ದೆಹಲಿ, ಏ. 14: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಕದನವಿರಾಮದ ಬಳಿಕವೂ ಮುಂದುವರಿದಿದ್ದು, ಇರಾನ್‌ನ ಹೊರ್ಮುಜ್ ಜಲಸಂಧಿಯ (Strait of Hormuz) ಮೇಲೆ ಅಮೆರಿಕ ಹಿಡಿತ ಸಾಧಿಸಿದೆ. ಸೋಮವಾರ (ಏಪ್ರಿಲ್ 13) ರಾತ್ರಿ 7:30ರಿಂದ ಹೊರ್ಮುಜ್ ಜಲಸಂಧಿಯನ್ನು ವಿಶ್ವದ ಯಾವುದೇ ಹಡಗು ಪ್ರವೇಶಿಸಲು ಬಿಡುವುದಿಲ್ಲ ಎಂದು ಅಮೆರಿಕ ಘೋಷಿಸಿದೆ. ಈ ಮಧ್ಯೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಕರೆ ಮಾಡಿ ಮಾತುಕತೆ ನಡೆಸಿದರು. ಉಭಯ ನಾಯಕರು ಸುಮಾರು 40 ನಿಮಿಷಗಳ ಕಾಲ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ವಿಶ್ವದ ಪ್ರಬಲ 2 ದೇಶಗಳ ನಾಯಕರ ಈ ಸಂಭಾಷಣೆ ಸದ್ಯ ಕುತೂಹಲ ಕೆರಳಿಸಿದೆ. ಇರಾನ್ ಮತ್ತು ಅಮೆರಿಕ ಮಧ್ಯೆ ಕದನವಿರಾಮ ಒಪ್ಪಂದ ಜಾರಿಯಾದ ಬಳಿಕ ಇದೇ ಮೊದಲ ಬಾರಿ ಮೋದಿ ಮತ್ತು ಟ್ರಂಪ್ ಮಾತುಕತೆ ನಡೆಸಿದ್ದು ವಿಶೇಷ.
ಈ ಮಾತುಕತೆಯ ಸಮಯದಲ್ಲಿ ಇಬ್ಬರು ನಾಯಕರು ಪಶ್ಚಿಮ ಏಷ್ಯಾದ ಸದ್ಯದ ಪರಿಸ್ಥಿತಿ ಮತ್ತು ವ್ಯಾಪಾರದ ಬಗ್ಗೆ ಚರ್ಚೆ ನಡೆಸಿದರು ಎಂದು ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಎನ್‌ಡಿಟಿವಿಗೆ ತಿಳಿಸಿದರು.
ನರೇಂದ್ರ ಮೋದಿ ಎಕ್ಸ್ ಪೋಸ್ಟ್:
"ಅಮೆರಿಕ ಅಧ್ಯಕ್ಷ ಟ್ರಂಪ್ ನಿಯಮಿತವಾಗಿ ಪ್ರಧಾನಿ ಮೋದಿ ಜತೆ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ಮಂಗಳವಾರ (ಏಪ್ರಿಲ್ 14) ನಡೆದ ಮಾತುಕತೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ಟ್ರಂಪ್ ವಿವರಿಸಿದರು. ಜತೆಗೆ ಅಮೆರಿಕ ಮತ್ತು ಭಾರತ ನಡುವೆ ವಾಷಿಂಗ್ಟನ್‌ನಲ್ಲಿ ನಡೆಯುತ್ತಿರುವ ಒಪ್ಪಂದದ ಬಗ್ಗೆಯೂ ತಿಳಿಸಿದರು" ಎಂಬುದಾಗಿ ಗೋರ್ ಹೇಳಿದರು. ಇದೇ ವೇಳೆ "ಅಮೆರಿಕನ್ನರು ಭಾರತವನ್ನು ಪ್ರೀತಿಸುತ್ತಾರೆ" ಎಂದು ಪ್ರಧಾನಿ ಮೋದಿ ಅವರಿಗೆ ಟ್ರಂಪ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಭಾರತದ ಹಡಗುಗಳು ಹೊರ್ಮುಜ್ ಟೋಲ್ ಪಾವತಿಸಬೇಕಾಗಿಲ್ಲ: ಮಿತ್ರರಾಷ್ಟ್ರಕ್ಕೆ ಇರಾನ್ ಅಭಯ
ಮೋದಿ ಹೇಳಿದ್ದೇನು?
