ನವದೆಹಲಿ: ರಾಮಲೀಲಾ ಮೈದಾನದಲ್ಲಿ ನವೆಂಬರ್ 1, 2026 ರಂದು ಇಂಡಿಯಾ (INDIA Bloc Rally) ಒಕ್ಕೂಟದ ಪರವಾಗಿ ರಾಹುಲ್ ಗಾಂಧಿ ( Rahul Gandhi) ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಮೆಗಾ ರ್‍ಯಾಲಿಯಿಂದಾಗಿ ದೆಹಲಿಯ ವ್ಯಾಪಾರಿಗಳಿಗೆ 10,000 ದಿಂದ 12,000 ಕೋಟಿ ರೂ. ವರೆಗೆ ವ್ಯಾಪಾರ ನಷ್ಟವಾಗುವ ಆತಂಕವಿದೆ ಎಂದು ದೆಹಲಿಯ ಪ್ರಮುಖ ವ್ಯಾಪಾರಿ ಸಂಘಟನೆಯಾದ ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ ತಿಳಿಸಿದೆ.
ದೀಪಾವಳಿ ಮತ್ತು ಧಂತೇರಸ್ ಹಬ್ಬಗಳ ಹಿನ್ನೆಲೆಯಲ್ಲಿ ನವೆಂಬರ್ 1 ಅತ್ಯಂತ ಪ್ರಮುಖ ಶಾಪಿಂಗ್ ದಿನವಾಗಿದೆ. ಕೇಂದ್ರ ಮತ್ತು ಹಳೆಯ ದೆಹಲಿಯ ಸುಮಾರು 20 ಪ್ರಮುಖ ಸಗಟು ಹಾಗೂ ಚಿಲ್ಲರೆ ಮಾರುಕಟ್ಟೆಗಳಲ್ಲಿ ಪ್ರತಿದಿನ ಅಂದಾಜು 10,000 ರಿಂದ 12,000 ಕೋಟಿ ರೂ. ವ್ಯವಹಾರ ನಡೆಯಲಿದ್ದು, ರ್‍ಯಾಲಿಯಿಂದಾಗಿ ಇದು ಸಂಪೂರ್ಣ ಸ್ತಬ್ಧವಾಗುವ ಭೀತಿ ಎದುರಾಗಿದೆ. ರಾಮಲೀಲಾ ಮೈದಾನದ 5 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಸುಮಾರು 3 ಲಕ್ಷ ಅಂಗಡಿಗಳ ಪೈಕಿ 2.5 ಲಕ್ಷದಷ್ಟು ಅಂಗಡಿಗಳು ಈ ರ್‍ಯಾಲಿಯ ಕಾರಣದಿಂದಾಗಿ ಮುಚ್ಚುವ ಸಾಧ್ಯತೆಯಿದೆ ಎಂದು CTI ಅಧ್ಯಕ್ಷ ಬ್ರಿಜೇಶ್ ಗೋಯಲ್ ತಿಳಿಸಿದ್ದಾರೆ.
ರ್‍ಯಾಲಿಗೆ ಸುಮಾರು 10 ಲಕ್ಷ ಜನ ಹಾಗೂ 15,000 ದಿಂದ 20,000 ವಾಹನಗಳು ಬರುವ ನಿರೀಕ್ಷೆಯಿದೆ. ಇದರಿಂದಾಗಿ ತೀವ್ರ ಟ್ರಾಫಿಕ್ ಜಾಮ್ ಹಾಗೂ ರಸ್ತೆ ನಿರ್ಬಂಧಗಳು ಉಂಟಾಗಿ, ಗ್ರಾಹಕರು ಮಾರುಕಟ್ಟೆಗೆ ಬರಲು ಸಾಧ್ಯವಾಗುವುದಿಲ್ಲ ಮತ್ತು ಹಬ್ಬದ ಸರಕುಗಳ ಸಾಗಣೆಗೆ ತೊಂದರೆಯಾಗಲಿದೆ ಎಂದು ವ್ಯಾಪಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ವ್ಯಾಪಾರಿಗಳ ಸಂಘಟನೆಯು ತಾವು ಈ ರಾಜಕೀಯ ರ್‍ಯಾಲಿಗೆ ವಿರೋಧವಾಗಿಲ್ಲ, ಆದರೆ ಹಬ್ಬದ ಸೀಸನ್ ಆಗಿರುವುದರಿಂದ ತಮ್ಮ ಜೀವನೋಪಾಯವನ್ನು ರಕ್ಷಿಸಲು ಈ ರ್‍ಯಾಲಿಯನ್ನು ನವೆಂಬರ್ 10ರ ನಂತರಕ್ಕೆ ಮುಂದೂಡುವಂತೆ ಅಥವಾ ಬುರಾರಿ ಮೈದಾನದಂತಹ ಪರ್ಯಾಯ ಸ್ಥಳಕ್ಕೆ ಸ್ಥಳಾಂತರಿಸುವಂತೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು.
ವ್ಯಾಪಾರಿಗಳ ಆತಂಕಕ್ಕೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ತಾವು ದೆಹಲಿ ವ್ಯಾಪಾರಿಗಳ ಸಮಸ್ಯೆಯನ್ನು ಅರ್ಥಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಜೊತೆಗೆ, ರ್‍ಯಾಲಿಯಲ್ಲಿ ಭಾಗವಹಿಸುವ ಜನರು ದೆಹಲಿಯ ಮಾರುಕಟ್ಟೆಗಳಿಗೆ ಭೇಟಿ ನೀಡಿ ಅಗತ್ಯ ವಸ್ತುಗಳನ್ನು ಖರೀದಿಸುವ ಮೂಲಕ ಸ್ಥಳೀಯ ವ್ಯಾಪಾರಿಗಳಿಗೆ ಬೆಂಬಲ ನೀಡಬೇಕೆಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ರಸ್ತೆಗಳು ಬ್ಲಾಕ್ ಆಗಿ ಅಂಗಡಿಗಳೇ ಮುಚ್ಚುವುದರಿಂದ ಜನರು ಶಾಪಿಂಗ್ ಮಾಡುವುದು ಹೇಗೆ ಎಂದು ವ್ಯಾಪಾರಿಗಳು ಪ್ರಶ್ನಿಸಿದ್ದಾರೆ