ದೆಹಲಿ, ನ. 7: ಭಾರತದೊಂದಿಗೆ ನೇರ ಮುಖಾಮುಖಿಯಾಗಲು ಸಾಮರ್ಥ್ಯವಿಲ್ಲದ ಪಾಕಿಸ್ತಾನ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುವ ಮೂಲಕ ಕಳ್ಳಾಟವಾಡುತ್ತಲೇ ಇದೆ. ಭಾರತೀಯ ಸೇನೆಯ ಬಗ್ಗೆ ಇಲ್ಲಸಲ್ಲದ ವಿಚಾರ ಬಿಂಬಿಸಲು ಯತ್ನಿಸಿ ಸಾಕಷ್ಟು ಬಾರಿ ಮುಖಭಂಗ ಅನುಭವಿಸಿದರೂ ಬುದ್ಧಿ ಕಲಿತಿಲ್ಲ. ಇದೀಗ ಮತ್ತೊಮ್ಮೆ ಅಂತಹದ್ದೇ ವಿಫಲ ಪ್ರಯತ್ನಕ್ಕೆ ಕೈಹಾಕಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ ಕಳೆದುಕೊಂಡಿದೆ. ಭಾರತದ ಅರುಣಾಚಲ ಪ್ರದೇಶದ 50 ಕಿಲೋ ಮೀಟರ್ ಅನ್ನು ಚೀನಾ ಅಕ್ರಮಿಸಿಕೊಂಡಿದೆ ಎಂದು ಪಾಕಿಸ್ತಾನ ಬೆಂಬಲಿತ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಸುದ್ದಿ ಸಂಪೂರ್ಣ ಸುಳ್ಳು ಎಂದು ಭಾರತೀಯ ಸೇನೆ ಫ್ಯಾಕ್ಟ್ ಚೆಕ್ (Fact Check) ಮೂಲಕ ಸಾಬೀತುಪಡಿಸಿದೆ.
ಚೀನಿ ಪಡೆಗಳು ಭಾರತೀಯ ಸೈನಿಕರನ್ನು ಸೋಲಿಸಿ ಅರುಣಾಚಲ ಪ್ರದೇಶದೊಳಗೆ ಸುಮಾರು 50 ಕಿಲೋ ಮೀಟರ್ ಒಳಗೆ ಮುನ್ನಗ್ಗಿವೆ ಮತ್ತು ಭಾರತೀಯ ಭೂಪ್ರದೇಶದ ಕೆಲವು ಭಾಗಗಳನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ನಿಯಂತ್ರಣಕ್ಕೆ ಪಡೆದುಕೊಂಡಿದೆ ಎಂಬ ಸುದ್ದಿಯನ್ನು ಭಾರತೀಯ ಸೇನೆ ತಳ್ಳಿಹಾಕಿದೆ.
ಭಾರತೀಯ ಸೇನೆಯ ಫ್ಯಾಕ್ಟ್ ಚೆಕ್:
ಫ್ಯಾಕ್ಟ್ ಚೆಕ್ ಮೂಲಕ ಬಹಿರಂಗಗೊಂಡಿದ್ದೇನು?
ಎಕ್ಸ್ ಮೂಲಕ ಪಾಕಿಸ್ತಾನದ ಕಳ್ಳಾಟವನ್ನು ಬಯಲು ಮಾಡಿದ ಸೇನೆಯ ಫ್ಯಾಕ್ಟ್‌ಚೆಕ್ ಹ್ಯಾಂಡಲ್, ಪಾಕ್ ಮೂಲದ ಅಕೌಂಟ್ ದಾರಿ ತಪ್ಪಿಸುವ ಸುದ್ದಿ ಹರಡುತ್ತಿದೆ ಎಂದಿದೆ. ಆ ಮೂಲಕ ಅರುಣಾಚಲ ಪ್ರದೇಶದೊಳಗೆ ಚೀನಾ ಸೇನೆ ದೊಡ್ಡ ಪ್ರಮಾಣದಲ್ಲಿ ನುಸುಳಿದೆ ಎಂದು ಆರೋಪಿಸಿರುವ ಈ ಪೋಸ್ಟ್‌ಗಳ ಆರೋಪ ಸುಳ್ಳು ಎಂದು ಸ್ಪಷ್ಟಪಡಿಸಿದೆ.