ಟ್ರಂಪ್ ಜತೆ ಮಾತುಕತೆ ನಡೆದಿರುವ ಬಗ್ಗೆ ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ʼʼನನ್ನ ಸ್ನೇಹಿತ ಡೊನಾಲ್ಡ್ ಟ್ರಂಪ್ ಕರೆ ಮಾಡಿದರು. ಈ ವೇಳೆ ವಿವಿಧ ಕ್ಷೇತ್ರಗಳ ದ್ವಿಪಕ್ಷೀಯ ಸಹಕಾರದಲ್ಲಿ ಸಾಧಿಸಲಾದ ಪ್ರಗತಿಯನ್ನು ಪರಿಶೀಲಿಸಿದ್ದೇವೆ. ಎಲ್ಲ ಕ್ಷೇತ್ರಗಳಲ್ಲಿ ನಮ್ಮ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಬಗ್ಗೆ ಪುನರುಚ್ಚರಿಸಿದ್ದೇವೆ. ಅಲ್ಲದೆ ಪಶ್ಚಿಮ ಏಷ್ಯಾದ ಪರಿಸ್ಥಿತಿ ಬಗ್ಗೆಯೂ ಚರ್ಚಿಸಿದ್ದೇವೆ. ಹೊರ್ಮುಜ್ ಜಲಸಂಧಿಯನ್ನು ಮುಕ್ತ ಮತ್ತು ಸುರಕ್ಷಿತವಾಗಿಡುವ ಮಹತ್ವವನ್ನು ಒತ್ತಿ ಹೇಳಿದ್ದೇವೆʼʼ ಎಂದು ತಿಳಿಸಿದ್ದಾರೆ.
ಈ ಮೊದಲು ಮಾರ್ಚ್ 24ರಂದು ಮೋದಿ ಮತ್ತು ಟ್ರಂಪ್ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ, ಭಾರತವು ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಶಾಂತಿಯನ್ನು ಪುನಃಸ್ಥಾಪಿಸುವ ಪ್ರಯತ್ನವನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದರು. ಹೊರ್ಮುಜ್ ಜಲಸಂಧಿಯು ಮುಕ್ತ, ಸುರಕ್ಷಿತ ಮತ್ತು ಪ್ರವೇಶಿಸಬಹುದಾದ ಸ್ಥಳವಾಗಿ ಉಳಿಯುವುದು ಜಗತ್ತಿಗೆ ಅತ್ಯಗತ್ಯ ಎಂದು ಇಬ್ಬರೂ ನಾಯಕರು ಚರ್ಚಿಸಿದ್ದರು.
ಅಮೆರಿಕದ ದಿಗ್ಬಂಧನದ ನಂತರ ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ 15 ಭಾರತೀಯ ಹಡಗುಗಳು
ಸದ್ಯ ಅಮೆರಿಕ ಮತ್ತು ಇರಾನ್ ಮಧ್ಯೆ 2 ವಾರಗಳ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ. ಇದರ ಮಧ್ಯೆ ಅಮೆರಿಕ ಹೊರ್ಮುಜ್ ಜಲಸಂಧಿಗೆ ದಿಗ್ಬಂಧನ ವಿಧಿಸಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಮಂಗಳವಾರದ ಮೋದಿ ಮತ್ತು ಟ್ರಂಪ್ ಮಾತುಕತೆ ಭಾರತಕ್ಕೆ ಅನುಕೂಲವಾಗಲಿದೆಯಾ ಎನ್ನುವುದನ್ನು ಕಾದು ನೋಡಬೇಕಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.