ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಮುಲ್ ಗರ್ಲ್‌ಗೆ ಶಶಿ ತರೂರ್ ಸಹೋದರಿ ಶೋಭಾ ತರೂರ್ ಸ್ಫೂರ್ತಿಯೇ? ಅಮುಲ್‌ನಿಂದ ಸ್ಪಷ್ಟನೆ

ಅಮುಲ್‌ ಕವರ್‌ನಲ್ಲಿ ನೀಲಿ ಕೂದಲು ಹೊಂದಿರುವ, ಕೆಂಪು ಡಾಟ್‌ಗಳ ಉಡುಗೆ ಧರಿಸಿರುವ ಐಕಾನಿಕ್ ಮ್ಯಾಸ್ಕಾಟ್ ಅಮುಲ್ ಗರ್ಲ್‌ಗೆ ಸ್ಫೂರ್ತಿ ಯಾರು ಎಂಬ ಪ್ರಶ್ನೆಗೆ ವೈರಲ್ ವಿಡಿಯೊ ಉತ್ತರ ನೀಡಿದೆ. ಇದು ಕಾಂಗ್ರೆಸ್ ಸಂಸದ ಶಶಿ ತರೂರ್ ಸಹೋದರಿ ಶೋಭಾ ತರೂರ್ ಶ್ರೀನಿವಾಸನ್ ಅವರ ಬಾಲ್ಯದ ಫೋಟೊ ಎಂದು ಹೇಳಲಾಗಿದೆ. ಆದರೆ ಅಮುಲ್ ಈ ಹೇಳಿಕೆಯನ್ನು ನಿರಾಕರಿಸಿದೆ.

ಮೊದಲ ಅಮುಲ್ ಬೇಬಿ ಯಾರು ಗೊತ್ತೆ?

ಅಮುಲ್‌

Profile Sushmitha Jain Aug 25, 2025 8:53 PM

ನವದೆಹಲಿ: ಅಮುಲ್‌ (Amul) ಕವರ್‌ನಲ್ಲಿ ನೀಲಿ ಕೂದಲು ಹೊಂದಿರುವ, ಕೆಂಪು ಡಾಟ್‌ಗಳ ಉಡುಗೆ ಧರಿಸಿರುವ ಐಕಾನಿಕ್ ಮ್ಯಾಸ್ಕಾಟ್ ಅಮುಲ್ ಗರ್ಲ್‌ಗೆ ಸ್ಫೂರ್ತಿ ಯಾರು ಎಂಬ ಪ್ರಶ್ನೆಗೆ ವೈರಲ್ ವಿಡಿಯೊ ಉತ್ತರ ನೀಡಿದೆ. ಇದು ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಸಹೋದರಿ ಶೋಭಾ ತರೂರ್ (Shobha Tharoor) ಅವರ ಬಾಲ್ಯದ ಫೋಟೊ ಎಂದು ಹೇಳಲಾಗಿದೆ. ಆದರೆ ಅಮುಲ್ ಈ ಹೇಳಿಕೆಯನ್ನು ನಿರಾಕರಿಸಿದೆ.

ಪ್ರಸಿದ್ಧ ಮಾರ್ಕೆಟಿಂಗ್ ಸಲಹೆಗಾರ ಡಾ. ಸಂಜಯ್ ಅರೋರಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದು, ಇದು 18 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದು ಶೋಭಾ ತರೂರ್ ಅವರ ಗಮನ ಸೆಳೆಯಿತು. ಶೋಭಾ ತಮ್ಮ ಎಕ್ಸ್ ಖಾತೆಯಲ್ಲಿ, “ನಾನೇ ಮೊದಲ ಅಮುಲ್ ಬೇಬಿ. ಶ್ಯಾಮ್ ಬೆನಗಲ್ ಫೋಟೊ ತೆಗೆದಿದ್ದರು. ನನ್ನ ಸಹೋದರಿ ಸ್ಮಿತಾ ತರೂರ್ ಎರಡನೇ ಬಣ್ಣದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು” ಎಂದು ಬರೆದಿದ್ದಾರೆ. ಆದರೆ ಈ ಬಗ್ಗೆ ಖುದ್ದು ಅಮುಲ್ ಸ್ಪಷ್ಟನೆ ನೀಡಿ, “ಅಮುಲ್ ಗರ್ಲ್ ಶೋಭಾ ತರೂರ್‌ರಿಂದ ಸ್ಫೂರ್ತಿ ಪಡೆದಿಲ್ಲ. ಇದನ್ನು ಸಿಲ್ವೆಸ್ಟರ್ ಡಕುನ್ಹಾ ಮತ್ತು ಚಿತ್ರಕಾರ ಯೂಸ್ಟೇಸ್ ಫರ್ನಾಂಡಿಸ್ ಸೃಷ್ಟಿಸಿದರು” ಎಂದಿದೆ.

