ಹೊರ್ಮುಜ್ ಮೂಲಕ ಸಾಗುವ ಹಡಗುಗಳಿಗೆ ಭಾರತೀಯ ನೌಕಾಪಡೆಯಿಂದ ಬೆಂಗಾವಲು; ಇಂಧನ, ಅನಿಲ ಕೊರತೆಯಿಲ್ಲ ಎಂದ ರಾಜನಾಥ್ ಸಿಂಗ್
Indian Navy to escort ships: ಹೊರ್ಮುಜ್ ಜಲಸಂಧಿಯ ಮೂಲಕ ಸಾಗುವ ದೇಶದ ತೈಲ ಟ್ಯಾಂಕರ್‌ಗಳಿಗೆ ಭಾರತೀಯ ನೌಕಾಪಡೆಯ ಹಡಗುಗಳು ಬೆಂಗಾವಲು ಒದಗಿಸುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಭಾರತವು ಇಂಧನ ಅಥವಾ ಅನಿಲದ ಕೊರತೆಯನ್ನು ಎದುರಿಸುತ್ತಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (ಸಂಗ್ರಹ ಚಿತ್ರ) -
ನವದೆಹಲಿ, ಏ. 2: ಇರಾನ್‌ನ ಹೊರ್ಮುಜ್ ಜಲಸಂಧಿಯ (Strait of Hormuz) ಮೂಲಕ ಸಾಗುವ ದೇಶದ ತೈಲ ಟ್ಯಾಂಕರ್‌ಗಳ ಸುರಕ್ಷತೆಗೆ ಭಾರತೀಯ ನೌಕಾಪಡೆಯ (Indian Navy) ಹಡಗುಗಳು ಬೆಂಗಾವಲು ಒದಗಿಸುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದ್ದಾರೆ. ಸರ್ಕಾರವು ಈ ಪ್ರದೇಶದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದೂ ಅವರು ತಿಳಿಸಿದ್ದಾರೆ.
ಚುನಾವಣೆ ನಡೆಯಲಿರುವ ಕೇರಳದಲ್ಲಿ ನಡೆದ ಸೈನಿಕ್ ಸಮ್ಮಾನ್ ಸಮ್ಮೇಳನದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಭಾರತವು ಇಂಧನ ಅಥವಾ ಅನಿಲದ ಕೊರತೆಯನ್ನು ಎದುರಿಸುತ್ತಿಲ್ಲ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉಂಟಾಗುವ ಯಾವುದೇ ಸಂಭಾವ್ಯ ಇಂಧನ ಅಡೆತಡೆಗಳನ್ನು ನಿಭಾಯಿಸಲು ದೇಶ ಸಿದ್ಧವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ರಾಜನಾಥ್ ಸಿಂಗ್ ಭಾಷಣ:
भारत किसी भी ऊर्जा संकट से निपटने के लिए पूरी तरह तैयार: राजनाथ सिंह
— RT Hindi (@RT_hindi_) April 2, 2026
▪️रक्षा मंत्री राजनाथ सिंह ने कहा कि फ्यूल और गैस की कोई कमी नहीं होगी, हमारी नेवी होर्मुज स्ट्रेट से भारतीय टैंकरों को सुरक्षित तरीके से निकाल रही है।
▪️उन्होंने कहा, कुछ लोग पश्चिम एशिया संकट के बीच कई तरह… pic.twitter.com/F9g4o06zZL
ನಾವು ಪಶ್ಚಿಮ ಏಷ್ಯಾದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ಯಾವುದೇ ಸನ್ನಿವೇಶವನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಉದ್ವಿಗ್ನತೆಯ ನಡುವೆಯೂ ಗಲ್ಫ್ ಪ್ರದೇಶದಲ್ಲಿ ಭಾರತೀಯ ಹಿತಾಸಕ್ತಿಗಳನ್ನು ಕಾಪಾಡಲು ಪ್ರಧಾನಿ ನರೇಂದ್ರ ಮೋದಿ ತಮ್ಮ ರಾಜತಾಂತ್ರಿಕ ಕೌಶಲ್ಯಗಳನ್ನು ಸಕ್ರಿಯವಾಗಿ ಬಳಸುತ್ತಿದ್ದಾರೆ ಎಂದು ಸಿಂಗ್ ಒತ್ತಿ ಹೇಳಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಬೆಳವಣಿಗೆಗಳನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಉದ್ಭವಿಸಬಹುದಾದ ಯಾವುದೇ ಪರಿಸ್ಥಿತಿಗೆ ಸ್ಪಂದಿಸಲು ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
ಇರಾನ್ ಜೊತೆಗಿನ ಯುದ್ಧ ಯಾವಾಗ ಕೊನೆಯಾಗುತ್ತೆ? ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ತಮ್ಮ ಭಾಷಣದ ಸಮಯದಲ್ಲಿ, ರಕ್ಷಣಾ ಸಚಿವರು ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮತದಾರರಿಗೆ ಕರೆ ನೀಡಿದ್ದಾರೆ. ರಾಜ್ಯದಲ್ಲಿ ಬದಲಾವಣೆಗಳನ್ನು ತರಲು ಬಿಜೆಪಿ ಸರಿಯಾದ ಪಕ್ಷ ಎಂದು ಬಣ್ಣಿಸಿದ್ದಾರೆ.
