ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Bhagwat: ʼʼರಾಷ್ಟ್ರಗಳ ನಡುವಿನ ವ್ಯಾಪಾರವು ಒತ್ತಡ ಮುಕ್ತವಾಗಿರಬೇಕುʼʼ: ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್

ಆರ್‌ಎಸ್‌ಎಸ್‌ನ ಶತಮಾನೋತ್ಸವದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಆಯೋಜಿಸಿದ್ದ 3 ದಿನಗಳ ವ್ಯಾಖ್ಯಾನಮಾಲಾ ಉಪನ್ಯಾಸ ಸರಣಿಯಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ''ರಾಷ್ಟ್ರಗಳ ನಡುವಿನ ವ್ಯಾಪಾರವು ಒತ್ತಡ ಮುಕ್ತವಾಗಿರಬೇಕು'' ಎಂದು ತಿಳಿಸಿದ್ದಾರೆ.

ʼʼವ್ಯಾಪಾರವು ಒತ್ತಡ ಮುಕ್ತವಾಗಿರಬೇಕುʼʼ: ಮೋಹನ್ ಭಾಗವತ್

ಮೋಹನ್ ಭಾಗವತ್

Ramesh B Ramesh B Aug 27, 2025 9:40 PM

ದೆಹಲಿ: ''ರಾಷ್ಟ್ರಗಳ ನಡುವಿನ ವ್ಯಾಪಾರವು ಒತ್ತಡ ಮುಕ್ತವಾಗಿರಬೇಕು'' ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅಭಿಪ್ರಾಯ ಪಟ್ಟರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತದ ಮೇಲೆ ವಿಧಿಸಿದ ಹೆಚ್ಚುವರಿ ಶೇ. 25ರಷ್ಟು ಸುಂಕದ ನಿಯಮ ಆಗಸ್ಟ್‌ 27ರಂದು ಜಾರಿಗೆ ಬಂದಿದೆ. ಇದರ ಪರಿಣಾಮವನ್ನು ಸರಿದೂಗಿಸಲು ಸರ್ಕಾರವು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಭಾರತೀಯ ರಫ್ತುದಾರರು ಕರೆ ನೀಡುತ್ತಿರುವ ಮಧ್ಯೆ, ಭಾಗವತ್ ಸ್ಥಳೀಯ ವಸ್ತುಗಳ ಬಳಕೆಯನ್ನು ಉತ್ತೇಜಿಸುವ ಅಗತ್ಯವನ್ನು ಒತ್ತಿ ಹೇಳಿದರು. ʼʼಅಗತ್ಯ ವಸ್ತುಗಳನ್ನು ಮಾತ್ರ ಆಮದು ಮಾಡಿಕೊಳ್ಳಬೇಕು - ಉಳಿದೆಲ್ಲವೂ ದೇಶೀಯವಾಗಿ ಉತ್ಪಾದಿಸಬೇಕುʼʼ ಎಂದು ಅವರು ಕರೆ ನೀಡಿದರು.

ಆರ್‌ಎಸ್‌ಎಸ್‌ನ ಶತಮಾನೋತ್ಸವದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಆಯೋಜಿಸಿದ್ದ 3 ದಿನಗಳ ವ್ಯಾಖ್ಯಾನಮಾಲಾ ಉಪನ್ಯಾಸ ಸರಣಿಯಲ್ಲಿ ಅವರು ಮಾತನಾಡಿದರು. "ಅಂತಾರಾಷ್ಟ್ರೀಯ ವ್ಯಾಪಾರ ಒತ್ತಡದಿಂದ ಮುಕ್ತವಾಗಿರಬೇಕು ಮತ್ತು ಸ್ವಯಂಪ್ರೇರಣೆಯಿಂದ ನಡೆಸಲ್ಪಡಬೇಕು. ಅದಕ್ಕಾಗಿಯೇ ನಾವು ಸ್ವದೇಶಿ ವಸ್ತುಗಳ ಬಳಕೆಯನ್ನು ಉತ್ತೇಜಿಸಬೇಕು. ದೇಶದ ವ್ಯಾಪಾರ ನೀತಿಯು ಸ್ವಯಂಪ್ರೇರಿತ ಸಹಕಾರವನ್ನು ಆಧರಿಸಿರಬೇಕು" ಎಂದು ತಿಳಿಸಿದರು.



ಈ ಸುದ್ದಿಯನ್ನೂ ಓದಿ: Narendra Modi: "ಅಂಗಡಿಗಳ ಹೊರಗೆ 'ಸ್ವದೇಶಿ' ಬೋರ್ಡ್‌ಗಳನ್ನು ಇರಿಸಿ"; ಸುಂಕ ನೀತಿಗೆ ಸೆಡ್ಡು ಹೊಡೆಯಲು ಮೋದಿ ಅಸ್ತ್ರ

"ಆತ್ಮನಿರ್ಭರ (ಸ್ವಾವಲಂಬನೆ) ಎಂದರೆ ಆಮದುಗಳನ್ನು ನಿಲ್ಲಿಸುವುದು ಎಂದರ್ಥವಲ್ಲ. ಜಗತ್ತು ಪರಸ್ಪರ ಅವಲಂಬಿತವಾಗಿದೆ. ಆದ್ದರಿಂದ ರಫ್ತು-ಆಮದು ಮುಂದುವರಿಯುತ್ತದೆ. ಅದಾಗ್ಯೂ ಈ ವಿಚಾರದಲ್ಲಿ ಯಾವುದೇ ಒತ್ತಡ ಇರಬಾರದು" ಎಂದು ಅವರು ಹೇಳಿದರು.

