Ration Card: ಪಡಿತರ ಚೀಟಿಗಳಿಗೆ ಇ-ಕೆವೈಸಿ ಕಡ್ಡಾಯ- ಜು15 ಡೆಡ್ಲೈನ್!
ಆಂಧ್ರಪ್ರದೇಶದಲ್ಲಿ ಪಡಿತರ ಚೀಟಿಗಳನ್ನು (Ration Card) ನೀಡುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಪಡಿತರ ಚೀಟಿ ಹೊಂದಿರುವವರಿಗೆ ಇ-ಕೆವೈಸಿ ಕಡ್ಡಾಯ (e-KYC Mandatory) ಮಾಡಲಾಗಿದೆ. ಇದಕ್ಕಾಗಿ ಆಂಧ್ರಪ್ರದೇಶ ಸರ್ಕಾರವು (Andhra Pradesh government) ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಜುಲೈ 15 ರವರೆಗೆ ಅಂತಿಮ ದಿನಾಂಕ ನಿಗದಿಪಡಿಸಿ ಆದೇಶ ಹೊರಡಿಸಿದೆ. ಇದಕ್ಕೂ ಮುನ್ನವೇ ಅರ್ಹರೆಲ್ಲರೂ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಆದೇಶಿಸಿದೆ.



ಪಡಿತರ ಚೀಟಿ ನೀಡುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಆಂಧ್ರಪ್ರದೇಶ ಸರ್ಕಾರವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ನಾಗರಿಕರು ಈಗ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸುವುದು, ಅಸ್ತಿತ್ವದಲ್ಲಿರುವವುಗಳಿಗೆ ಬದಲಾವಣೆಗಳನ್ನು ಮಾಡುವುದು ಮತ್ತು ಸದಸ್ಯರನ್ನು ಸೇರಿಸುವುದು ಅಥವಾ ತೆಗೆದುಹಾಕುವುದು ಮುಂತಾದ ವಿವಿಧ ಸೇವೆಗಳನ್ನು ಪಡೆಯಬಹುದು.

ಪಡಿತರ ಚೀಟಿಯಲ್ಲಿ ಪಟ್ಟಿ ಮಾಡಲಾದ ಪ್ರತಿಯೊಬ್ಬ ಸದಸ್ಯರು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಇ-ಕೆವೈಸಿ ಪೂರ್ಣಗೊಳಿಸಿದವರಿಗೆ ಮಾತ್ರ ಹೊಸ ಪಡಿತರ ಚೀಟಿಗಳನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಬಾಕಿ ಉಳಿದಿರುವ ಎಲ್ಲಾ ಇ-ಕೆವೈಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರವು ಜುಲೈ 15ರ ವರೆಗೆ ಗಡುವು ವಿಧಿಸಿದೆ. ಕಾಕಿನಾಡ ಜಿಲ್ಲೆಯಲ್ಲಿ ಮಾತ್ರ 1,060 ನ್ಯಾಯಬೆಲೆ ಅಂಗಡಿಗಳ ಅಡಿಯಲ್ಲಿ 18,30,461 ಪಡಿತರ ಚೀಟಿ ಸದಸ್ಯರಿದ್ದು, ಈ ಪೈಕಿ 17,07,073 ಸದಸ್ಯರು ಈಗಾಗಲೇ ಇ-ಕೆವೈಸಿ ಪೂರ್ಣಗೊಳಿಸಿದ್ದಾರೆ. ಇನ್ನು 98,471 ಸದಸ್ಯರಿಗೆ ಇ-ಕೆವೈಸಿ ಪ್ರಕ್ರಿಯೆ ಬಾಕಿಯಾಗಿದೆ.

ಐದು ವರ್ಷಕ್ಕಿಂತ ಕೆಳಗಿನ ಮತ್ತು 85 ವರ್ಷ ಮೇಲ್ಪಟ್ಟವರಿಗೆ ಇ-ಕೆವೈಸಿ ಕಡ್ಡಾಯವಲ್ಲ. ಉಳಿದಂತೆ ಇ-ಕೆವೈಸಿ ಪೂರ್ಣಗೊಳಿಸಲು ವಿಫಲರಾದವರಿಗೆ ಪಡಿತರ ಪ್ರಯೋಜನ ಪಡೆಯಲು ಅಡ್ಡಿಯಾಗುವ ಸಾಧ್ಯತೆ ಇದೆ. ಹೀಗಾಗಿ ಈಗಾಗಲೇ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿರುವವರು ತಮ್ಮ ಇ-ಕೆವೈಸಿ ಸ್ಥಿತಿಯನ್ನು ಹತ್ತಿರದ ಪಡಿತರ ಅಂಗಡಿ ಅಥವಾ ಆನ್ಲೈನ್ನಲ್ಲಿ ಪರಿಶೀಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಡಿತರಕ್ಕೆ ಸಂಬಂಧಿಸಿದ ಸೇವೆಗಳನ್ನು ಹೆಚ್ಚು ವೇಗ ಮತ್ತು ಪಾರದರ್ಶಕವಾಗಿ ಜನರಿಗೆ ತಲುಪಿಸಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಅರ್ಜಿಗಳನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ ಮತ್ತು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಎಸ್ಒ ರುದ್ರರಾಜು ಸತ್ಯನಾರಾಯಣ ರಾಜು ತಿಳಿಸಿದ್ದಾರೆ.

ಮುಂಬರುವ ತಿಂಗಳುಗಳಲ್ಲಿ ಸ್ವೀಕರಿರುವ ಎಲ್ಲಾ ಅರ್ಜಿಗಳನ್ನು ತ್ವರಿತವಾಗಿ ಪರಿಹರಿಸಲಾಗುವುದು. ಸರ್ಕಾರವು ಆಗಸ್ಟ್ ವೇಳೆಗೆ ಹೊಸ ಪಡಿತರ ಚೀಟಿಗಳನ್ನು ನೀಡುವ ಗುರಿಯನ್ನು ಹೊಂದಿದೆ ಮತ್ತು ಹಳೆಯ ಕಾರ್ಡ್ಗಳನ್ನು ಸ್ಮಾರ್ಟ್ ಕಾರ್ಡ್ಗಳಾಗಿ ಬದಲಾಯಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಡಿಎಸ್ಒ ರುದ್ರರಾಜು ಹೇಳಿದ್ದಾರೆ.