ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್‌; ಮೂವರು ಜೈಶ್-ಎ-ಮೊಹಮ್ಮದ್ ಉಗ್ರರನ್ನು ಸುತ್ತುವರಿದ ಭದ್ರತಾ ಪಡೆ

Encounter Broke Out: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚತ್ರೂ ಪ್ರದೇಶದಲ್ಲಿ ಸೇನೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ಆರಂಭವಾಗಿದೆ. ಭಯೋತ್ಪಾದಕರನ್ನು ಪತ್ತೆಹಚ್ಚಲು ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ತಂಡ ಕಾರ್ಯಾಚರಣೆ ಆರಂಭಿಸಿದ ನಂತರ ಈ ಗುಂಡಿನ ಚಕಮಕಿ ಆರಂಭವಾಯಿತು ಎಂದು ಮೂಲಗಳು ತಿಳಿಸಿವೆ. ಕನಿಷ್ಠ ಮೂವರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರನ್ನು ಸುತ್ತುವರಿಯಲಾಗಿದೆ.

ಮೂವರು ಜೈಶ್-ಎ-ಮೊಹಮ್ಮದ್ ಉಗ್ರರನ್ನು ಸುತ್ತುವರಿದ  ಭದ್ರತಾ ಪಡೆ

ಸಾಂದರ್ಭಿಕ ಚಿತ್ರ.

Profile Ramesh B Jul 2, 2025 11:16 PM

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದ ಕಿಶ್ತ್ವಾರ್ (Kishtwar) ಜಿಲ್ಲೆಯ ಚತ್ರೂ ಪ್ರದೇಶದಲ್ಲಿ ಸೇನೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ಆರಂಭವಾಗಿದೆ (Encounter broke out). ಪರ್ವತ ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದಕರನ್ನು ಪತ್ತೆಹಚ್ಚಲು ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ತಂಡ ಕಾರ್ಯಾಚರಣೆ ಆರಂಭಿಸಿದ ನಂತರ ಈ ಗುಂಡಿನ ಚಕಮಕಿ ಆರಂಭವಾಯಿತು. ಎನ್‌ಕೌಂಟರ್‌ ನಡೆಯುತ್ತಿರುವುದನ್ನು ಸೇನೆಯ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.

ಕನಿಷ್ಠ ಮೂವರು ಜೈಶ್-ಎ-ಮೊಹಮ್ಮದ್ (JeM) ಭಯೋತ್ಪಾದಕರು ಅಡಗಿಕೊಂಡಿರುವ ಶಂಕೆ ವ್ಯಕ್ತವಾಗಿದ್ದ, ಅವರನ್ನು ಸುತ್ತುವರಿಯಲಾಗಿದೆ. ಕಳೆದ ಒಂದು ವರ್ಷದಲ್ಲಿ ಈ ಪ್ರದೇಶದಲ್ಲಿ ಹಲವು ಎನ್‌ಕೌಂಟರ್‌ ನಡೆದಿದೆ. ಮೇ 22ರಂದು ಚತ್ರೂ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಸೈನಿಕ ಹುತಾತ್ಮರಾಗಿದ್ದರು.



ಜಮ್ಮು ಆಡಳಿತ ಪ್ರಾಂತ್ಯದ ಭಾಗವಾಗಿರುವ ಕಿಶ್ತ್ವಾರ್‌ನಲ್ಲಿ ಇತ್ತೀಚೆಗೆ ಪದೇ ಪದೆ ಭಯೋತ್ಪಾದಕ ದಾಳಿ ನಡೆಯುತ್ತಲೇ ಇದೆ. ಕೆಲವು ವರ್ಷಗಳ ಹಿಂದಿನವರೆಗೂ ಭಯೋತ್ಪಾದನೆಯಿಂದ ಮುಕ್ತವಾಗಿದ್ದ ಈ ಪ್ರದೇಶವು ಇದೀಗ ಉಗ್ರ ಅಡಗುತಾಣವಾಗಿ ಬದಲಾಗಿರುವುದು ಸ್ಥಳೀಯಾಡಳಿತಕ್ಕೆ ಸವಾಲಾಗಿದೆ. ಈ ಪರ್ವತ ಪ್ರದೇಶಗಳಲ್ಲಿ ಅಡಗಿರುವ ಭಯೋತ್ಪಾದಕರು ಅಲ್ಲೇ ಸಮೀಪದಲ್ಲಿರುವ ಕಾಡಿನಲ್ಲಿ ತರಬೇತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರು ಜಮ್ಮು ಪ್ರದೇಶದಲ್ಲಿ ಸೇನೆ ಮತ್ತು ನಾಗರಿಕರ ಮೇಲೆ ಹಲವು ದಾಳಿ ನಡೆಸಿದ್ದಾರೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Encounter with Terrorists: ಜಮ್ಮು ಕಾಶ್ಮೀರದಲ್ಲಿ ಉಗ್ರರೊಂದಿಗೆ ಎನ್‌ಕೌಂಟರ್‌; ಓರ್ವ ಯೋಧ ಹುತಾತ್ಮ

