ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಆಪರೇಷನ್ ಸಿಂದೂರ್ ಹೇಳಿಕೆಗೆ ಕ್ಷಮೆ ಕೇಳುವುದಿಲ್ಲ: ಕಾಂಗ್ರೆಸ್‌ ಸಂಸದ ಶಶಿ ತರೂರ್ ಸ್ಪಷ್ಟನೆ

ʼʼಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ ನಡೆದ ಆಪರೇಷನ್ ಸಿಂದೂರ್‌ ಕಾರ್ಯಾಚರಣೆ ಕುರಿತು ವೈಯಕ್ತಿಕ ಅಭಿಪ್ರಾಯವನ್ನು ಮಾತ್ರ ವ್ಯಕ್ತಪಡಿಸಿದ್ದೇನೆ. ಪಕ್ಷದ ಅಧಿಕೃತ ನಿಲುವಿನಿಂದ ನಾನು ಎಂದಿಗೂ ದೂರ ಸರಿದಿಲ್ಲ. ಈ ನಿಲುವಿನ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲʼʼ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಕೇರಳ ಸಾಹಿತ್ಯೋತ್ಸವದಲ್ಲಿ ಸ್ಪಷ್ಟಪಡಿಸಿದ್ದಾರೆ.

ಶಶಿ ತರೂರ್‌ (ಸಂಗ್ರಹ ಚಿತ್ರ)

ತಿರುವನಂತಪುರಂ, ಜ. 24: ಪಹಲ್ಗಾಮ್ ಭಯೋತ್ಪಾದಕ ದಾಳಿ (Pahalgam Terror Attack)ಗೆ ಪ್ರತಿಯಾಗಿ ನಡೆಸಲಾದ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ಬಗ್ಗೆ ಸಾರ್ವಜನಿಕವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದೇನೆಯೇ ಹೊರತು, ಪಕ್ಷದ ಅಧಿಕೃತ ನಿಲುವಿನಿಂದ ಎಂದಿಗೂ ಹಿಂದೆ ಸರಿದಿಲ್ಲ ಎಂದು ಕಾಂಗ್ರೆಸ್ (Congress) ಸಂಸದ ಶಶಿ ತರೂರ್ (Shashi Tharoor) ತಿಳಿಸಿದ್ದಾರೆ. ಕೇರಳ(Kerala) ಸಾಹಿತ್ಯೋತ್ಸವದಲ್ಲಿ ಮಾತನಾಡಿದ ತರೂರ್, ಈ ವಿಚಾರದಲ್ಲಿ ನನ್ನ ನಿಲುವು ದೃಢವಾಗಿದ್ದು, ಅದಕ್ಕಾಗಿ ತಮಗೆ ಯಾವುದೇ ಪಶ್ಚಾತ್ತಾಪವಿಲ್ಲ (unapologetic) ಎಂದಿದ್ದಾರೆ.

“ಸಂಸತ್ತಿನಲ್ಲಿ ಕಾಂಗ್ರೆಸ್‌ನ ಯಾವುದೇ ನಿಲುವನ್ನು ಯಾವ ಹಂತದಲ್ಲೂ ಉಲ್ಲಂಘಿಸಿಲ್ಲ. ತತ್ವದ ಆಧಾರದ ಮೇಲೆ ಸಾರ್ವಜನಿಕವಾಗಿ ಭಿನ್ನಾಭಿಪ್ರಾಯ ವ್ಯಕ್ತವಾದ ಏಕೈಕ ವಿಷಯವೆಂದರೆ ಅದು ಆಪರೇಷನ್ ಸಿಂದೂರ್. ಅದರಲ್ಲಿ ನನ್ನ ನಿಲುವು ದೃಢವಾಗಿದೆ ಮತ್ತು ಅದಕ್ಕಾಗಿ ನಾನು ಕ್ಷಮೆ ಕೇಳುವುದಿಲ್ಲ" ಎಂದು ತಿರುವನಂತಪುರಂ (Thiruvananthapuram) ಸಂಸದ ತರೂರ್ ಹೇಳಿದರು.

ಇತ್ತೀಚೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕೊಚ್ಚಿಗೆ ಭೇಟಿ ನೀಡಿದ್ದ ವೇಳೆ ತರೂರ್‌ಗೆ ಪಕ್ಷದಿಂದ ಸರಿಯಾದ ಗೌರವ ಸಿಕ್ಕಿಲ್ಲ ಮತ್ತು ರಾಜ್ಯದ ನಾಯಕರು ಪದೇ ಪದೆ ಅವರನ್ನು ಕಡೆಗಣಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಊಹಾಪೂಹಗಳ ನಡುವೆ ತರೂರ್ ಅವರಿಂದ ಈ ಹೇಳಿಕೆ ಬಂದಿದೆ.