ಭಾರತೀಯ ಭೂಪ್ರದೇಶದ ಮೇಲೆ ಪಿಎಲ್‌ಎ ನಿಯಂತ್ರಣವಿದೆ ಎಂಬ ಹೇಳಿಕೆಗಳು ಆಧಾರರಹಿತ ಎಂದು ಒತ್ತಿ ಹೇಳಿರುವ ಸೇನೆ, ಗಡಿಯಲ್ಲಿನ ಪರಿಸ್ಥಿತಿಯ ಬಗ್ಗೆ ತಪ್ಪು ಅಭಿಪ್ರಾಯವನ್ನು ಮೂಡಿಸಲು ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಹೇಳಿದೆ. ನವೆಂಬರ್ 6 ಮತ್ತು ನವೆಂಬರ್ 7ರ ನಡುವೆ ಸುಮಾರು 6 ಎಕ್ಸ್ ಖಾತೆಗಳಲ್ಲಿ ಈ ಸುಳ್ಳು ಸುದ್ದಿ ಪ್ರಕಟವಾಗಿರುವುದನ್ನು ಸೇನೆ ಗಮನಿಸಿದೆ. ಈ 6 ಖಾತೆಗಳಲ್ಲಿ ಪ್ರಕಟವಾದ ಸುದ್ದಿಯ ಸ್ಕ್ರೀನ್ ಶಾಟ್‌ಗಳನ್ನೂ ಸೇನೆ ಹಂಚಿಕೊಂಡಿದೆ. ಭಾರತ ವಿರೋಧಿ ಅಭಿಯಾನದ ಭಾಗವಾಗಿಯೇ ಇಂತಹ ಸುದ್ದಿ ಪ್ರಕಟಿಸಲಾಗುತ್ತಿದೆ ಎಂದು ತಿಳಿಸಿದೆ.
ಈ ತಪ್ಪು ಮಾಹಿತಿ ಅಭಿಯಾನವು ಭಾರತೀಯ ಸೇನೆ ಸೋತಿದೆ, ಚೀನಾ ಮುನ್ನುಗ್ಗುತ್ತಿದೆ ಮತ್ತು ಪಿಎಲ್‌ಎ ನಿಯಂತ್ರಣ ಸಾಧಿಸುತ್ತಿದೆ ಎಂಬ ಆಧಾರರಹಿತ ಸುದ್ದಿಗಳನ್ನು ಪದೇ ಪದೆ ಹರಡುತ್ತಿದೆ ಎಂದು ಹೇಳಿದೆ. ಇದು ಸಾರ್ವಜನಿಕರ ದಾರಿ ತಪ್ಪಿಸುವ ಮತ್ತು ಭಾರತೀಯ ಸೇನೆಯ ವಿರೋಧಿ ನಿರೂಪಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದೆ.
ದೆಹಲಿ ದಾಳಿ ಬೆನ್ನಲ್ಲೇ 20,000 ಮುಸ್ಲಿಂ ಸೈನಿಕರು ರಾಜೀನಾಮೆ ನೀಡಿದ್ರಾ? ವೈರಲ್ ಸುದ್ದಿಯ ಅಸಲಿಯತ್ತೇನು?
ನಿರಂತರ ಸುಳ್ಳು ಸುದ್ದಿ
ಗಡಿ-ಸಂಬಂಧಿತ ವಿಚಾರಗಳನ್ನು, ಸುದ್ದಿಗಳನ್ನು ಹಂಚಿಕೊಳ್ಳುವ ಮುನ್ನ ವಿಶ್ವಾಸಾರ್ಹ, ಅಧಿಕೃತ ಮೂಲಗಳ ಮೂಲಕ ಪರಿಶೀಲಿಸುವಂತೆ ಸೂಚಿಸಿದೆ. ಇತ್ತೀಚೆಗೆ ದೇವನಹಳ್ಳಿಯಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಅಣಕು ಕಾರ್ಯಾಚರಣೆಯ ದೃಶ್ಯಾವಳಿಯನ್ನು ಚೀನೀ ಸೈನಿಕರು ಭಾರತೀಯ ಯೋಧರನ್ನು ತಪಾಸಣೆ ನಡೆಸುತ್ತಿದ್ದಾರೆ ಎಂದು ತಪ್ಪಾಗಿ ಬಿಂಬಿಸಲಾಗಿತ್ತು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.