Delhi Blast: ದೆಹಲಿ ಸ್ಫೋಟವನ್ನು ಉಗ್ರರ ಭೀಕರ ಕೃತ್ಯ ಎಂದು ಘೋಷಿಸಿದ ಕೇಂದ್ರ ಸರ್ಕಾರ; ಶೀಘ್ರದಲ್ಲೇ ಪ್ರತೀಕಾರ?
Cabinet Committee: ಭೂತಾನ್ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ಬೆನ್ನಲ್ಲೇ ಮಹತ್ವದ ಸಚಿವ ಸಂಪುಟ ಸಭೆ ನಡೆಸಿದ ಪ್ರಧಾನಿ ಮೋದಿ ದೆಹಲಿ ಸ್ಫೋಟವನ್ನು ಭಯೋತ್ಪಾದಕ ಕೃತ್ಯ ಎಂದು ಕರೆದಿದ್ದಾರೆ. ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಪ್ರಮುಖರು ಹಾಜರಿದ್ದರು.
ದೆಹಲಿ ಸ್ಫೋಟವನ್ನು ಭಯೋತ್ಪಾದಕ ಕೃತ್ಯ ಎಂದ ಕೇಂದ್ರ -
ದೆಹಲಿ, ನ. 12: ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಸಮೀಪ ನಡೆದ ಕಾರು ಸ್ಫೋಟವನ್ನು ಭೀಕರ ಉಗ್ರ ಕೃತ್ಯ ಎಂದು ಕೇಂದ್ರ ಸರ್ಕಾರ ಘೋಷಿಸಿದೆ (Delhi Blast). ಬುಧವಾರ (ನವೆಂಬರ್ 12) ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿ ಪ್ರಮುಖರು ಹಾಜರಿದ್ದರು.
ಪ್ರಧಾನ ಮಂತ್ರಿ ಅವರ ನಿವಾಸದಲ್ಲಿ ಸಭೆ ಸೇರಿದ ಕೇಂದ್ರ ಸಚಿವ ಸಂಪುಟವು, ದಾಳಿಯನ್ನು ಖಂಡಿಸುವ ಔಪಚಾರಿಕ ನಿರ್ಣಯವನ್ನು ಅಂಗೀಕರಿಸುವ ಮೊದಲು ಸಂತ್ರಸ್ತರಿಗೆ ಗೌರವ ಸಲ್ಲಿಸುವ ಸಲುವಾಗಿ 2 ನಿಮಿಷಗಳ ಮೌನ ಆಚರಿಸಿತು. ಕಟುವಾದ ಶಬ್ದದಲ್ಲಿ ದಾಳಿಯನ್ನು ಖಂಡಿಸಿದ ಕೇಂದ್ರ, ಇದನ್ನು ರಾಷ್ಟ್ರವಿರೋಧಿ ಶಕ್ತಿಗಳು ನಡೆಸಿದ ಹೀನ ಕೃತ್ಯ ಎಂದು ಕರೆದಿದೆ. ಜತೆಗೆ ಭಯೋತ್ಪಾದನೆಯ ಎಲ್ಲ ರೀತಿಯ ಚಟುವಟಿಕೆಗಳ ವಿರುದ್ಧದ ತನ್ನ ಶೂನ್ಯ ಸಹಿಷ್ಣುತೆಯ ನೀತಿಯನ್ನು ಪುನರುಚ್ಚರಿಸಿದೆ.