ಅಮರನಾಥ ಯಾತ್ರೆ ಜು. 3ರಂದು ಆರಂಭವಾಗಲಿದ್ದು, ಜಮ್ಮು ಮತ್ತು ಕಾಶ್ಮೀರದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕಾಶ್ಮೀರದಲ್ಲಿ ನಿಯೋಜಿಸಲಾಗಿರುವ ಭದ್ರತಾ ಪಡೆಯ ಜತೆಗೆ ಯಾತ್ರಿಕರಿಗಾಗಿ ಸುಮಾರು 600 ಹೆಚ್ಚುವರಿ ಅರೆಸೈನಿಕ ಪಡೆಗಳನ್ನು ಸಜ್ಜುಗೊಳಿಸಲಾಗಿದೆ. ಭದ್ರತಾ ಕ್ರಮದ ಭಾಗವಾಗಿ ಈ ವರ್ಷ ಹೆಲಿಕಾಪ್ಟರ್ ಸೇವೆ ನಿಷೇಧಿಸಲಾಗಿದೆ. ಅಮರನಾಥ ಯಾತ್ರೆಯ ವೇಳೆ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.

ಓರ್ವ ಉಗ್ರನ ಎನ್‌ಕೌಂಟರ್‌

ಶ್ರೀನಗರ: ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಬಸಂತ್‌ಗಢದಲ್ಲಿ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಓರ್ವ ಉಗ್ರನನ್ನು ಹೊಡೆದುರುಳಿಸಿದ್ದರು. ಆ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಪಹಲ್ಗಾಮ್‌ ದಾಳಿಯ ಬಳಿಕ ಸೇನೆ ಉಗ್ರರ ವಿರುದ್ಧ ಮತ್ತಷ್ಟು ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ.

ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ 26 ಅಮಾಯಕರು ಮೃತಪಟ್ಟಿದ್ದರು. ಅದರ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿದೆ. ಇದೀಗ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಯೋತ್ಪಾದಕರಿಗೆ ಆಶ್ರಯ ನೀಡಿದ್ದಕ್ಕಾಗಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ. ಬಂಧಿತ ಇಬ್ಬರು ವ್ಯಕ್ತಿಗಳನ್ನು ಪಹಲ್ಗಾಮ್‌ನ ಬಟ್ಕೋಟ್‌ನ ಪರ್ವೈಜ್ ಅಹ್ಮದ್ ಜೋಥರ್ ಮತ್ತು ಪಹಲ್ಗಾಮ್‌ನ ಹಿಲ್ ಪಾರ್ಕ್‌ನ ಬಶೀರ್ ಅಹ್ಮದ್ ಜೋಥರ್ ಎಂದು ಗುರುತಿಸಲಾಗಿದೆ. ವಿಚಾರಣೆಯ ಸಮಯದಲ್ಲಿ, ಈ ಇಬ್ಬರೂ ದಾಳಿಯಲ್ಲಿ ಭಾಗಿಯಾಗಿರುವ ಮೂವರು ಭಯೋತ್ಪಾದಕರ ಗುರುತನ್ನು ಬಹಿರಂಗಪಡಿಸಿದ್ದಾರೆ.