ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜೈಲಿನಿಂದ ಬಿಡುಗಡೆಯಾದರೂ ʼಜಿರಳೆʼ ನಾಯಕ ಸೌರವ್ ದಾಸ್‌ ಬೆಂಬಿಡದ ಸಂಕಷ್ಟ; ದೆಹಲಿಯ ವಿಳಾಸ ದಾಖಲೆ ಸಲ್ಲಿಸಲು ನ್ಯಾಯಾಲಯ ಆದೇಶ

Sourav Das: ಚುನಾವಣಾ ಆಯೋಗದ ಮುಖ್ಯಸ್ಥರ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಶಾಂತಿ ಒಪ್ಪಂದ ಉಲ್ಲಂಘನೆ ಪ್ರಕರಣಕ್ಕೆ ಸಿಜೆಪಿ ನಾಯಕರನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ದೆಹಲಿಯ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರು ಸಿಜೆಪಿ ವಕ್ತಾರ ಸೌರವ್ ದಾಸ್ ಅವರಿಗೆ ದೆಹಲಿಯಲ್ಲಿನ ತಮ್ಮ ನಿವಾಸದ ವಿಳಾಸ ಸಾಕ್ಷ್ಯ ನೀಡುವಂತೆ ಆದೇಶಿಸಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿಯ (Cockroach Janta Party) ವಕ್ತಾರರಾದ ಸೌರವ್ ದಾಸ್‌ (Sourav Das) ಅವರಿಗೆ ದೆಹಲಿಯ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (special executive magistrate) ಅವರು ದೆಹಲಿಯಲ್ಲಿನ (delhi) ತಮ್ಮ ವಿಳಾಸಕ್ಕೆ ಸಂಬಂಧಿಸಿದ ಸಾಕ್ಷ್ಯ ಒದಗಿಸುವಂತೆ ಆದೇಶಿಸಿದ್ದಾರೆ. ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಅವರ ವಿರುದ್ಧದ ಪ್ರತಿಭಟನೆ ವೇಳೆ ಶಾಂತಿ ಒಪ್ಪಂದ ಉಲ್ಲಂಘನೆ (peace bond violation case) ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಅಗತ್ಯ ದಾಖಲೆ ಸಲ್ಲಿಕೆಗೆ ದಾಸ್ ಅವರ ಪರ ವಕೀಲರ ತಂಡ ಸಮಯ ಕೇಳಿದ್ದರಿಂದ ಮುಂದಿನ ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಲಾಯಿತು.

ಪ್ರತಿಭಟನೆಗೆ ನಿರ್ಬಂಧ ವಿಧಿಸಲಾಗಿದ್ದ ದೆಹಲಿಯ ಜಂತರ್ ಮಂತರ್ ಪ್ರತಿಭಟನಾ ಸ್ಥಳಕ್ಕೆ ಅಕ್ಟೋಬರ್ 12ರಂದು ಸಿಜೆಪಿ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರು ಅಕ್ರಮವಾಗಿ ಪ್ರವೇಶಿಸಿದ ಬಳಿಕ ಅವರ ವಿರುದ್ಧ ಶಾಂತಿ ಒಪ್ಪಂದ ಉಲ್ಲಂಘನೆ ಪ್ರಕರಣವನ್ನು ದಾಖಲಿಸಲಾಯಿತು.

ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಹಿಮಾಂಶು ಭಾವು ಅಮೆರಿಕದಲ್ಲಿ ಬಂಧನ: ಭಾರತಕ್ಕೆ ಹಸ್ತಾಂತರಿಸಲು ಸಿದ್ಧತೆ

ಈ ಕುರಿತು ವಿಚಾರಣೆ ನಡೆಸುತ್ತಿರುವ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್, ಕಾಕ್ರೋಚ್ ಜನತಾ ಪಾರ್ಟಿಯ ಸಹ-ಸಂಯೋಜಕ ಸೌರವ್ ದಾಸ್ ಅವರು ದೆಹಲಿಯಲ್ಲಿ ವಾಸಿಸುತ್ತಿರುವುದಕ್ಕೆ ವಿಳಾಸವನ್ನು ದೃಢೀಕರಿಸುವ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕೆಂದು ಶುಕ್ರವಾರ ನಿರ್ದೇಶನ ನೀಡಿದರು.

ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರು ತಮ್ಮ ಜಾಮೀನುದಾರರೊಂದಿಗೆ ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರಾದರು. ಈ ಸಂದರ್ಭದಲ್ಲಿ ಸೌರವ್ ದಾಸ್ ಅವರ ದೆಹಲಿ ವಿಳಾಸವನ್ನು ಸಾಬೀತುಪಡಿಸಲು ಸಲ್ಲಿಸಿದ ದಾಖಲೆಗಳಲ್ಲಿ ಬಾಡಿಗೆ ಒಪ್ಪಂದ ಅಥವಾ ಗುತ್ತಿಗೆ ಪತ್ರ ಇಲ್ಲದಿರುವುದನ್ನು ನ್ಯಾಯಾಲಯ ಗಮನಿಸಿತ್ತು.

ಅಗತ್ಯ ದಾಖಲೆಗಳನ್ನು ಸಂಗ್ರಹಿಸಲು ಸಮಯ ನೀಡುವಂತೆ ಸೌರವ್ ದಾಸ್ ಅವರ ಪರ ವಕೀಲರು ಕೋರಿದ್ದರಿಂದ ಮ್ಯಾಜಿಸ್ಟ್ರೇಟ್ ಪ್ರಕರಣದ ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಿದರು. ದೆಹಲಿ ಪೊಲೀಸರ ಪರ ವಕೀಲರಾದ ಪ್ರಶಾಂತ್ ಪ್ರಕಾಶ್ ಮತ್ತು ಭೈರವ್ ದಾಸ್ ಅವರು ವಾದ ಮಂಡಿಸಿದರು.

ನೇಹಾ ಬೋರಾಗೆ ಹಿನ್ನಡೆ: ಶಾಂತಿ ಬಾಂಡ್ ನೋಟಿಸ್ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಪ್ರಕರಣಕ್ಕೆ ಸಂಬಂಧಿಸಿ ಒಂದು ವಾರ ನ್ಯಾಯಾಂಗ ಬಂಧನದಲ್ಲಿದ್ದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರು ತಲಾ 50,000 ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಜಾಮೀನು ಪತ್ರಗಳನ್ನು ಸಲ್ಲಿಸಿದ ಬಳಿಕ ಅಕ್ಟೋಬರ್ 21ರಂದು ಬಿಡುಗಡೆಯಾಗಿದ್ದರು. ಇದಕ್ಕೆ ಸಂಬಂಧಿಸಿದ ಷರತ್ತಿನ ಭಾಗವಾಗಿ ಅವರಿಬ್ಬರೂ ಸಾರ್ವಜನಿಕ ಶಾಂತಿಯನ್ನು ಕಾಪಾಡುವುದು, ಜಂತರ್ ಮಂತರ್ ಸ್ಥಳವನ್ನು ಅಧಿಕೃತವಾಗಿ ಪ್ರತಿಭಟನಾ ಪ್ರದೇಶವೆಂದು ಮರು-ಘೋಷಿಸುವವರೆಗೂ ಅಲ್ಲಿ ಪ್ರತಿಭಟನೆಗೆ ಕರೆ ನೀಡುವುದಿಲ್ಲ ಎಂದು ಲಿಖಿತ ಭರವಸೆ ನೀಡಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author