ದೆಹಲಿ ಸ್ಫೋಟವನ್ನು ಉಗ್ರರ ಕೃತ್ಯ ಎಂದು ಘೋಷಿಸಿದ ಕೇಂದ್ರ:
The Union Cabinet, chaired by Prime Minister Narendra Modi, expressed its profound grief over the loss of lives in the terrorist incident involving a car explosion near the Red Fort in Delhi on the evening of 10 November 2025. The Cabinet observed two minutes' silence in honour… pic.twitter.com/jBNtHucm6T
— ANI (@ANI) November 12, 2025
ಸರ್ಕಾರವು ಮೃತರಿಗಾಗಿ ಸಂತಾಪ ವ್ಯಕ್ತಪಡಿಸಿದೆ. ಅಲ್ಲದೆ ಘಟನಾ ಸ್ಥಳಕ್ಕೆ ತಕ್ಷಣ ಧಾವಿಸಿದ ವೈದ್ಯಕೀಯ ಸಿಬ್ಬಂದಿ ಮತ್ತು ರಕ್ಷಣಾ ತಂಡದ ಕ್ರಮವನ್ನು ಶ್ಲಾಘಿಸಿದೆ ಎಂದು ವರದಿ ತಿಳಿಸಿದೆ. ಸಭೆಯ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ʼʼಈ ಘಟನೆಯ ತನಿಖೆಯನ್ನು ಅತ್ಯಂತ ತುರ್ತಾಗಿ ಮತ್ತು ವೃತ್ತಿಪರತೆಯಿಂದ ಮುಂದುವರಿಸಬೇಕೆಂದು ಸಂಪುಟವು ನಿರ್ದೇಶಿಸಿದೆ. ಇದು ದುಷ್ಕರ್ಮಿಗಳು, ಅವರ ಸಹಚರರು ಮತ್ತು ಅವರಿಗೆ ಕುಮ್ಮಕ್ಕು ನೀಡಿದವರನ್ನು ಗುರುತಿಸಿ ಕಠಿಣ ಶಿಕ್ಷೆ ನೀಡಲು ಸಹಾಯ ಮಾಡುತ್ತದೆ” ಎಂದು ಹೇಳಿದ್ದಾರೆ. ಸದ್ಯ ಸ್ಫೋಟದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೈಗೆತ್ತಿಕೊಂಡಿದೆ.
ಈ ಸುದ್ದಿಯನ್ನೂ ಓದಿ: ದೆಹಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸೆರೆಸಿಕ್ಕ ಶಾಹಿನ್ ವಿದೇಶಕ್ಕೆ ತೆರಳಲು ಬಯಸಿದ್ದಳು; ರಹಸ್ಯ ಬಹಿರಂಗಪಡಿಸಿದ ಮಾಜಿ ಪತಿ
ಸ್ಫೋಟ ನಡೆದಿದ್ದು ಹೇಗೆ?
ಜಮ್ಮು ಕಾಶ್ಮೀರದ ಪುಲ್ವಾಮ ಮೂಲದ ವೈದ್ಯ ಡಾ. ಉಮರ್ ಮೊಹಮ್ಮದ್ ತನ್ನ ಹ್ಯುಂಡೈ ಐ20 ಕಾರನ್ನು ಕೆಂಪು ಕೋಟೆಯ ಮೆಟ್ರೋ ಸ್ಟೇಷನ್ ಸಮೀಪದ ರಸ್ತೆಯಲ್ಲಿ ಸ್ಫೋಟಿಸಿದ್ದ. ಇದರಿಂದ ಒಟ್ಟು 9 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೈಶೆ-ಎ-ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡ ಈ ಕೃತ್ಯದ ಹಿಂದಿರುವುದು ಸ್ಪಷ್ಟವಾಗಿದೆ. ತನಿಖೆ ವೇಳೆ ಈಗಾಗಲೇ ಮಹತ್ವದ ಸಂಗತಿ ಬೆಳಕಿಗೆ ಬಂದಿದ್ದು, ಸ್ಫೋಟಕ್ಕೆ ಬಳಿಸಿದ ಮತ್ತೊಂದು ಕಾರನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಉಮರ್ ಮೊಹಮ್ಮದ್ ಹೆಸರಿನಲ್ಲಿರುವ ಈ ಕಾರನ್ನು ಫರಿದಾಬಾದ್‌ನಲ್ಲಿ ವಶಕ್ಕೆ ಪಡೆಯಲಾಗಿದೆ.
ದೆಹಲಿ ಸ್ಫೋಟದ ಬಗ್ಗೆ ಆಕ್ಷೇಪಾರ್ಹ ಪೋಸ್ಟ್; ಐವರ ಬಂಧನ
ಈ ಮಧ್ಯೆ ದೆಹಲಿ ಸ್ಫೋಟದ ಬಗ್ಗೆ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡ ಐವರು ಮುಸ್ಲಿಮ್ ವ್ಯಕ್ತಿಗಳನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ. ಇವರು ಕೋಮು ಗಲಭೆಯನ್ನು ಪ್ರಚೋದಿಸುವ ಪೋಸ್ಟ್ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.