ಬಿಜೆಪಿಯ ಭರವಸೆಗಳನ್ನು ಮೋದಿ ಅವರ ಗ್ಯಾರಂಟಿಗಳು ಎಂದು ಉಲ್ಲೇಖಿಸಿದ ಅವರು, ಪ್ರಧಾನಿ ಅವರ ನಾಯಕತ್ವವು ವಿಶ್ವಾಸಾರ್ಹ ಎಂದು ಸಾಬೀತಾಗಿದೆ ಎಂಬುದಾಗಿ ಒತ್ತಿ ಹೇಳಿದ್ದಾರೆ. ಮೋದಿ ಅವರ ನಾಯಕತ್ವವನ್ನು ರಾಜನಾಥ್ ಸಿಂಗ್ 24 ಕ್ಯಾರೆಟ್ ಚಿನ್ನ ಎಂದು ಬಣ್ಣಿಸಿದ್ದಾರೆ. 140 ಸ್ಥಾನಗಳನ್ನು ಹೊಂದಿರುವ ಕೇರಳ ವಿಧಾನಸಭಾ ಚುನಾವಣೆ ಏಪ್ರಿಲ್ 9ರಂದು ನಡೆಯಲಿದೆ.
ಕಚ್ಚಾ ತೈಲ ಹೊತ್ತ 18 ಭಾರತೀಯ ಹಡಗು ಸ್ಥಗಿತ
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಭಾರತಕ್ಕೆ ಇಂಧನ ಪೂರೈಕೆ ಮಾಡುತ್ತಿರುವ ಕನಿಷ್ಠ 10 ವಿದೇಶಿ ಧ್ವಜದ ಹಡಗುಗಳು ಪರ್ಷಿಯನ್ ಕೊಲ್ಲಿಯಲ್ಲಿ ಸಿಲುಕಿಕೊಂಡಿವೆ ಎಂದು ಮಾ. 31ರಂದು ವರದಿಯಾಗಿತ್ತು. ಇದರೊಂದಿಗೆ, ಆಯಕಟ್ಟಿನ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿರುವ ಹೊರ್ಮುಜ್ ಜಲಸಂಧಿಯ ಬಳಿ 18 ಭಾರತೀಯ ಧ್ವಜದ ಹಡಗುಗಳು ಲಂಗರು ಹಾಕಿವೆ ಎಂದು ಕೇಂದ್ರ ಸರ್ಕಾರ ಖಚಿತಪಡಿಸಿದೆ.
ಇರಾನ್ ಈ ಪ್ರಮುಖ ಹಡಗು ಕಾರಿಡಾರ್‌ಗೆ ಪ್ರವೇಶವನ್ನು ನಿರ್ಬಂಧಿಸಿರುವುದು ಈ ಅಡೆತಡೆಗೆ ಪ್ರಮುಖ ಕಾರಣ. ಜಾಗತಿಕ ಕಚ್ಚಾ ತೈಲ ಮತ್ತು ಅನಿಲದ ಸುಮಾರು ಐದನೇ ಒಂದು ಭಾಗದಷ್ಟು ಈ ಮಾರ್ಗದ ಮೂಲಕವೇ ಸಾಗುತ್ತದೆ.