Drink and Drive case: ಪತ್ರಕರ್ತ ರಾಜೀವ್ ಪ್ರತಾಪ್ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ತನಿಖಾಧಿಕಾರಿಗಳು ಹೇಳಿದ್ದೇನು?
ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಕಾರು ಅಪಘಾತಕ್ಕೆ ಈಡಾಗಿದ್ದರಿಂದ ಡಿಜಿಟಲ್ ಪತ್ರಕರ್ತ ರಾಜೀವ್ ಪ್ರತಾಪ್ ಮೃತಪಟ್ಟಿದ್ದಾರೆ ಎಂದು ಅವರ ಸಾವಿನ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತಿಳಿಸಿದೆ. ಅವರ ಸಾವಿನಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ಸಂಗತಿಗಳು ಕಂಡು ಬಂದಿಲ್ಲ ಎಂದು ಎಸ್‌ಐಟಿ ತಿಳಿಸಿದೆ.

-

ಡೆಹ್ರಾಡೂನ್: ಮದ್ಯಪಾನ ಮಾಡಿ ವಾಹನ ಚಲಾಯಿಸಿ (Drink and Drive case) ಉಂಟಾದ ಅಪಘಾತದಿಂದ (Accident case) ಪತ್ರಕರ್ತನೊಬ್ಬ ಸಾವನ್ನಪ್ಪಿದ ಘಟನೆ ಉತ್ತರಾಖಂಡದ ಉತ್ತರಕಾಶಿಯಲ್ಲಿ (uttarakashi) ನಡೆದಿದೆ. ಡಿಜಿಟಲ್ ಪತ್ರಕರ್ತ ರಾಜೀವ್ ಪ್ರತಾಪ್ (36) (Journalist Rajiv Pratap) ಅವರ ಸಾವಿನ ಸುತ್ತ ಅನುಮಾನ ಹುಟ್ಟಿಕೊಂಡಿದ್ದರಿಂದ ಅವರ ಸಾವಿನ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT), ಅವರು ಕುಡಿದು ವಾಹನ ಚಲಾಯಿಸುತ್ತಿದ್ದುದರಿಂದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಗುರುವಾರ ಹೇಳಿದೆ. ಹೀಗಾಗಿ ಅವರ ಸಾವಿನ ಕುರಿತು ಅನುಮಾನ ಪಡುವಂತ ಯಾವುದೇ ಸಂಗತಿಗಳು ಕಾಣುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಕಾಶಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಅಕ್ರಮಗಳ ಕುರಿತು ವರದಿ ಮಾಡಿದ್ದಕ್ಕಾಗಿ ಪ್ರತಾಪ್ ಅವರ ಹತ್ಯೆಯಾಗಿದೆ ಎಂದು ಅವರ ಕುಟುಂಬ ಆರೋಪಿಸಿದ್ದು, ಇದನ್ನು ಪೊಲೀಸರು ತಳ್ಳಿ ಹಾಕಿದ್ದಾರೆ. ಆದರೆ ಪ್ರತಾಪ್ ಅವರಿಗೆ ಅನೇಕ ಬೆದರಿಕೆ ಕರೆಗಳು ಬಂದಿದ್ದವು ಎಂದು ಕುಟುಂಬವು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿವೆ.
ಡೆಹ್ರಾಡೂನ್ ನಿವಾಸಿಯಾಗಿರುವ ಪ್ರತಾಪ್ ಸೆಪ್ಟೆಂಬರ್ 18ರಂದು ರಾತ್ರಿ ನಾಪತ್ತೆಯಾಗಿದ್ದರು. ಅವರ ಮೃತದೇಹ ಸೆಪ್ಟೆಂಬರ್ 28ರಂದು ಜೋಶಿಯಾಡಾ ಬ್ಯಾರೇಜ್‌ನಲ್ಲಿ ಪತ್ತೆಯಾಗಿತ್ತು. ಭಾರತೀಯ ಸಮೂಹ ಸಂವಹನ ಸಂಸ್ಥೆಯ (ಐಐಎಂಸಿ) ಪದವೀಧರರಾಗಿದ್ದ ಅವರು ಯೂಟ್ಯೂಬ್ ಸುದ್ದಿ ಚಾನೆಲ್ ದೆಹಲಿ ಉತ್ತರಾಖಂಡ್ ಲೈವ್‌ನ ಸ್ಥಾಪಕರಾಗಿದ್ದರು.
