ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಹಿಮಾಂಶು ಭಾವು ಅಮೆರಿಕದಲ್ಲಿ ಬಂಧನ: ಭಾರತಕ್ಕೆ ಹಸ್ತಾಂತರಿಸಲು ಸಿದ್ಧತೆ
ಭಾರತದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್‌ಗಳಲ್ಲಿ ಒಬ್ಬನಾದ, ಹರಿಯಾಣ ಮೂಲದ ಹಿಮಾಂಶು ಭಾವು ಅಮೆರಿಕದ ಲಾಸ್ ವೇಗಾಸ್‌ನಲ್ಲಿ ಬಂಧನಕ್ಕೊಳಗಾಗಿದ್ದಾನೆ. ಅಮೆರಿಕದ ತನಿಖಾ ಸಂಸ್ಥೆಯಾದ ಎಫ್‌ಬಿಐ (FBI) ಮತ್ತು ವಲಸೆ ಹಾಗೂ ಕಸ್ಟಮ್ಸ್ ಜಾರಿ ಸಂಸ್ಥೆ (ICE) ಜಂಟಿ ಕಾರ್ಯಾಚರಣೆ ನಡೆಸಿ ಈತನನ್ನು ವಶಕ್ಕೆ ಪಡೆದುಕೊಂಡಿವೆ.
ಸಂಗ್ರಹ ಚಿತ್ರ -
ವಾಷಿಂಗ್ಟನ್: ಭಾರತದ ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್‌ಗಳಲ್ಲಿ ಒಬ್ಬನಾದ, ಹರಿಯಾಣ ಮೂಲದ ಹಿಮಾಂಶು ಭಾವು (Himanshu Bhau) ಅಮೆರಿಕದ ಲಾಸ್ ವೇಗಾಸ್‌ನಲ್ಲಿ ಬಂಧನಕ್ಕೊಳಗಾಗಿದ್ದಾನೆ. ಅಮೆರಿಕದ ತನಿಖಾ ಸಂಸ್ಥೆಯಾದ ಎಫ್‌ಬಿಐ (FBI) ಮತ್ತು ವಲಸೆ ಹಾಗೂ ಕಸ್ಟಮ್ಸ್ ಜಾರಿ ಸಂಸ್ಥೆ (ICE) ಜಂಟಿ ಕಾರ್ಯಾಚರಣೆ ನಡೆಸಿ ಈತನನ್ನು ವಶಕ್ಕೆ ಪಡೆದುಕೊಂಡಿವೆ. ಹರಿಯಾಣದ ರೋಹ್ಟಕ್ ಜಿಲ್ಲೆಯ ರಿಟೋಲಿ ಗ್ರಾಮದವನಾದ ಹಿಮಾಂಶು ಭಾವು ವಿರುದ್ಧ ಕೊಲೆ, ಕೊಲೆ ಯತ್ನ, ಹಫ್ತಾ ವಸೂಲಿ (ಸುಲಿಗೆ), ಅಪಹರಣ ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ 30ಕ್ಕೂ ಹೆಚ್ಚು ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಕೆಲವು ವರ್ಷಗಳ ಹಿಂದೆ ನಕಲಿ ಪಾಸ್‌ಪೋರ್ಟ್ ಬಳಸಿ ಭಾರತದಿಂದ ಪರಾರಿಯಾಗಿದ್ದ ಭಾವು, ದುಬೈ ಮತ್ತು ಪೋರ್ಚುಗಲ್ ಮೂಲಕ ಅಮೆರಿಕಕ್ಕೆ ತಲುಪಿದ್ದ. ವಿದೇಶದಲ್ಲೇ ತಲೆಮರೆಸಿಕೊಂಡಿದ್ದರೂ ಸಹ, ಸೋಶಿಯಲ್ ಮೀಡಿಯಾ ಮತ್ತು ವರ್ಚುವಲ್ ನಂಬರ್‌ಗಳ ಮೂಲಕ ದೆಹಲಿ, ಹರಿಯಾಣ ಹಾಗೂ ಪಂಜಾಬ್‌ಗಳಲ್ಲಿ ತನ್ನ ಶೂಟರ್‌ಗಳ ಜಾಲವನ್ನು ಈತ ನಿಯಂತ್ರಿಸುತ್ತಿದ್ದ. ಇತ್ತೀಚೆಗೆ ದೆಹಲಿಯ ಬರ್ಗರ್ ಕಿಂಗ್ ಔಟ್‌ಲೆಟ್‌ನಲ್ಲಿ ನಡೆದ ಹತ್ಯೆ ಹಾಗೂ ಯೂಟ್ಯೂಬರ್ ಎಲ್ವಿಶ್ ಯಾದವ್ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯ ಹಿಂದೆ ಈತನ ಗ್ಯಾಂಗ್ ಕೈವಾಡವಿತ್ತು ಎಂದು ಹೇಳಲಾಗಿದೆ.
