಶಾಸ್ತ್ರ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಕರ್ತವ್ಯಕ್ಕೆ ಹಾಜರಾದಳು. ಆರು ತಿಂಗಳ ನಂತರ ಕನೌಜ್ ಮೆಡಿಕಲ್ ಕಾಲೇಜಿಗೆ ಆಕೆಯನ್ನು ವರ್ಗಾವಣೆ ಮಾಡಲಾಯಿತು. 2010 ರಲ್ಲಿ ಮರಳಿ ಕಾನ್ಪುರಕ್ಕೆ ಬಂದವಳು ಜಿಎಸ್‌ವಿಎಂ ಕಾಲೇಜಿನಲ್ಲಿ 2013ರವರೆಗೆ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಉದ್ಯೋಗ ಮಾಡಿದ್ದಾಳೆ. ಈ ವೇಳೆ ನೇತ್ರಶಾಸ್ತ್ರಜ್ಞ ಜಾಫರ್ ಸಯೀದ್ ಅವರನ್ನು ಮದುವೆಯಾಗುತ್ತಾಳೆ.
ಮದುವೆಯಾದ ನಂತರ ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿರುತ್ತದೆ. ಹೀಗಾಗಿ ಪತಿಗೆ 2015 ರಲ್ಲಿ ತಲಾಖ್ ನೀಡಿ ಲಕ್ನೋದಲ್ಲಿ ಶಾಹೀನ್ ವಾಸಿಸುತ್ತಿದ್ದಳು. ಪತಿಗೆ ವಿಚ್ಚೇದನ ನೀಡಿದ ಬಳಿಕ ಉಗ್ರ ಮುಜಮ್ಮಿಲ್ ಜೊತೆ ನಂಟು ಬೆಳೆಸಿದ್ದಾಳೆ.
ಕಾಲೇಜು ದಾಖಲೆಗಳ ಪ್ರಕಾರ ಶಾಹೀನ್ 2013ರಲ್ಲಿ ಯಾವುದೇ ಅಧಿಕೃತ ರಜೆ ಅಥವಾ ಸೂಚನೆ ನೀಡದೇ ಕರ್ತವ್ಯಕ್ಕೆ ಗೈರು ಹಾಜರಿ ಹಾಕಿದ್ದಳು. ಕಾಲೇಜು ಆಡಳಿತ ಹಲವಾರು ಸೂಚನೆಗಳನ್ನು ನೀಡಿದ್ದರೂ ಆಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸಹೋದ್ಯೋಗಿಗಳು ಅವಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರೂ ಅವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅಂತಿಮವಾಗಿ 2021ರಲ್ಲಿ ಸರ್ಕಾರ ಆಕೆಯನ್ನು ಸೇವೆಯಿಂದ ಮುಕ್ತಗೊಳಿಸಿತ್ತು.
ಜಿಎಸ್‌ವಿಎಂ ತೊರೆದ ಬಳಿಕ ಶಾಹೀನ್ ಹರಿಯಾಣದ ಅಲ್-ಫಲಾಹ್ ವಿಶ್ವವಿದ್ಯಾಲಯದೊಂದಿಗೆ ಸಂಬಂಧ ಬೆಳೆಸಿ ಅಲ್ಲಿ ಮುಜಮ್ಮಿಲ್‌ನನ್ನು ಭೇಟಿಯಾಗಿದ್ದಾಳೆ. ಶಾಹೀನ್ ಜೈಶ್ ಮಹಿಳಾ ವಿಂಗ್‌ಗೆ ಭಾರತದ ನಾಯಕಿಯಾಗಿದ್ದು, ಜೆಇಎಂ ಸಂಸ್ಥಾಪಕ ಮಸೂದ್ ಅಜರ್‌ನ ಸಹೋದರಿ ಸಾದಿಯಾ ಅಜರ್ ನೇತೃತ್ವದ ಜೆಇಎಂನ ಮಹಿಳಾ ವಿಭಾಗವಾದ ಜಮಾತ್ ಉಲ್-ಮೊಮಿನಾತ್‌ನ ಕಮಾಂಡ್ ಜವಾಬ್ದಾರಿಯನ್ನು ಸಹ ವಹಿಸಿಕೊಂಡಿದ್ದಳು.