ʼʼಆರ್‌ಎಸ್‌ಎಸ್ ಹಿಂದೂ ರಾಷ್ಟ್ರದ ಜೀವನ ಧ್ಯೇಯದ ಅಭಿವೃದ್ಧಿ. ಸತ್ಯ ಮತ್ತು ಪ್ರೀತಿಯೇ ಹಿಂದು ಧರ್ಮ. ಜಗತ್ತು ಅನ್ಯೋನ್ಯತೆಯ ಮೇಲೆ ನಡೆಯುತ್ತದೆಯೇ ವಿನಃ ಒಪ್ಪಂದಗಳ ಮೇಲೆ ಅಲ್ಲ. ಮಾನವನ ಸಂಬಂಧಗಳು ಒಪ್ಪಂದಗಳು ಮತ್ತು ವಹಿವಾಟುಗಳ ಮೇಲೆ ಆಧಾರಿತವಾಗಿರಬಾರದು, ಅದು ಅನ್ಯೋನ್ಯತೆಯ ಮೇಲೆ ಆಧಾರಿತವಾಗಿರಬೇಕುʼʼ ಎಂದು ಮೋಹನ್ ಭಾಗವತ್ ವಿವರಿಸಿದರು.



ʼʼಹೊರಗಿನಿಂದ ಬಂದ ಜನರು ತಮ್ಮದೇ ಆದ ಸಿದ್ಧಾಂತಗಳನ್ನು ತಂದರೂ ಭಾರತೀಯರಲ್ಲಿ ಕೆಲವರು ಅವುಗಳನ್ನು ಒಪ್ಪಿಕೊಂಡರು. ಹಿಂದುಗಳು ತಮ್ಮದೇ ಆದ ಶ್ರೀಮಂತ ಸಂಪ್ರದಾಯಗಳು, ತತ್ವಶಾಸ್ತ್ರಗಳು ಮತ್ತು ಮಾರ್ಗಗಳನ್ನು ಹೊಂದಿದ್ದಾರೆ. ವಿದೇಶಿ ಮಾರ್ಗಗಳನ್ನು ಅಳವಡಿಸಿಕೊಳ್ಳುವುದರಿಂದ ಉದ್ಭವಿಸಿರುವ ಅಂತರವನ್ನು ಕಡಿಮೆ ಮಾಡುವುದು ಅತ್ಯಗತ್ಯʼʼ ಎಂದು ಅವರು ಒತ್ತಿ ಹೇಳಿದರು. ಇದನ್ನು ಸಾಧಿಸಲು, ಭಾಗವತ್ ಎಲ್ಲರೂ ಆರ್‌ಎಸ್‌ಎಸ್‌ನ ಜೀವನ ವಿಧಾನವಾದ ಪಂಚ ಪರಿವರ್ತನವನ್ನು ಅನುಸರಿಸಬೇಕು ಎಂದು ಕರೆ ನೀಡಿದರು.

ʼʼಅತಿಯಾದ ಮೊಬೈಲ್ ಬಳಕೆ ಮತ್ತು ಗೌಪ್ಯತೆಯ ಸಂಸ್ಕೃತಿಯಿಂದಾಗಿ ಮಕ್ಕಳು ಕುಟುಂಬ ಮೌಲ್ಯಗಳಿಂದ ದೂರವಾಗುತ್ತಿದ್ದಾರೆ. ಕುಟುಂಬದ ಭಾವನೆಯನ್ನು ಬೆಳೆಸಲು ಒಟ್ಟಿಗೆ ಊಟ ಮಾಡುವುದು ಮತ್ತು ಪರಸ್ಪರ ಮಾತನಾಡುವಂತಹ ಸರಳ ಸಂಪ್ರದಾಯಗಳನ್ನು ಪಾಲಿಸಬೇಕುʼʼ ಎಂದು ಹೇಳಿದರು.



ಸಾಮಾಜಿಕ ಸಾಮರಸ್ಯ

ಅಸ್ಪೃಶ್ಯತೆ ಸಂಪೂರ್ಣವಾಗಿ ಕಣ್ಮರೆಯಾಗುವ ಅಗತ್ಯವನ್ನು ಅವರು ಪುನರುಚ್ಚರಿಸಿದರು. ದೇವಾಲಯಗಳು, ನೀರು ಮತ್ತು ಎಲ್ಲ ಸಂಪನ್ಮೂಲಗಳು ಎಲ್ಲರಿಗೂ ಸೇರಿವೆ. ಇವುಗಳ ನಡುವೆ ನಡುವೆ ಯಾವುದೇ ವ್ಯತ್ಯಾಸ ಇರಬಾರದು ಎಂದು ಹೇಳಿದರು. ಹಳ್ಳಿಗಳಲ್ಲಿ ಎಲ್ಲ ರೀತಿಯ ತಾರತಮ್ಯ ಮತ್ತು ವಿಭಜನೆಯನ್ನು ಕೊನೆಗೊಳಿಸಬೇಕೆಂದು ಅವರು ಆಗ್ರಹಿಸಿದರು.