ಹಿಮಾಂಶು ಭಾವು ಜೊತೆಗೆ ಭಾರತಕ್ಕೆ ಬೇಕಾಗಿದ್ದ ಮತ್ತೊಬ್ಬ ಕುಖ್ಯಾತ ಗ್ಯಾಂಗ್‌ಸ್ಟರ್ ನೀರಜ್ ಫರಿದ್ಪುರಿಯಾ ಎಂಬಾತನನ್ನೂ ಅಮೆರಿಕದ ಭದ್ರತಾ ಸಂಸ್ಥೆಗಳು ಬಂಧಿಸಿವೆ. ಈ ಇಬ್ಬರ ವಿರುದ್ಧವೂ ಈಗಾಗಲೇ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿತ್ತು. ಪ್ರಸ್ತುತ ಅಮೆರಿಕದಲ್ಲಿ ಬಂಧನದಲ್ಲಿರುವ ಈತನನ್ನು ಭಾರತಕ್ಕೆ ಕರೆತರಲು ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ
ಯಾರು ಈ ಹಿಮಾಂಶು ಭಾವು?
ಪ್ರಸ್ತುತ ಸುಮಾರು 24 ವರ್ಷ ವಯಸ್ಸಿನ ಹಿಮಾಂಶು, ಹರಿಯಾಣದ ರೋಹ್ಟಕ್ ಜಿಲ್ಲೆಯ ರಿಟೋಲಿ ಗ್ರಾಮದವನು. ಕೇವಲ 17ನೇ ವಯಸ್ಸಿನಲ್ಲಿ ತನ್ನ ಶತ್ರುವೊಬ್ಬನ ಕೊಲೆಗೆ ಯತ್ನಿಸುವ ಮೂಲಕ ಈತ ಅಪರಾಧ ಲೋಕಕ್ಕೆ ಕಾಲಿಟ್ಟಿದ್ದ. 2020 ರಲ್ಲಿ ಹಿಸಾರ್‌ನ ಬಾಲ ಸುಧಾರಣಾ ಗೃಹದಿಂದ ಇತರ ಕೈದಿಗಳೊಂದಿಗೆ ತಪ್ಪಿಸಿಕೊಂಡ ನಂತರ ಈತ ಪೂರ್ಣ ಪ್ರಮಾಣದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂದ್ದ. ದೆಹಲಿ ಮತ್ತು ಹರಿಯಾಣದಲ್ಲಿ ನಡೆದ ಹಲವಾರು ಹೈ ಪ್ರೊಫೈಲ್ ಗುಂಡಿನ ದಾಳಿ ಮತ್ತು ಕೊಲೆ ಪ್ರಕರಣಗಳಲ್ಲಿ ಹಿಮಾಂಶು ಭಾವು ಮತ್ತು ಅವರ ಗ್ಯಾಂಗ್ ಸದಸ್ಯರು ಭಾಗಿಯಾಗಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.