ನವದೆಹಲಿ: ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಹೈ ಡ್ರಾಮಾವೇ ನಡೆದು ಹೋಗಿದೆ. ಅಲಹಾಬಾದ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಮಯದಲ್ಲಿ, ಖುದ್ದಾಗಿ ಹಾಜರಾದ ದೂರುದಾರರೊಬ್ಬರು ಪೀಠದ ಕಡೆಗೆ ದಾಖಲೆಗಳನ್ನು ಎಸೆದು ನಿಂದನೆಗಳನ್ನು ಕೂಗಿದ್ದಾರೆ ಎಂದು ವರದಿಯಾಗಿದೆ. ಘಟನೆ ಬಳಿಕ ಅವರನ್ನು ಭದ್ರತಾ ಸಿಬ್ಬಂದಿ ತಕ್ಷಣವೇ ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕರೆದೊಯ್ದರು.
ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಮತ್ತು ಅಲೋಕ್ ಆರಾಧೆ ಅವರಿದ್ದ ಪೀಠದ ಮುಂದೆ ಈ ಘಟನೆ ನಡೆದಿದೆ. ಅರ್ಜಿದಾರರು ನ್ಯಾಯಾಧೀಶರನ್ನು ಉದ್ದೇಶಿಸಿ ಮಾತನಾಡುವಾಗ ಏರು ದನಿಯಿಂದ ಪ್ರಾರಂಭಿಸಿ ಕೊನೆಗೆ ವಾಗ್ವಾದಕ್ಕೆ ಕಾರಣವಾಯಿತು. "ಮಾನ್ಯ ನ್ಯಾಯಮೂರ್ತಿಗಳೇ ಎಸಿಪಿ .. ಲಕ್ನೋ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಲು ನಾನು ನಿಮಗೆ ಆದೇಶಿಸುತ್ತೇನೆ" ಎಂದು ದೂರುದಾರರು ತಮ್ಮ ವಾದ ಮಂಡಿಸುವ ಆರಂಭದಲ್ಲಿ ಹೇಳಿದರು. ಈ ಹೇಳಿಕೆಯಿಂದ ಆಶ್ಚರ್ಯಚಕಿತರಾದ ನ್ಯಾಯಮೂರ್ತಿ ವಿಶ್ವನಾಥನ್, "ನೀವು ನನಗೆ ಆದೇಶ ನೀಡುತ್ತಿದ್ದೀರಾ?" ಎಂದು ಕೇಳಿದರು.
ನ್ಯಾಯಾಲಯಕ್ಕೆ ಪ್ರತಿಕ್ರಿಯಿಸಿದ ದೂರುದಾರರು, "ನನ್ನ ಕಡೆಯಿಂದ ಇಷ್ಟೆಲ್ಲಾ ಆಗಿದೆ. ಎಲ್ಲವೂ ದಾಖಲೆಯಲ್ಲಿದೆ" ಎಂದು ಹೇಳಿದರು. ಇದಾದ ಸ್ವಲ್ಪ ಸಮಯದ ನಂತರ, ಅರ್ಜಿದಾರರು ತಮ್ಮ ಪ್ರಕರಣದ ದಾಖಲೆಗಳನ್ನು ಗಾಳಿಯಲ್ಲಿ ಎಸೆದು, ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ನಿಂದನೀಯ ಭಾಷೆಯನ್ನು ಬಳಸಿದ್ದಾರೆ. ಭದ್ರತಾ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಅವರನ್ನು ನ್ಯಾಯಾಲಯದ ಕೋಣೆಯಿಂದ ಹೊರಗೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಪ್ರತ್ಯೇಕ ಪ್ರಕರಣದಲ್ಲಿ 1997ರಲ್ಲಿ ₹500 ಬೆಲೆಬಾಳುವ ಗಡಿಯಾರದ ವಿಚಾರಕ್ಕೆ ನೆರೆಹೊರೆಯವರ ನಡುವೆ ನಡೆದ ಜಗಳದಿಂದ ಉದ್ಭವಿಸಿದ ಮೂರು ದಶಕಗಳ ಕ್ರಿಮಿನಲ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಇತ್ಯರ್ಥಪಡಿಸಿದೆ. ನ್ಯಾಯಮೂರ್ತಿಗಳಾದ ಉಜ್ವಲ್ ಭುಯಾನ್ ಮತ್ತು ಅರುಣ್ ಪಲ್ಲಿ ಅವರಿದ್ದ ಪೀಠವು, ಕೊಲೆಯಲ್ಲದ ಅಪರಾಧಿಕ ನರಹತ್ಯೆಗೆ ಶಿಕ್ಷೆಯನ್ನು ವಿಧಿಸುವ ಭಾರತೀಯ ದಂಡ ಸಂಹಿತೆಯೆ (ಐಪಿಸಿ) ಸೆಕ್ಷನ್ 304ರ ಅಡಿಯಲ್ಲಿ ಮೂವರು ಆರೋಪಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಮುಕ್ತಾಯಗೊಳಿಸಿದೆ.