ಹಿಮಾಚಲ ಪ್ರದೇಶದಲ್ಲಿ ಚಲಿಸುತ್ತಿದ್ದ ಬಸ್‌ ಪಕ್ಕದಲ್ಲೇ ಕುಸಿದ ಗುಡ್ಡ; 30 ಪ್ರಯಾಣಿಕರು ಪಾರು

ʼʼಭಾರತ ಅಭಿವೃದ್ಧಿಯತ್ತ ಗಮನ ಹರಿಸಿರುವಾಗ, ಪಾಕಿಸ್ತಾನ ಜತೆ ದೀರ್ಘಕಾಲದ ಸಂಘರ್ಷಕ್ಕೆ ಇಳಿಯಬಾರದು ಹಾಗೂ ಯಾವುದೇ ಕ್ರಮವು ಉಗ್ರರ ಶಿಬಿರಗಳ ಮೇಲೆ ದಾಳಿ ಮಾಡಲು ಮಾತ್ರ ಸೀಮಿತವಾಗಿಸಬಾರದು ಎಂದು ಅಭಿಪ್ರಾಯಪಟ್ಟಿದ್ದೆ. ನನಗೆ ಆಶ್ಚರ್ಯವಾಗಿದ್ದೇನೆಂದರೆ ನಾನು ಹೇಳಿದ ಹಾಗೆಯೇ ಕೇಂದ್ರ ಸರ್ಕಾರ ನಡೆದುಕೊಂಡಿದೆʼʼ ಎಂದು ತರೂರ್ ಹೇಳಿದ್ದಾರೆ.

‘ಭಾರತ ಸತ್ತರೆ ಯಾರು ಬದುಕುತ್ತಾರೆ?’ ಎಂಬ ಜವಾಹರಲಾಲ್ ನೆಹರು ಅವರ ಪ್ರಸಿದ್ಧ ಮಾತನ್ನು ಸ್ಮರಿಸಿದ ತರೂರ್, ರಾಷ್ಟ್ರದ ಭದ್ರತೆ ಮತ್ತು ಜಗತ್ತಿನಲ್ಲಿ ಭಾರತದ ಸ್ಥಾನಮಾನ ಅತ್ಯಂತ ಪ್ರಮುಖವೆಂದು ತಿಳಿಸಿದರು. “ಉತ್ತಮ ಭಾರತ ನಿರ್ಮಾಣದ ದಾರಿಯಲ್ಲಿ ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ ದೇಶದ ಮೂಲಭೂತ ಹಿತಾಸಕ್ತಿಗಳ ಪ್ರಶ್ನೆ ಬಂದಾಗ, ಭಾರತವೇ ಮೊದಲಾಗಬೇಕು” ಎಂದು ಅವರು ಹೇಳಿದರು.

ಆಂತರಿಕ ಭಿನ್ನಾಭಿಪ್ರಾಯ ಚರ್ಚೆಗಳ ನಡುವೆ, ಶಶಿ ತರೂರ್ ಶುಕ್ರವಾರ ದೆಹಲಿಯಲ್ಲಿ ಹೈಕಮಾಂಡ್ ಕರೆದಿದ್ದ ಪಕ್ಷದ ಸಭೆಯನ್ನು ಬಿಟ್ಟು, ಕೇರಳದಲ್ಲೇ ಉಳಿದು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ದಿನವೇ ತಿರುವನಂತಪುರಂನಲ್ಲಿ ಪ್ರಧಾನಿ ಮೋದಿ ರೋಡ್‌ಶೋ ಇದ್ದ ಕಾರಣಕ್ಕೆ, ತರೂರ್ ತಮ್ಮ ಕ್ಷೇತ್ರದಲ್ಲೇ ಇರಲು ಬಯಸಿದ್ದರು ಎಂದು ತಿಳಿದುಬಂದಿದೆ.

ಇದಕ್ಕೂ ಮುನ್ನ, ರಾಹುಲ್ ಗಾಂಧಿ ಅವರ ಕೊಚ್ಚಿ ಭೇಟಿ ವೇಳೆ ತಮಗೆ ಅಪಮಾನವಾಗಿದೆ ಎಂದು ತರೂರ್ ದೆಹಲಿ ಸಭೆಗೆ ಗೈರಾಗಿದ್ದಾರೆ ಮತ್ತು ರಾಜ್ಯ-ಕೇಂದ್ರ ನಾಯಕರ ಮೇಲಿನ ಅಸಮಾಧಾನವೂ ಈ ನಿರ್ಧಾರಕ್ಕೆ ಕಾರಣ ಎಂದು ವರದಿಗಳು ತಿಳಿಸಿದ್ದವು. ಈ ಬಗ್ಗೆ ಕಾಂಗ್ರೆಸ್ ಈವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪಕ್ಷದ ಮೂಲಗಳು, ಹೈಕಮಾಂಡ್‌ನ ಅನುಮತಿ ಪಡೆದುಕೊಂಡೇ ತರೂರ್ ಸಭೆಗೆ ಗೈರಾಗಿದ್ದರು ಮತ್ತು ತಮ್ಮ ಕ್ಷೇತ್ರದಲ್ಲಿನ ಪ್ರಧಾನಮಂತ್ರಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಸ್ಪಷ್ಟಪಡಿಸಿವೆ.