ಘಟನೆಯ ಕುರಿತು ಸಿಸಿಟಿವಿ ದೃಶ್ಯಾವಳಿಗಳು, ಸಾಕ್ಷಿಗಳ ಹೇಳಿಕೆಗಳು ಮತ್ತು ಮರಣೋತ್ತರ ಪರೀಕ್ಷೆಯ ವರದಿಯನ್ನು ಪರಿಶೀಲಿಸಿದ ತನಿಖಾ ತಂಡ ಇದೊಂದು ಅಪಘಾತ ಎಂದು ತೀರ್ಮಾನಿಸಿದೆ ಎಂಬುದಾಗಿ ವಿಶೇಷ ತನಿಖಾ ತಂಡದ ಮುಖ್ಯಸ್ಥ ಉಪ ಪೊಲೀಸ್ ವರಿಷ್ಠಾಧಿಕಾರಿ ಜನಕ್ ಪನ್ವರ್ ತಿಳಿಸಿದ್ದಾರೆ.
ಅವರ ಕಾರು ರಸ್ತೆಯಿಂದ ಇಳಿದು ಭಾಗೀರಥಿ ನದಿಗೆ ಬಿದ್ದಿತ್ತು. ಇದಕ್ಕೆ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದುದೇ ಕಾರಣ ಎಂದು ಪನ್ವರ್ ತಿಳಿಸಿದ್ದಾರೆ.
ನಾಪತ್ತೆಯಾಗುವ ಮೊದಲು ಪ್ರತಾಪ್ ತನ್ನ ಮಾಜಿ ವಿದ್ಯಾರ್ಥಿ ಮತ್ತು ಕ್ಯಾಮೆರಾಮನ್ ಮನ್ಬೀರ್ ಕಲುಡಾ ಮತ್ತು ಪೊಲೀಸ್ ಕಾನ್‌ಸ್ಟೆಬಲ್ ಸೋಬನ್ ಸಿಂಗ್ ಅವರನ್ನು ಭೇಟಿಯಾಗಿದ್ದರು. ಇವರು ಮೂವರು ರಾತ್ರಿ 10 ಗಂಟೆಯವರೆಗೆ ಹಲವಾರು ಸ್ಥಳಗಳಲ್ಲಿ ಮದ್ಯ ಸೇವಿಸಿದ್ದರು. ಬಳಿಕ ಪ್ರತಾಪ್ ರಾತ್ರಿ 11 ಗಂಟೆಯ ಸುಮಾರಿಗೆ ಮನೆಗೆ ಹೊರಟಿದ್ದರು. ಅವರ ವಾಹನವು ಭಾಗೀರಥಿಯ ನದಿಯಲ್ಲಿ ಮುಳುಗಿದ್ದು ಅದರ ಬಾಗಿಲುಗಳು ಲಾಕ್ ಆಗಿತ್ತು ಎಂದು ಪನ್ವರ್ ತಿಳಿಸಿದ್ದಾರೆ. ಆದರೆ ಪೊಲೀಸರ ಹೇಳಿಕೆಯನ್ನು ತಿರಸ್ಕರಿಸಿರುವ ಪ್ರತಾಪ್ ಅವರ ಕುಟುಂಬವು, ಅವರು ಅಕ್ರಮದ ಆರೋಪ ಕುರಿತು ತನಿಖಾ ವರದಿ ಮಾಡಿದ್ದರಿಂದ ಅವರಿಗೆ ಬೆದರಿಕೆಗಳು ಬಂದಿವೆ ಎಂದು ದೂರಿದ್ದಾರೆ. ದೂರುದಾರರೂ ಆಗಿರುವ ಅವರ ಚಿಕ್ಕಪ್ಪ ಕೃಪಾಲ್ ಸಿಂಗ್ ತನಿಖೆಯ ಸಮಗ್ರತೆಯ ಬಗ್ಗೆ ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಪ್ರಕರಣದ ಕುರಿತು ತನಿಖೆ ಪ್ರಾರಂಭಿಸಿದ ವಿಶೇಷ ತನಿಖಾ ತಂಡ ಪ್ರಕರಣದ ತನಿಖೆಯನ್ನು ವೇಗವಾಗಿ ಮುಗಿಸಿದೆ. ತನಿಖಾ ವರದಿಯಲ್ಲಿ ಪ್ರತಾಪ್ ಅವರ ಕಣ್ಣುಗಳು ಮತ್ತು ತಲೆಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ. ಇದಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ ಎಂದು ಪ್ರತಾಪ್ ಚಿಕ್ಕಪ್ಪ ದೂರಿದ್ದಾರೆ.
ಇದನ್ನೂ ಓದಿ: Zubeen Garg: ಜುಬೀನ್ ಗಾರ್ಗ್‌ನನ್ನು ಕೊಲೆ ಮಾಡಿದ್ದು ಈತನೇ......... ಹೊಸ ಬಾಂಬ್ ಸಿಡಿಸಿದ ಬ್ಯಾಂಡ್‌ಮೇಟ್
ಈ ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದೊಂದು ದುರಂತ ಮತ್ತು ಭಯಾನಕ. ಬಿಜೆಪಿ ನೇತೃತ್ವದ ಸರ್ಕಾರವು ಸ್ವತಂತ್ರ ಪತ್ರಕರ್ತರಿಗೆ ಭಯದ ವಾತಾವರಣವನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.