60 ಸಾವಿರ ವಿದ್ಯಾರ್ಥಿನಿಯರಿಗೆ ಸ್ಕಾಲರ್‌ಶಿಪ್ ಘೋಷಿಸಿದ ಕೆನರಾ ಬ್ಯಾಂಕ್; ಸತ್ಯ ಸಾಯಿ ಗ್ರಾಮದಲ್ಲಿ ವಿಶೇಷ ಗೌರವ
Chikkaballapur News: ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಬುಧವಾರ ಕೆನರಾ ಬ್ಯಾಂಕ್ ನಿರ್ದೇಶಕಿ ನಳಿನಿ ಪದ್ಮನಾಭನ್ ಅವರು ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್' ಗೌರವ ಸ್ವೀಕರಿಸಿದರು. ಈ ವೇಳೆ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ ರಾಜು ಉಪಸ್ಥಿತರಿದ್ದರು.


ಚಿಕ್ಕಬಳ್ಳಾಪುರ: ಕೆನರಾ ಬ್ಯಾಂಕ್ ಒಟ್ಟು 60 ಸಾವಿರ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಲಿದೆ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ರಾಜು ಘೋಷಿಸಿದರು. ತಾಲೂಕಿನ (Chikkaballapur News) ಮುದ್ದೇನಹಳ್ಳಿಯಲ್ಲಿರುವ ಸತ್ಯ ಸಾಯಿ ಗ್ರಾಮದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್‌ಗೆ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್' ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆನರಾ ಬ್ಯಾಂಕ್‌ಗೆ ಒಟ್ಟು 10 ಸಾವಿರ ಶಾಖೆಗಳಿವೆ. ಎಲ್ಲ ಶಾಖೆಗಳೂ 5 ರಿಂದ 10ನೇ ತರಗತಿ ಓದುತ್ತಿರುವ ಸರ್ಕಾರಿ ಶಾಲೆಯ 6 ವಿದ್ಯಾರ್ಥಿನಿಯರನ್ನು ಗುರುತಿಸಿ ವಿದ್ಯಾರ್ಥಿ ವೇತನ ನೀಡಲಿವೆ. ಈ ವಿದ್ಯಾರ್ಥಿನಿಯರಿಗೆ ಹಣಕಾಸಿನ ನೆರವು ಒದಗಿಸುವ ಜತೆಗೆ ಅವರನ್ನು ಆರ್ಥಿಕ ಸಾಕ್ಷರರನ್ನಾಗಿಯೂ ಮಾಡುತ್ತಿದ್ದೇವೆ ಎಂದು ಹೇಳಿದರು.
ನಮ್ಮ 177 ಪ್ರಾದೇಶಿಕ ಕಚೇರಿಗಳು ತಲಾ ಒಂದು ಹಿಂದುಳಿದ ಹಳ್ಳಿಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗಾಗಿ ತಲಾ 10 ಲಕ್ಷ ರೂಪಾಯಿ ಖರ್ಚು ಮಾಡುತ್ತಿವೆ. ನಮ್ಮ ಬ್ಯಾಂಕ್ ನಿರ್ವಹಿಸುತ್ತಿರುವ 105 ತರಬೇತಿ ಕೇಂದ್ರಗಳ ಮೂಲಕ ವರ್ಷಕ್ಕೆ 80 ಸಾವಿರ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯಮಶೀಲತೆಯ ತರಬೇತಿ ಕೊಡುತ್ತಿದ್ದೇವೆ. ಅವರು ಸ್ವಂತ ವ್ಯಾಪಾರ ಆರಂಭಿಸಲು ನೆರವಾಗುತ್ತಿದ್ದೇವೆ ಎಂದು ಹೇಳಿದರು.
'ಒಂದು ಜಗತ್ತು ಒಂದು ಕುಟುಂಬ' ಜಾಗತಿಕ ಮಾನವೀಯ ಸೇವಾ ಅಭಿಯಾನದ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್' ಪುರಸ್ಕಾರ ಸ್ವೀಕರಿಸಿದ ಕೆನರಾ ಬ್ಯಾಂಕ್‌ನ ನಿರ್ದೇಶಕಿ ನಳಿನಿ ಪದ್ಮನಾಭನ್ ಮಾತನಾಡಿ, ವಿನಾಯಕ ಚತುರ್ಥಿಯ ಪವಿತ್ರ ದಿನದಂದು ಕೆನರಾ ಬ್ಯಾಂಕ್ ಪರವಾಗಿ ಈ ಗೌರವ ಪಡೆದಿದ್ದು ನನಗೆ ದೇವರೇ ಆಶೀರ್ವಾದ ಮಾಡಿದಂತೆ ಅನ್ನಿಸುತ್ತಿದೆ. ಇದು ಕೇವಲ ಆರಂಭವಷ್ಟೇ. ನಾವು ಸಮಾಜಕ್ಕೆ ಇನ್ನಷ್ಟು ಮತ್ತಷ್ಟು ಕೊಡುಗೆಗಳನ್ನು ನೀಡಬೇಕಿದೆ. ನಾವೂ ಸಹ ಒಂದು ಜಗತ್ತು, ಒಂದು ಕುಟುಂಬದ ಭಾಗವಾಗಬೇಕಿದೆ. ಇದು ಬ್ಯಾಂಕ್‌ನ ಒಳ್ಳೆಯ ಕೆಲಸಗಳಿಗೆ ಸಿಕ್ಕ ಗೌರವ ಎಂದುಕೊಳ್ಳುತ್ತೇನೆ ಎಂದರು.
ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ಶಿಕ್ಷಣ ಮತ್ತು ಸಂಸ್ಥೆಗೆ ಕೆನರಾ ಬ್ಯಾಂಕ್ ಹಲವು ಅತ್ಯಾಧುನಿಕ ಜೀವರಕ್ಷಕ ಉಪಕರಣಗಳನ್ನು ಕೊಡುಗೆಯಾಗಿ ಕೊಟ್ಟಿದೆ. ಈ ಮೂಲಕ ಹಲವು ಅಮೂಲ್ಯ ಜೀವಗಳು ಉಳಿಯಲು ನೆರವಾಗಿದೆ. ಬ್ಯಾಂಕ್‌ನ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಆಶೀರ್ವಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು, 'ಸರ್ಕಾರ, ಸಮಾಜ ಮತ್ತು ಸಂಸ್ಥೆಗಳು ಒಗ್ಗೂಡಿ ಕೆಲಸ ಮಾಡಿದಾಗ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಸಾಧಿಸಲು ಸಾಧ್ಯ. ಹೀಗಾಗಿ ನಾವು ಕೆಲವೊಂದು ಸಹಭಾಗಿತ್ವವನ್ನು ಸ್ವಾಗತಿಸುತ್ತೇವೆ. ಕೆನರಾ ಬ್ಯಾಂಕ್ ನಮ್ಮೊಂದಿಗೆ ಕೈ ಜೋಡಿಸಿದೆ. ಇದರಿಂದ ನಮ್ಮ ಸೇವೆಗಳನ್ನು ಮತ್ತಷ್ಟು ವೇಗವಾಗಿ ಎಲ್ಲರಿಗೂ ತಲುಪಿಸಲು ಮತ್ತು ಪರಿಣಾಮಕಾರಿಯಾಗಿ ನೀಡಲು ಸಾಧ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ನಾವು 33 ಹಾಸಿಗೆ ಸಾಮರ್ಥ್ಯದ ತುರ್ತು ಚಿಕಿತ್ಸಾ ಘಟಕ ಆರಂಭಿಸಲಿದ್ದೇವೆ' ಎಂದರು.
ಈ ಸುದ್ದಿಯನ್ನೂ ಓದಿ | Ganesha chaturthi 2025: ಬೆಂಗಳೂರಿನಲ್ಲಿ ಗಣೇಶ ವಿಸರ್ಜನೆಗೆ 41 ಕೆರೆ, 489 ತಾತ್ಕಾಲಿಕ ಸಂಚಾರಿ ಕಲ್ಯಾಣಿ ವ್ಯವಸ್ಥೆ
ಗಣೇಶಾಥರ್ವಶೀರ್ಷದ ಸುಶ್ರಾವ್ಯ ಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗಣೇಶ ಚತುರ್ಥಿಯ ಪ್ರಸ್ತುತತೆಯ ಬಗ್ಗೆ ಆಕರ್ಷಕ ಸಾಕ್ಷ್ಯಚಿತ್ರವನ್ನು ಪ್ರಸ್ತುತಪಡಿಸಲಾಯಿತು. ಗಣೇಶನ ಬಗ್ಗೆ ಇರುವ ಜನಪ್ರಿಯ ಪುರಾಣ ಕಥೆಗಳನ್ನು ಈ ವಿಡಿಯೊ ಮನಮುಟ್ಟುವಂತೆ ಆಕರ್ಷಕವಾಗಿ ವಿವರಿಸಿತು. ಖ್ಯಾತ ಹಿಂದೂಸ್ತಾನಿ ಗಾಯಕರಾದ ಡಾ. ಪ್ರಭಾಕರ್ ಕಶ್ಯಪ್ ಮತ್ತು ಡಾ. ದಿವಾಕರ್ ಕಶ್ಯಪ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.