ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Elvish Yadav: ಯೂಟ್ಯೂಬರ್ ಎಲ್ವಿಶ್ ಯಾದವ್ ಮನೆ ಮೇಲೆ ದಾಳಿ: ಇಬ್ಬರು ಶೂಟರ್‌ಗಳ ಬಂಧನ

ಬಿಗ್ ಬಾಸ್ ಒಟಿಟಿ ವಿಜೇತ, ಯೂಟ್ಯೂಬರ್ ಎಲ್ವಿಶ್ ಯಾದವ್ ಮನೆ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಶೂಟರ್‌ಗಳಾದ ಗೌರವ್ ಮತ್ತು ಆದಿತ್ಯ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ಫರಿದಾಬಾದ್ ನಿವಾಸಿಗಳಾಗಿದ್ದು, ದಾಳಿ ನಡೆಸಲು ತಲಾ 50,000 ರೂ. ಪಡೆದಿದ್ದಾರೆ ಎನ್ನುವ ಆರೋಪವಿದೆ.

ಎಲ್ವಿಶ್ ಯಾದವ್ ಮನೆ ದಾಳಿ: ಇಬ್ಬರ ಬಂಧನ

ನವದೆಹಲಿ: ಬಿಗ್ ಬಾಸ್ ಒಟಿಟಿ ವಿಜೇತ (Bigg Boss OTT winner) ಯೂಟ್ಯೂಬರ್ ಎಲ್ವಿಶ್ ಯಾದವ್ (YouTuber Elvish Yadav) ಮನೆ ಮೇಲೆ ಗುಂಡು ಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಸೋಮವಾರ ಬಂಧಿಸಲಾಗಿದೆ. ಆಗಸ್ಟ್ 18ರಂದು ಎಲ್ವಿಶ್ ಯಾದವ್ ಅವರ ಗುರುಗ್ರಾಮ್ ನಿವಾಸದ (Elvish Yadav's Gurugram residence) ಮೇಲೆ ಗುಂಡು ಹಾರಿಸಲಾಗಿತ್ತು. ಈ ದಾಳಿಯನ್ನು ತಾನು ನಡೆಸಿರುವುದಾಗಿ ಹಿಮಾಂಶು ಭಾವು ಗ್ಯಾಂಗ್‌ (Himanshu Bhau Gang) ಒಪ್ಪಿಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಶೂಟರ್‌ಗಳನ್ನು ದೆಹಲಿ ಪೊಲೀಸರು ಇದೀಗ ಬಂಧಿಸಿದ್ದಾರೆ.

ಯೂಟ್ಯೂಬರ್ ಎಲ್ವಿಶ್ ಯಾದವ್ ಮನೆ ಮೇಲೆ ದಾಳಿಯ ಕುರಿತು ತನಿಖೆ ನಡೆಸುತ್ತಿದ್ದಾಗ ಶೂಟರ್‌ಗಳಾದ ಗೌರವ್ ಮತ್ತು ಆದಿತ್ಯ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ಫರಿದಾಬಾದ್ ನಿವಾಸಿಗಳಾಗಿದ್ದು, ದಾಳಿ ನಡೆಸಲು ತಲಾ 50,000 ರೂ. ಪಡೆದಿದ್ದಾರೆ ಎನ್ನುವುದು ತನಿಖೆ ವೇಳೆ ದೃಢಪಟ್ಟಿದೆ.

ಯೂಟ್ಯೂಬರ್ ಮತ್ತು ಗಾಯಕ ಎಲ್ವಿಶ್ ಯಾದವ್ ಮನೆ ಮೇಲೆ ನಡೆದ ದಾಳಿಯ ದೃಶ್ಯವಾಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಶೂಟರ್‌ಗಳಾದ ಗೌರವ್ ಮತ್ತು ಆದಿತ್ಯ ಅವರಿಬ್ಬರೂ ನೀರಜ್ ಫರಿದ್‌ಪುರಿಯಾ ಮತ್ತು ಭೌ ಗ್ಯಾಂಗ್‌ಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಪೋರ್ಚುಗಲ್ ಮೂಲದ ಗ್ಯಾಂಗ್ ನಾಯಕ ಹಿಮಾಂಶು ಭೌ ಈ ದಾಳಿಯ ಹೊಣೆ ಹೊತ್ತಿದ್ದು, ಯಾದವ್ ಅವರ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡುವುದರಿಂದ ಈ ದಾಳಿ ನಡೆಸಲಾಗಿದೆ ಎಂದು ಹೇಳಿದ್ದನು.

ಇದೇ ಪ್ರಕರಣಕ್ಕೆ ಸಂಬಂಧಿಸಿ ಆಗಸ್ಟ್ 23ರಂದು ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ರಾಪಿಡೋ ಬೈಕ್ ಚಾಲಕ ಜತಿನ್ ನನ್ನು ಬಂಧಿಸಿದ ಕೆಲವು ದಿನಗಳ ಬಳಿಕ ಈ ಬಂಧನ ನಡೆದಿದೆ. ಈತನ ವಿರುದ್ಧ ದಾಳಿಯ ಯೋಜನೆ ಮತ್ತು ಅಪರಾಧಕ್ಕೆ ಬೈಕ್ ಅನ್ನು ಒದಗಿಸಿದ ಆರೋಪವಿದೆ.

ಇದನ್ನೂ ಓದಿ: Elvish Yadav: ಯೂಟ್ಯೂಬರ್ ಎಲ್ವಿಶ್ ಯಾದವ್ ಮನೆ ಮೇಲೆ ದಾಳಿ ಹಿಂದಿದೆ ಈ ವ್ಯಕ್ತಿಯ ಕೈವಾಡ!

ಕೆಲವು ದಿನಗಳ ಹಿಂದೆ ಈ ಪ್ರಕರಣಕ್ಕೆ ಸಂಬಂಧಿಸಿ ಫರಿದಾಬಾದ್‌ನ ಜವಾಹರ್ ಕಾಲೋನಿಯ ನಿವಾಸಿ ಇಶಾಂತ್ ಅಲಿಯಾಸ್ ಇಶು ಗಾಂಧಿ ಎಂಬ ಮತ್ತೊಬ್ಬ ಆರೋಪಿ ಶೂಟರ್ ಅನ್ನು ಪೊಲೀಸರು ಬಂಧಿಸಿದ್ದರು. ಇಶಾಂತ್ ಕೂಡ ನೀರಜ್ ಫರೀದ್‌ಪುರಿಯ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದಾನೆ ಎನ್ನುವ ಆರೋಪವಿದೆ.