ಈ ಸುದ್ದಿಯನ್ನು ಓದಿ: Viral Video: ಜೇಬುಗಳ್ಳತನ ಮಾಡಿದ ಬಾಲಕಿಯ ಜುಟ್ಟು ಹಿಡಿದ ಅಮೆರಿಕ ಪ್ರವಾಸಿ; ವಿಡಿಯೊ ವೈರಲ್‌

1960ರ ದಶಕದಲ್ಲಿ ಅಮುಲ್ ಮಾರುಕಟ್ಟೆಯಲ್ಲಿ ದುರ್ಬಲ ಸ್ಥಾನದಲ್ಲಿತ್ತು. ಆಗ ಪಾಲ್ಸನ್ ಉದ್ಯಮದಲ್ಲಿ ಮೇಲುಗೈ ಸಾಧಿಸಿತ್ತು. ಅಮುಲ್‌ನ ಜಾಹೀರಾತು ಮುಖ್ಯಸ್ಥ ಸಿಲ್ವೆಸ್ಟರ್ ಡಕುನ್ಹಾ, ಪಾಲ್ಸನ್‌ನ ಸಿಹಿಯಾದ ಬಟರ್ ಗರ್ಲ್‌ಗೆ ಪ್ರತಿಸ್ಪರ್ಧೆ ನೀಡಬಹುದಾದಂತ ಒಂದು ಐಕಾನಿಕ್ ಮ್ಯಾಸ್ಕಾಟ್ ಸೃಷ್ಟಿಸಲು ನಿರ್ಧರಿಸಿದರು. 1966ರಲ್ಲಿ 700ಕ್ಕೂ ಹೆಚ್ಚು ಬಾಲಕಿಯರ ಫೋಟೊಗಳನ್ನು ಪರಿಶೀಲಿಸಿದರೂ, ಯಾವುದೂ ಅವರಿಗೆ ಇಷ್ಟವಾಗಲಿಲ್ಲ. ಆಗ ಕೇರಳದ ತನ್ನ ಸ್ನೇಹಿತ ಚಂದ್ರನ್ ತರೂರ್‌ನ ಮಕ್ಕಳ ಫೋಟೊಗಳನ್ನು ಕೇಳಿದರು.



ಡಾ. ಅರೋರಾ ಅವರ ವಿಡಿಯೊ ಪ್ರಕಾರ, 10 ತಿಂಗಳ ಶೋಭಾ ತರೂರ್‌ನ ಫೋಟೊ ಡಕುನ್ಹಾರಿಗೆ ಒಪ್ಪಿಗೆಯಾಯಿತು. ಈ ಫೋಟೊವನ್ನು ಶ್ಯಾಮ್ ಬೆನಗಲ್ ತೆಗೆದಿದ್ದರು. ಬಳಿಕ ಯೂಸ್ಟೇಸ್ ಫರ್ನಾಂಡಿಸ್ ಈ ಚಿತ್ರವನ್ನು ಆಧರಿಸಿ ಕಾರ್ಟೂನ್ ಅಮುಲ್ ಗರ್ಲ್ ಸೃಷ್ಟಿಸಿದರು. ಇದು “ಅಟರ್ಲಿ ಬಟರ್ಲಿ ಡಿಲಿಶಿಯಸ್” ಜಾಹೀರಾತಿನೊಂದಿಗೆ ಜನರ ಮನ ಗೆದ್ದಿತು.

2016ರಲ್ಲಿ ಶಶಿ ತರೂರ್, ತಮ್ಮ ಸಹೋದರಿಯರಾದ ಶೋಭಾ ಮತ್ತು ಸ್ಮಿತಾ ಅಮುಲ್ ಜಾಹೀರಾತಿನ ಮುಖವಾಗಿದ್ದರು ಎಂದು ಒನ್‌ಮನೋರಮಾದ ಲೇಖನದಲ್ಲಿ ತಿಳಿಸಿದ್ದರು. ಆದರೆ ಅಮುಲ್‌ನ ಸ್ಪಷ್ಟನೆಯಿಂದ ಈ ಕಥೆಯ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆ ಎದ್ದಿದೆ. ಶೋಭಾ ತರೂರ್, ಕ್ಯಾಲಿಫೋರ್ನಿಯಾದ ಗಮನಾರ್ಹ ಮಕ್ಕಳ ಲೇಖಕಿ ಮತ್ತು ಡಬ್ಬಿಂಗ್‌ ಕಲಾವಿದೆ.